

ಬೆಂಗಳೂರು: ರಕ್ಷಿತ್ ಶೆಟ್ಟಿ ಜತೆಗೆ ಬ್ರೇಕ್ ಅಪ್ ಮಾಡಿಕೊಂಡಿದ್ದು ಭಾರಿ ಸುದ್ದಿ ಮಾಡಿ ಕೊನೆಗೆ ಅದರಿಂದ ಹೊರಬರಲು ಸಾಕಷ್ಟು ಹೆಣಗಾಡಿದ್ದ ನಟಿ ರಶ್ಮಿಕಾ ಮಂದಣ್ಣ ಇದೀಗ ಡೇಟಿಂಗ್ ಬಗ್ಗೆ ಮಾತನಾಡಿದ್ದಾರೆ. ಸದಾ ಒಂದಲ್ಲೊಂದು ವಿಷಯಗಳ ಬಗ್ಗೆ ಸುದ್ದಿಯಾಗುತ್ತಲೇ ಇರುವ ಈ ಬೆಡಗಿ ಇದೀಗ ಡೇಟಿಂಗ್ ಕುರಿತಂತೆ ಮಾತನಾಡಿದ್ದು, ಇದು ಇವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ತೆಲುಗು, ತಮಿಳು ಮಾತ್ರವಲ್ಲದೇ ಹಿಂದಿಯಲ್ಲೂ ಸಾಕಷ್ಟು ಸಿನಿಮಾಗಳನ್ನು ಕೈಯಲ್ಲಿ ಹಿಡಿದುಕೊಂಡಿರುವ ರಶ್ಮಿಕಾ, ಇದರ ನಡುವೆಯೂ ಕೆಲವೊಂದು ಖಾಸಗಿ ವಿಷಯಗಳಿಗೆ ಸಂಬಂಧಿಸಿದಂತೆ ಸುದ್ದಿಯಲ್ಲಿ ಇರುತ್ತಾರೆ. ಇವರ ಪರ್ಸನಲ್ ವಿಷಯಗಳನ್ನು ಕೆದಕುವುದು ಎಂದರೆ ಕೆಲವರಿಗೆ ಬಹಳ ಇಷ್ಟ, ಅದೇ ರೀತಿ ಕೇಳಿದ ಪ್ರಶ್ನೆಗಳಿಗೆ ಚಟಪಟ ಎಂದು ಉತ್ತರಿಸುತ್ತಾ ಕೇಳುಗರ ಬಾಯನ್ನು ಮುಚ್ಚಿಸುವಲ್ಲಿ ರಶ್ಮಿಕಾ ನಿಸ್ಸೀಮರು.
ಇದೀಗ ಅವರ ಡೇಟಿಂಗ್ ವಿಷಯಕ್ಕೆ ಬರುವುದಾದರೆ, ‘ನಿಮಗೆ ಇನ್ನೂ 25 ವರ್ಷ ವಯಸ್ಸು. ನಿಮಗಿಂತ ಚಿಕ್ಕ ವಯಸ್ಸಿನ ಹುಡುಗನ ಜತೆ ಡೇಟಿಂಗ್ ಮಾಡೋ ಚಾನ್ಸ್ ಸಿಕ್ರೆ ಏನ್ ಮಾಡ್ತೀರಿ’ ಎಂದು ಪ್ರಶ್ನೆ ಎದುರಾಯಿತು. ಆಗ ಹಿಂದೆ ಮುಂದೆ ನೋಡದ ರಶ್ಮಿಕಾ, ಅದರಲ್ಲೇನಿದೆ? ಡೇಟಿಂಗ್‌ಗೆಲ್ಲಾ ವಯಸ್ಸು ಮುಖ್ಯವಾಗೋದೇ ಇಲ್ಲ, ವ್ಯಕ್ತಿ ಮುಖ್ಯವಾಗುತ್ತಾರೆ ಅಷ್ಟೇ. ನನಗೆ ಒಬ್ಬ ಹುಡುಗ ಇಷ್ಟ ಆದರೆ ಅವನು ನನಗಿಂತ ಚಿಕ್ಕವನೋ ದೊಡ್ಡವನೋ ಅನ್ನೋದೆಲ್ಲ ಮ್ಯಾಟರ್ ಆಗಲ್ಲ. ಆ ಹುಡುಗ ಜೊತೆಗಿದ್ರೆ ನನಗೆ ನನ್ನ ಬಗ್ಗೆ ಗುಡ್ ಫೀಲ್ ಬರಬೇಕು. ಅವರು ನನ್ನನ್ನ ಬದಲಾಯಿಸಲು ಪ್ರಯತ್ನಿಸಬಾರದು. ಇರುವ ಹಾಗೇ ಒಪ್ಪಿಕೊಳ್ಳಬೇಕು. ಇಂಥ ಸಣ್ಣ ಸಣ್ಣ ವಿಷಯಗಳೇ ನನಗೆ ಮಹತ್ವದ್ದು ಅನಿಸುತ್ತೆ. ಅದು ಬಿಟ್ಟ ಈ ವಯಸ್ಸು, ಅವನು ದೊಡ್ಡವನಾ ಚಿಕ್ಕವನಾ ಅನ್ನೋದೆಲ್ಲ ದೊಡ್ಡ ವಿಷ್ಯ ಆಗಲ್ಲ' ಎಂದು ಹೇಳಿ ಕೇಳುಗರ ಬಾಯನ್ನು ಮುಚ್ಚಿಸಿದ್ದಾರೆ. ಇವರ ಮಾತಿಗೆ ಹಲವರು ಶಹಭಾಸ್‌ಗಿರಿ ಹೇಳಿದರೂ, ಯಾರಾದರೂ ಚಿಕ್ಕ ವಯಸ್ಸಿನ ಹುಡುಗನ ಜತೆ ಡೇಟಿಂಗ್ ಮಾಡುತ್ತಿದ್ದೀರಾ ಎಂಬ ನೇರಾನೇರ ಪ್ರಶ್ನೆಯನ್ನೂ ಈ ನಟಿಗೆ ಕೇಳುತ್ತಿದ್ದಾರೆ.