

ಮುಂಬೈ: ಹಿಂದಿಯಲ್ಲಿ ರಾಮಾಯಣ ಕುರಿತು ಒಂದು ಚಿತ್ರವಾಗಲಿದೆ ಎಂಬ ಸುದ್ದಿ ಇಂದು, ನಿನ್ನೆಯದಲ್ಲ. ಆ ಚಿತ್ರದಲ್ಲಿ ರಣಬೀರ್ ಕಪೂರ್, ರಾಮನಾಗಿ ಕಾಣಿಸಿಕೊಂಡರೆ, ಹೃತಿಕ್ ರೋಶನ್, ರಾವಣಾಗಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗಿತ್ತು. ಮೂಲಗಳ ಪ್ರಕಾರ, ಈ ಚಿತ್ರದಿಂದ ಹೃತಿಕ್ ರೋಶನ್ ಹೊರನಡೆದಿದ್ದು, ರಾವಣನ ಪಾತ್ರಕ್ಕೆ ಯಶ್ಗೆ ಆಫರ್ ಹೋಗಿದೆ ಎಂಬ ಗುಸುಗುಸು ಬಾಲಿವುಡ್ನಲ್ಲಿ ಕೇಳಿಬರುತ್ತಿದೆ.
ಈಗಾಗಲೇ ಕೆಲವು ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಹೃತಿಕ್ಗೆ ಇನ್ನಷ್ಟು ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಆಸಕ್ತಿ ಇಲ್ಲವಂತೆ. ಅದನ್ನು ನಿರ್ಮಾಪಕರಿಗೆ ನಯವಾಗಿಯೇ ಹೇಳಿರುವ ಅವರು, ಚಿತ್ರತಂಡದಿಂದ ಹೊರ ಬಂದಿದ್ದಾರಂತೆ. ಹಾಗಾದರೆ, ಅವರ ಬದಲಿ ಯಾರು? ಅವರ ಪಾತ್ರವನ್ನು ಯಾರಿಂದ ಮಾಡಿಸಬಹುದು ಎಂದು ಚಿತ್ರತಂಡದವರು ತಲೆ ಕೆಡಿಸಿಕೊಂಡಾಗ, ಅವರಿಗೆ ಹೊಳೆದಿದ್ದು ಕನ್ನಡಿಗ ಯಶ್ ಹೆಸರು.
ಯಶ್ ಇದೀಗ ಒಳ್ಳೊಳ್ಳೆಯ ಪಾತ್ರಗಳಿಗೆ ಹುಡುಕಾಟ ನಡೆಸಿದ್ದಾರೆ. ಅಷ್ಟೇ ಅಲ್ಲ, ರಾವಣನ ಪಾತ್ರಕ್ಕೆ ಅವರು ಸಖತ್ತಾಗಿ ಫೀಟ್ ಆಗುತ್ತಾರಂತೆ. ಹಾಗಾಗಿ, ಒಮ್ಮೆ ಅವರನ್ನು ಕೇಳಿಯೇ ಬಿಡೋಣ ಎಂದು ಯಶ್ ಅವರನ್ನು ನಿರ್ಮಾಪಕರಾದ ಮಧು ಮಂಟೇನಾ ಮುಂದಾಗಿದ್ದಾರಂತೆ. ಯಶ್ ಸಹ ಆಸಕ್ತಿ ತೋರಿಸಿದ್ದು, ಎಲ್ಲ ಅಂದುಕೊಂಡಂತೆ ಆದರೆ, ರಾಮಾಯಣದಲ್ಲಿ ರಾಮನಾಗಿ ರಣಬೀರ್ ಕಪೂರ್ ಮತ್ತು ರಾವಣನಾಗಿ ಯಶ್ ಕಾಣಿಸಿಕೊಂಡರೆ ಆಶ್ಚರ್ಯವಿಲ್ಲ ಎಂದು ಹೇಳಲಾಗುತ್ತಿದೆ.
ಆದರೆ, ಯಶ್ ಇದಕ್ಕೆ ಒಪ್ಪುತ್ತಾರಾ? ರಾವಣನಾಗಿ ನಟಿಸುತ್ತಾರಾ? ಎಂಬ ಪ್ರಶ್ನೆಗಳು ಎಲ್ಲರಲ್ಲೂ ಇದೆ. ಇದಕ್ಕೆ ಅವರೇ ಉತ್ತರಿಸಬೇಕು.