ರಣಬೀರ್ ಪಾರ್ಟಿಗೆ ಕರಣ್ ಜೋಹರ್ ಯಾಕೆ ಹೋದ್ರು?

Final - Karan Johar
Published on

ಇತ್ತೀಚೆಗಷ್ಟೇ ನೀತು ಕಪೂರ್ (ರಣಬೀರ್ ಕಪೂರ್ ಅವರ ತಾಯಿ) ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಈ ಪಾರ್ಟಿಯಲ್ಲಿ ಕರಣ್ ಸಹ ಭಾಗಿಯಾಗಿ ನಗುಮೊಗದಿಂದ ಕಾಣಿಸಿಕೊಂಡಿದ್ದು, ಅದರಿಂದ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು ಎಲ್ಲವೂ ಗೊತ್ತೇ ಇದೆ. ಇಷ್ಟಕ್ಕೂ ಕರಣ್ ಯಾಕೆ ಆ ಪಾರ್ಟಿಗೆ ಹೋಗಿದ್ದರು ಎಂಬ ವಿಷಯ ಇದೀಗ ಬಹಿರಂಗವಾಗಿದೆ.

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಬಾಲಿವುಡ್‍ನಲ್ಲಿ ಸ್ವಜನಪಕ್ಷಪಾತದ ಕುರಿತಾಗಿ ಸಾಕಷ್ಟು ಚರ್ಚೆಗಳಾಗಿದ್ದು, ಈ ಪೈಕಿ ಕರಣ್ ಜೋಹರ್ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಬಾಲಿವುಡ್‍ನಲ್ಲಿ ಕರಣ್ ನೆಪೋಟಿಸಂನ ಪ್ರೋತ್ಸಾಹಿಸುತ್ತಿದ್ದು, ಸ್ಟಾರ್ ಮಕ್ಕಳಿಗೆ ಮಾತ್ರ ಮಣೆ ಹಾಕುತ್ತಾರೆ ಎಂಬ ಆರೋಪವಿದೆ. ಅಷ್ಟೇ ಅಲ್ಲ, ಇದೇ ವಿಷಯವಾಗಿ ಅವರು ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಟ್ರೋಲ್ ಆಗುತ್ತಿದ್ದಾರೆ.

ಇದೆಲ್ಲದರಿಂದ ಬೇಸತ್ತ ಅವರು ಖಿನ್ನತೆಗೆ ಒಳಗಾಗಿದ್ದಾರೆ ಎಂಬ ಸುದ್ದಿಯೊಂದು ಇತ್ತೀಚೆಗೆ ಹರಡಿತ್ತು. ಅವರು ಯಾರ ಜತೆಗೂ ಮಾತನಾಡುತ್ತಿಲ್ಲ ಮತ್ತು ಇದೇ ವಿಷಯವಾಗಿ ಕೊರಗಿ ಅಳುತ್ತಿದ್ದಾರೆ ಎಂದು ಅವರ ಆಪ್ತರು ಮಾಧ್ಯಮದವರೊಂದಿಗೆ ಹೇಳಿಕೊಂಡಿದ್ದರು. ಆದರೆ, ಯಾವಾಗ ಕರಣ್ ಪಾರ್ಟಿಯಲ್ಲಿ ನಗುಮೊಗದಿಂದ ಕಾಣಿಸಿಕೊಂಡರೋ, ಟ್ರೋಲ್‍ಗಳು ಇನ್ನಷ್ಟು ಹೆಚ್ಚಾದವು. ಕರಣ್ ಮುಖದಲ್ಲಿ ಸ್ವಲ್ಪವೂ ಪಶ್ಚಾತ್ತಾಮ ಪಾಣಿಸುತ್ತಿಲ್ಲ, ಇದು ಕರಣ್ ಅವರಿಂದ ಇನ್ನೊಂದು ಚೀಪ್ ಆದ ಸ್ಟಂಟ್ ಎಂದು ಹಲವರು ಪ್ರತಿಕ್ರಯಿಸಿದ್ದರು.

ಈಗ ಈ ವಿಷಯವಾಗಿ ಅವರ ಆಪ್ತರು ಇನ್ನೊಮ್ಮೆ ಮಾತಾಡಿದ್ದಾರೆ. ಕರಣ್ ಯಾಕೆ ಅಂದು ಪಾರ್ಟಿಗೆ ಹೋಗಿದ್ದರು ಎಂದು ಹೇಳಿದ್ದಾರೆ. ಅವರು ಹೇಳುವಂತೆ, ಅಲ್ಲಿಗೆ ಹೋಗುವುದಕ್ಕೆ ಕರಣ್‍ಗೆ ಸುತಾರಾಂ ಇಷ್ಟವಿರಲಿಲ್ಲವಂತೆ. ಅಷ್ಟಕ್ಕೂ ಅದು ಪಾರ್ಟಿಯೇ ಆಗಿರಲಿಲ್ಲವಂತೆ. ನೀತೂ ಕೆಲವು ತಿಂಗಳ ಹಿಂದೆ ರಿಷಿ ಕಪೂರ್ ಅವರನ್ನು ಕಳೆದುಕೊಂಡು, ಇನ್ನೂ ಆ ದುಃಖದಿಂದ ಹೊರಬಂದಿಲ್ಲ. ಹಾಗಾಗಿ ಅವರನ್ನು ಖುಷಿಪಡಿಸುವುದಕ್ಕೆ ರಣಬೀರ್, ಒಂದು ಸಣ್ಣ ಗೆಟ್ ಟುಗೆದರ್ ಮಾಡಿದರಂತೆ.

ಆ ಗೆಟ್ ಟುಗೆದರ್‍ಗೆ ಕರಣ್‍ಗೂ ಕರೆದಿದ್ದರಂತೆ. ಆದರೆ, ಕರಣ್‍ಗೆ ಹೋಗುವುದಕ್ಕೆ ಮನಸ್ಸಿರಲಿಲ್ಲವಂತೆ. ಆದರೆ, ಎಲ್ಲರೂ ಒತ್ತಾಯ ಮಾಡಿದ್ದರಿಂದ, ಸ್ವಲ್ಪ ಹೊತ್ತು ಹೋಗಿ ಕೂತು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅದು ಸಹ ಇಷ್ಟು ದೊಡ್ಡ ವಿಷಯವಾಗಿದ್ದರ ಬಗ್ಗೆ ಅವರಿಗೆ ಇನ್ನಷ್ಟು ಬೇಸರವಾಗಿದೆ ಎಂದು ಅವರ ಆಪ್ತರು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net