

ಬಾಲಿವುಡ್ ನಟಿ ಶ್ರೀದೇವಿ ತನ್ನ ಅಂದ ಮತ್ತು ಚೆಂದದ ಮೂಲಕವೇ ಭಾರತೀಯ ಸಿನಿಮಾರಂಗವನ್ನು ಆಳಿದವರು. ಕೋಟ್ಯಂತರ ಭಾರತೀಯರ ಹೃದಯಕ್ಕೆ ಲಗ್ಗೆ ಇಟ್ಟವರು. 1980 ಮತ್ತು 90ರ ಕಾಲಘಟ್ಟದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದವರು. ನಾಯಕರ ಕಾಲ್ಶೀಟ್ ಸಿಕ್ಕಷ್ಟು ಸುಲಭವಾಗಿ, ಶ್ರೀದೇವಿ ಯಾರಿಗೂ ಸಿಗುತ್ತಿರಲಿಲ್ಲ. ಕಥೆಯ ಮೂಲಕವೇ ಅವರನ್ನು ಸೆಳೆದುಕೊಳ್ಳಬೇಕಿತ್ತು. ಅದೇ ರೀತಿ ಅಮಿತಾಬ್ ಬಚ್ಚನ್ ಸಹ ಟಾಪ್ ನಟ. ಅವರೊಂದಿಗೆ ನಟಿಸುವ ಅವಕಾಶ ಸಿಕ್ಕರೆ ಸಾಕು ಎಂದುಕೊಳ್ಳುತ್ತಿದ್ದ್ ನಟಿಯರೆಷ್ಟೋ! ಹೀಗಿರುವಾಗ ಅಮಿತಾಬ್ ಅವರ ಹಲವು ಸಿನಿಮಾಗಳಿಗೆ ನಾಯಕಿಯಾಗಿ ನಟಿಸುವ ಚಾನ್ಸ್ ಸಿಕ್ಕಿದ್ದನ್ನು ಮುಲಾಜಿಲ್ಲದೆ ತಿರಸ್ಕರಿಸಿದ್ದರು ಶ್ರೀದೇವಿ! ಯಾಕೆ?
ಹೌದು, ಆ ಚಿತ್ರದಲ್ಲಿ ಯಾವುದೇ ಹೀರೋ ಇರಲಿ, ಬಿಡಲಿ. ಶ್ರೀದೇವಿಗೆ ತಾನು ನಟಿಬೇಕಿರುವ ಚಿತ್ರದಲ್ಲಿ ನಾಯಕನಿಗೆ ಸರಿಸಮನಾದ ತೂಕದ ಪಾತ್ರವಿದ್ದರಷ್ಟೇ ಆಯ್ದುಕೊಳ್ಳುತ್ತಿದ್ದರು. ಅದು ಅಮಿತಾಬ್ ಸಿನಿಮಾಕ್ಕೂ ಅನ್ವಯವಾಗುತ್ತಿತ್ತು. ಹಾಗಾಗಿಯೇ ಮುಲಾಜಿಲ್ಲದೆ, ಹಿಂದೆ ಸರಿದಿದ್ದರು. ಆ ಕಾರಣಕ್ಕೆ ಸಿನಿಮಾ ನಿರ್ದೇಶಕರು ಶ್ರೀದೇವಿ ಅಂದರೆ ನಡುಗುತ್ತಿದ್ದರು. ಶಶಿ ಕಪೂರ್ ಜತೆಗೂ ಅಂಥ ಸಂದರ್ಭ ಎದುರಾಗಿತ್ತು. ಅಂದರೆ ಅಜೂಬಾ ಸಿನಿಮಾಕ್ಕೆ ಶ್ರೀದೇವಿಯನ್ನು ಅಪ್ರೋಚ್ ಮಾಡಲಾಗಿತ್ತಾದರೂ, ತಮ್ಮ ಪಾತ್ರ ಕೇಳಿ ನಟಿಸಲೊಲ್ಲೆ ಎಂದಿದ್ದರು. ಆ ಬಳಿಕ ಮತ್ತೋರ್ವ ಬಾಲಿವುಡ್ ನಟಿ ಡಿಂಪಲ್ ಕಪಾಡಿಯಾ ಆ ಪಾತ್ರ ನಿಭಾಯಿಸಿದ್ದರು. ಅನಿಲ್ ಕಪೂರ್ ಜತೆಗೆ ಬೇಟಾ ಸಿನಿಮಾ ಸಹ ಕೈ ಬಿಟ್ಟಿದ್ದರು. ಅದು ಮಾಧುರಿ ದೀಕ್ಷಿತ್ ಪಾಲಾಗಿತ್ತು.
ಹಾಗಂತ ಅಮಿತಾಬ್ ಜತೆ ಶ್ರೀದೇವಿ ಸಿನಿಮಾ ಮಾಡೇ ಇಲ್ವಾ? ಹಾಗೇನಿಲ್ಲ, ಇಂಕ್ವಿಲಾಬ್, ಆಖೀರ್ ರಾಸ್ತಾ, ಖುದಾ ಗವಾ ಸಿನಿಮಾಗಳಲ್ಲಿ ಅಮಿತಾಬ್ ಮತ್ತು ಶ್ರೀದೇವಿ ಜೋಡಿ ಒಂದಾಗಿತ್ತು. ಕೊನೆಯದಾಗಿ 2012ರಲ್ಲಿ ಶ್ರೀದೇವಿ ಮುಖ್ಯಭೂಮಿಕೆ ನಿಭಾಯಿಸಿದ್ದ ಇಂಗ್ಲಿಷ್ ವಿಂಗ್ಲಿಷ್ ಸಿನಿಮಾದಲ್ಲಿ ಅಮಿತಾಬ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. (ಏಜೆನ್ಸೀಸ್)