ಅಮಿತಾಭ್ ಮೊಮ್ಮಗ ಹೀರೋ, ಎಂಟ್ರಿ ಯಾವಾಗ ಸಾರ್?’

pic tsdgv
Published on

ಕೆಲವು ತಿಂಗಳುಗಳ ಹಿಂದೆ, ಅಮಿತಾಭ್ ಬಚ್ಚನ್ ತಮ್ಮ ಮೊಮ್ಮಗ (ಮಗಳು ಶ್ವಏತಾ ಅವರ ಮಗ) ಅಗಸ್ತ್ಯ ಜತೆಗೆ ಜಿಮ್ ಮಾಡುತ್ತಿರುವ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆಗಲೇ ಹಲವರು, ‘ಚಿತ್ರರಂಗಕ್ಕೆ ಮೊಮ್ಮಗನ ಎಂಟ್ರಿ ಯಾವಾಗ ಸಾರ್?’ ಎಂದು ಪ್ರಶ್ನಿಸಿದ್ದರು. ಇನ್ನೂ ಕೆಲವರು, ಸದ್ಯದಲ್ಲೇ ಅಗಸ್ತ್ಯ ಚಿತ್ರರಂಗಕ್ಕೆ ಬರುವುದು ನಿಶ್ಚಿತ ಎಂದು ನಿರ್ಧರಿಸಿದ್ದರು. ಅದೀಗ ನಿಜವಾಗಿದೆ.

ಅಂತಾರಾಷ್ಟ್ರೀಯ ಕಾಮಿಕ್ಸ್ ‘ಆರ್ಚಿ’ಯನ್ನಾಧರಿಸಿ, ‘ಜಿಂದಗಿ ಮಿಲೇನಾ ದೊಬಾರಾ’ ಖ್ಯಾತಿಯ ಜೋಯಾ ಅಖ್ತರ್, ನೆಟ್​ಫ್ಲಿಕ್ಸ್​ಗಾಗಿ ಒಂದು ಚಿತ್ರ ನಿರ್ದೇಶಿಸಲಿದ್ದಾರೆ ಎಂದು ನೆಟ್​ಫ್ಲಿಕ್ಸ್​ನವರು ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಿದ್ದಾರೆ. ಯಾವಾಗ ಈ ಘೋಷಣೆಯಾಯಿತೋ, ಆಗಿನಿಂದ ಅಗಸ್ಱ ಹೆಸರು ಕೇಳಿಬರುತ್ತಿದೆ. ಆರ್ಚಿ ಪಾತ್ರವನ್ನು ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಖಾನ್ ಮಾಡುತ್ತಾರೆ ಎಂದು ಮೊದಲು ಸುದ್ದಿಯಾಗಿತ್ತು. ಈಗ ಅದು ಸುಳ್ಳಾಗಿದ್ದು, ಇಬ್ರಾಹಿಂ ಬದಲು ಅಗಸ್ತ್ಯ ಹೆಸರು ಬಲವಾಗಿ ಕೇಳಿಬರುತ್ತಿದೆ. ಆದರೆ, ಅಗಸ್ತ್ಯ ಆಗಲೀ, ಚಿತ್ರತಂಡದವರಾಗಲೀ ಈ ವಿಷಯವನ್ನು ಖಚಿತಪಡಿಸಿಲ್ಲ.

ವಿಶೇಷವೆಂದರೆ, ಈ ಚಿತ್ರದ ಮೂಲಕ ಇನ್ನೂ ಇಬ್ಬರು ಸ್ಟಾರ್ ಮಕ್ಕಳು ಎಂಟ್ರಿ ಕೊಡುತ್ತಿದ್ದಾರೆ. ಶಾರೂಖ್ ಖಾನ್ ಮಗಳು ಸುಹಾನಾ ಖಾನ್ ಹಾಗೂ ಬೋನಿ ಕಪೂರ್ ಮತ್ತು ಶ್ರೀದೇವಿ ಅವರ ಎರಡನೆಯ ಮಗಳು ಖುಷಿ ಕಪೂರ್ ಸಹ ಈ ಚಿತ್ರಕ್ಕಾಗಿ ಬಣ್ಣ ಹಚ್ಚುತ್ತಾರಂತೆ. ಈ ಚಿತ್ರವು ಆರ್ಚಿ ಎಂಬ ಕಾಲೇಜು ಯುವಕ ಮತ್ತು ಬೆಟ್ಟಿ, ವೆರೋನಿಕಾ ಎಂಬ ಯುವತಿಯರ ಸುತ್ತ ನಡೆಯುತ್ತದೆ. ಈ ಪೈಕಿ ಆರ್ಚಿ ಪಾತ್ರವನ್ನು ಅಗಸ್ಱ ಮಾಡಿದರೆ, ಬೆಟ್ಟಿ ಪಾತ್ರವನ್ನು ಸುಹಾನಾ ಮತ್ತು ವೆರೋನಿಕಾ ಪಾತ್ರವನ್ನು ಖುಷಿ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net