ಭಾರಿ ಚರ್ಚೆ ಹುಟ್ಟು ಹಾಕಿದೆ ದೇವರ ಬಗ್ಗೆ ಕವಚ ಖ್ಯಾತಿಯ ಬಾಲನಟಿ ಮೀನಾಕ್ಷಿ ಮಾಡಿದ ಕಾಮೆಂಟ್​​! Meenakshi Anoop

Meenakshi Anoop
Published on

ತಿರುವನಂತಪುರ: ದೇವರು ಮತ್ತು ನಾಸ್ತಿಕತೆಯ ಮೇಲಿನ ನಂಬಿಕೆಯ ಬಗ್ಗೆ ಮಲಯಾಳಂ ನಟಿ ಮೀನಾಕ್ಷಿ ಅನೂಪ್​ ( Meenakshi Anoop ) ಮಾಡಿರುವ ಫೇಸ್​ಬುಕ್​ ಪೋಸ್ಟ್ ಎಲ್ಲರ ಗಮನ ಸೆಳೆಯುತ್ತಿದೆ. ದೇವರಿಗೆ ಹತ್ತಿರವೆಂದು ನಾವು ಭಾವಿಸುವ ಕೆಲವು ಭಕ್ತರು ನಿಜವಾದ ನಾಸ್ತಿಕರು ಎಂದು ನಟಿ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ಶಬರಿಮಲೆಯಲ್ಲಿ ಚಿನ್ನ ಕಳ್ಳತನ ಪ್ರಕರಣ ದೊಡ್ಡ ವಿವಾದವಾಗಿರುವ ಸಮಯದಲ್ಲೇ ನಟಿ ಹಂಚಿಕೊಂಡ ಪೋಸ್ಟ್ ಇದೀಗ ಚರ್ಚೆಯ ವಿಷಯವಾಗುತ್ತಿದೆ.

ಫೇಸ್​ಬುಕ್​ ಪೋಸ್ಟ್​ನಲ್ಲಿ ಏನಿದೆ?

ಆತ ನಾಸ್ತಿಕನೇ? ಈ ಪ್ರಶ್ನೆ 'ತರ್ಕಬದ್ಧವಾಗಿದ್ದರೆ, ಉತ್ತರ ತರ್ಕಬದ್ಧ. ಆದರೆ, ನಿಜವಾದ ನಾಸ್ತಿಕ ಯಾರು? ದೇವರಿಗೆ ಹತ್ತಿರ ಎಂದು ನಾವು ಭಾವಿಸುವ ಕೆಲವು ಭಕ್ತರು ದೇವರಿಂದಲೇ ಕದಿಯುವಾಗ ಅಥವಾ ದೇವರ ಮಕ್ಕಳು ಎನಿಸಿಕೊಂಡವರು ಮಕ್ಕಳು ಸೇರಿದಂತೆ ಜನರ ಮನಸ್ಸಿಗೆ ಹಾನಿಯುಂಟು ಮಾಡುವಾಗ ಯಾವುದೇ ದೇವರು ಅವರನ್ನು ಅಥವಾ ಅವರ ಸಂಬಂಧಿಕರನ್ನು ಶಿಕ್ಷಿಸಲು ಹೋಗುವುದಿಲ್ಲ ಎಂದು ಅವರಿಗೆ ನಿಖರವಾಗಿ ತಿಳಿದಿದೆ. ನಾವು ನಂಬಿಕೆಯುಳ್ಳವರೆಂದು ಪರಿಗಣಿಸುವ ಕೆಲವರು ವಾಸ್ತವವಾಗಿ ನಾಸ್ತಿಕರು. ತಮ್ಮನ್ನು ತಾವು ಆಸ್ತಿಕರು ಎಂದು ಕರೆದುಕೊಳ್ಳುವವರು ಹೆಚ್ಚು ತೊಂದರೆ ಉಂಟುಮಾಡಿದ್ದಾರೆಂದು ನನಗೆ ತಿಳಿದಿಲ್ಲ. ಆದರೆ, ವೈಜ್ಞಾನಿಕ ಅರಿವು ಜೀವನದ ಗುಣಮಟ್ಟವನ್ನು ಸುಧಾರಿಸಲು ಮತ್ತು ನನ್ನ ಸುತ್ತಮುತ್ತಲಿನ ಪ್ರದೇಶಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ನನಗೆ ತುಂಬಾ ಸಹಾಯ ಮಾಡುತ್ತದೆ. ಆದರೆ, ನನ್ನ ಸುತ್ತಲಿನ ಇತರರಿಗೆ ಯಾವುದೇ ತೊಂದರೆಯಾಗದಂತೆ ನಾನು ಜಾಗರೂಕನಾಗಿರುತ್ತೇನೆ. ಧಾರ್ಮಿಕ ಭಾವನೆಗಳು, ದೇವರ ಭಾವನೆಗಳು ಮತ್ತು ಬೇರೇನೂ ಇಲ್ಲ ಎಂದು ಮೀನಾಕ್ಷಿ ಅನೂಪ್​ ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ.

ಮೀನಾಕ್ಷಿ ಅನೂಪ್​ ಅವರು ಬರೆದುಕೊಂಡಿರುವ ಈ ಮಾರ್ಮಿಕ ಪೋಸ್ಟ್​ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆಸ್ತಿಕರು ಎಂದು ಮುಖವಾಡ ಧರಿಸುವವರಿಂದಲೇ ದೇವಸ್ಥಾನದಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಅರ್ಥದಲ್ಲಿ ಮೀನಾಕ್ಷಿ ಬರೆದುಕೊಂಡಿದ್ದಾರೆ. ಈ ಬರಹ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಇತ್ತೀಚಿನ ವಿವಾದದ ಕಡೆ ಬೊಟ್ಟು ಮಾಡಿದೆ. ಅಂದಹಾಗೆ, ಮೀನಾಕ್ಷಿ ಅವರು ನಟ ಶಿವರಾಜ್​ಕುಮಾರ್​ ನಟನೆಯ ಕವಚ ಸಿನಿಮಾದಲ್ಲಿ ಬಾಲನಟಿಯಾಗಿ ಮಿಂಚಿದರು.

ಅಯ್ಯಪ್ಪ ಸ್ವಾಮಿ ದೇವಸ್ಥಾನ ವಿವಾದವೇನು?

2019ರಲ್ಲಿ ಶಬರಿಮಲೆ ದೇವಸ್ಥಾನದ ದ್ವಾರಪಾಲಕರ ವಿಗ್ರಹಗಳಿಗೆ ಚಿನ್ನ ಲೇಪನ ಮಾಡಲು ಚೆನ್ನೈ ಮೂಲದ ಸ್ಮಾರ್ಟ್​ ಕ್ರಿಯೇಷನ್ಸ್​ ಹೆಸರಿನ ಕಂಪನಿ ಒಂದಕ್ಕೆ ಗುತ್ತಿಗೆ ನೀಡಲಾಗಿತ್ತು. ಕಂಪನಿಯ ಮಾಲೀಕ ಉನ್ನಿಕೃಷ್ಣನ್​ ಪೊಟ್ಟಿ ಎಂಬುವರು ವಿಗ್ರಹಗಳಿಗೆ ಸೇವೆಯ ರೂಪದಲ್ಲಿ ಉಚಿತವಾಗಿ ಚಿನ್ನ ಲೇಪನ ಮಾಡುತ್ತೇನೆಂದು ಕೇರಳದ ಟ್ರಾವೆಂಕೂರ್ ದೇವೊಸ್ವಂ ಮಂಡಳಿಗೆ (ಟಿಡಿಬಿ) ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಕಂಪನಿಗೆ ಟೆಂಡರ್​ ನೀಡಲಾಗಿತ್ತು. ಈ ಕೆಲಸಕ್ಕಾಗಿ 2019ರ ಜು. 19ರಲ್ಲಿ ಚಿನ್ನದ ಕವಚಗಳನ್ನು ತೆಗೆದು ಅವುಗಳನ್ನು ತೂಕ ಹಾಕಿದಾಗ 42.8 ಕೆಜಿ ತೂಕ ಇತ್ತು. ಆದರೆ, ಸ್ಮಾರ್ಟ್​ ಕ್ರಿಯೇಷನ್ಸ್​ ಕಂಪನಿಯ ವರ್ಕ್​ಶಾಪ್​ಗೆ ತಲುಪುವಷ್ಟರಲ್ಲಿ 38.25 ಕೆಜಿ ಚಿನ್ನ ಇತ್ತು. ಅಂದರೆ, ಬರೋಬ್ಬರಿ 4.54 ಕೆಜಿ ಚಿನ್ನ ನಾಪತ್ತೆಯಾಗಿತ್ತು. ಇಷ್ಟೇಲ್ಲ ಆದರೂ ಇದೀಗ ಮತ್ತೆ ಚಿನ್ನದ ಮರು ಲೇಪನ ಕಾರ್ಯವನ್ನು ಅದೇ ಕಂಪನಿಗೆ ವಹಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಕೇರಳ ಹೈಕೋರ್ಟ್ ವಿಶೇಷ ತನಿಖಾ ತಂಡದ ರಚನೆಗೆ ಸೂಚನೆ ನೀಡಿದ್ದು, ಉನ್ನಿಕೃಷ್ಣನ್​ ಪೊಟ್ಟಿ ಅವರು ಚಿನ್ನವನ್ನು ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೇ ಅವರನ್ನು ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net