

ಎರಡೂವರೆ ವರ್ಷಗಳ ಹಿಂದೆ ‘ಗಂಗೂಬಾಯಿ ಕಥೈವಾಡಿ’ ಚಿತ್ರದ ಘೋಷಣೆಯಾದಾಗಿನಿಂದ, ಆ ಚಿತ್ರದ ಬಗ್ಗೆ ಹಲವು ವಿವಾದಗಳು ಮುತ್ತಿಕೊಂಡಿವೆ. ಗಂಗೂಬಾಯಿ ಕುರಿತು ಚಿತ್ರ ಮಾಡಬಾರದು ಎಂದು ಹಲವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಈಗಲೂ ಅದು ಮುಂದುವರಿದಿದೆ. ಗಂಗೂಬಾಯಿ ದತ್ತುಪುತ್ರ ಎಂದು ಹೇಳಿಕೊಂಡು, ಇತ್ತೀಚೆಗಷ್ಟೇ ಒಬ್ಬರು ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ಕೊಡಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದರು. ತಮ್ಮ ತಾಯಿಯನ್ನು ಒಬ್ಬ ವೇಶ್ಯೆಯಾಗಿ, ಮಾಫಿಯಾ ರಾಣಿಯಾಗಿ ತೋರಿಸುವ ಮೂಲಕ, ಅವರ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯವನ್ನು ಮೂಡಿಸಲಾಗಿದೆ ಎಂದು ದೂರಿದ್ದರು.
ಎಲ್ಲ ಸರಿ, ಗಂಗೂಬಾಯಿ ವಿಚಾರವಾಗಿ ಯಾಕಿಷ್ಟು ವಿವಾದ ಎಂಬ ಪ್ರಶ್ನೆ ಸಹಜವೇ? ಗಂಗೂಬಾಯಿ ಮೂಲತಃ ಗುಜರಾತಿನವರು. ಪ್ರಿಯಕರನನ್ನು ನಂಬಿ ಮುಂಬೈಗೆ ಬಂದು ಮೋಸಕ್ಕೊಳಗಾಗಿ, ವೇಶ್ಯಾಗೃಹಕ್ಕೆ ಮಾರಲ್ಪಟ್ಟವರು. ಕ್ರಮೇಣ ಕಾಮಾಟಿಪುರ ಎಂಬ ರೆಡ್ಲೈಟ್ ಏರಿಯಾದಲ್ಲಿ ತನ್ನದೇ ವೇಶ್ಯಾಗೃಹ ಸ್ಥಾಪಿಸಿ, ವೇಶ್ಯೆಯರ ಹಕ್ಕುಗಳಿಗಾಗಿ ಹೋರಾಡಿದವರು. ವೇಶ್ಯೆಯರ ಮಕ್ಕಳಿಗೆ ಶಿಕ್ಷಣ ಸೇರಿ ಹಲವು ಸೌಲಭ್ಯಗಳು ಸಿಗಬೇಕು ಎಂದು ಧರಣಿ ಕೂತವರು. 70ರ ದಶಕದ ಹೊತ್ತಿಗೆ ಇತಿಹಾಸದ ಪುಟ ಸೇರಿದವರು.
ಹೀಗೆ ಮರೆತೇ ಹೋಗಿದ್ದ ಗಂಗೂಬಾಯಿ ಕಥೈವಾಡಿ ಪುನಃ ಜೀವಂತವಾಗಿದ್ದು, ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ ಪುಸ್ತಕದಿಂದ. ಜನಪ್ರಿಯ ಕ್ರೖೆಮ್ ಪತ್ರಕರ್ತ ಸೈಯ್ಯದ್ ಹುಸೇನ್ ಜೈದಿ, ಮುಂಬೈ ಭೂಗತಲೋಕದ ಕುರಿತಾಗಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಅದರಲ್ಲಿ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ ಕೂಡಾ ಒಂದು. ಈ ಪುಸ್ತಕದಲ್ಲಿ ಗಂಗೂಬಾಯಿ ಕಥೈವಾಡಿ ಕುರಿತು ಅಧ್ಯಾಯವೂ ಇದೆ. ಆ ಅಧ್ಯಾಯವನ್ನು ಓದಿದ ತಕ್ಷಣ, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ಯಾಕೆ ಗಂಗೂಬಾಯಿ ಕುರಿತು ಒಂದು ಚಿತ್ರ ಮಾಡಬಾರದು ಎಂದನಿಸಿತಂತೆ. ಆ ಅಧ್ಯಾಯವನ್ನು ಮೂಲವಾಗಿಟ್ಟುಕೊಂಡು, ಜತೆಗೆ ಇನ್ನಷ್ಟು ಅಧ್ಯಯನ ನಡೆಸಿ ಚಿತ್ರಕಥೆಗೆ ಒಂದು ರೂಪಕೊಟ್ಟು ಅವರು ‘ಗಂಗೂಬಾಯಿ ಕಥೈವಾಡಿ’ ಚಿತ್ರ ಮಾಡಿದ್ದಾರೆ. ಗಂಗೂಬಾಯಿ ಪಾತ್ರದಲ್ಲಿ ಕಾಣಿಸಿಕೊಂಡವರು ಆಲಿಯಾ ಭಟ್. ಮಿಕ್ಕಂತೆ ಅಜಯ್ ದೇವಗನ್, ವಿಜಯ್ ರಾಝå್, ಶಂತನು ಮಹೇಶ್ವರಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಈಗಾಗಲೇ ಚಿತ್ರವು ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದ್ದು, ಇಂದು ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.