ವ್ಹೀಲ್​ಚೇರ್ ಮೇಲೊಬ್ಬ ರೋಮಿಯೋ

wheel-removebg-preview
Published on

ಬೆಂಗಳೂರು: ‘ವ್ಹೀಲ್​ಚೇರ್ ರೋಮಿಯೋ’ ಎಂಬ ಚಿತ್ರದ ಟ್ರೇಲರ್ ಕಳೆದೆರೆಡು ದಿನಗಳಿಂದ ಬಹಳ ಸುದ್ದಿಯಲ್ಲಿದೆ. ಅದಕ್ಕೆ ಕಾರಣ, ಚಿತ್ರದ ಕಥೆ. ಅಂಗವಿಕಲ ಮತ್ತು ಅಂಧ ವೇಶ್ಯೆ ನಡುವೆ ನಡೆಯುವ ಪ್ರೇಮಕಥೆ ಇದಾಗಿದ್ದು, ನಟರಾಜ್ ಎನ್ನುವವರು ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆದ ಒಂದು ಘಟನೆಯನ್ನಾಧರಿಸಿ ಈ ಕಥೆ ಮಾಡಿರುವುದಾಗಿ ಹೇಳುತ್ತಾರೆ ನಟರಾಜ್. ಅವರು ಕೆಲವು ವರ್ಷಗಳ ಹಿಂದೆ ನ್ಯಾಷನಲ್ ಜಿಯೋಗ್ರಫಿಕ್​ನಲ್ಲಿ ‘ಟಬೂ’ ಎಂಬ ಕಾರ್ಯಕ್ರಮ ನೋಡಿದ್ದರಂತೆ. ‘ಆ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದಲ್ಲಿ ತಂದೆಯೊಬ್ಬ ತನ್ನ ಅಂಗವಿಕಲ ಮಗನನ್ನು ರೆಡ್​ಲೈಟ್ ಏರಿಯಾಗೆ ಕರೆದುಕೊಂಡು ಹೋಗುತ್ತಾನೆ. ಇನ್ನೊಮ್ಮೆ ಸಂಭಾಷಣೆಕಾರರಾದ ಪ್ರಶಾಂತ್ ರಾಜಪ್ಪ, ಒಬ್ಬ ಅಂಧ ವೇಶ್ಯೆಯ ಬಗ್ಗೆ ಒಂದು ಘಟನೆ ಹೇಳಿದ್ದರು. ಈ ಎರಡೂ ಘಟನೆಗಳು ನನ್ನ ಮನಸ್ಸು ಕಲಕಿದ್ದವು. ಇವೆರಡೂ ಘಟನೆಗಳನ್ನು ಮಿಕ್ಸ್ ಮಾಡಿ ಕಥೆ ಮಾಡಿದ್ದೇನೆ’ ಎನ್ನುತ್ತಾರೆ ನಟರಾಜ್.

ಪ್ರತಿಯೊಬ್ಬರಲ್ಲೂ ಒಂದು ಕೊರತೆ ಇರುತ್ತದೆ, ಅದನ್ನೇ ನೆನಪಿಸಿಕೊಂಡು ಕೊರಗುತ್ತಾ ಕೂರುವ ಬದಲು ಅದನ್ನು ಮೀರಬೇಕು ಎಂಬ ಸಂದೇಶವಿರುವ ಈ ಚಿತ್ರದಲ್ಲಿ ನಟಿಸುವುದಕ್ಕೆ ಬಹಳಷ್ಟು ಹೀರೋಗಳು ಒಪ್ಪಲಿಲ್ಲವಂತೆ. ಕಾರಣ, ಚಿತ್ರದ ಪೂರ್ತಿ ವ್ಹೀಲ್​ಚೇರ್ ಮೇಲೆ ಕುಳಿತುಕೊಳ್ಳಬೇಕು. ಆಗ ರಾಮ್​ಚೇತನ್ ಹೀರೋ ಆಗುವುದಕ್ಕೆ ಒಪ್ಪಿಕೊಂಡರಂತೆ. ನಾಯಕಿಯಾಗಿ ಮಯೂರಿ ಇದ್ದಾರೆ. ಸುಚೇಂದ್ರ ಪ್ರಸಾದ್, ರಂಗಾಯಣ ರಘು, ತಬಲಾ ನಾಣಿ, ಗಿರಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ವೆಂಕಟಾಚಲಯ್ಯ ನಿರ್ವಿುಸಿದ್ದು, ಬಿ.ಜೆ. ಭರತ್ ಸಂಗೀತ ಸಂಯೋಜಿಸಿ ದ್ದಾರೆ. ಚಿತ್ರದ ಕೆಲಸಗಳೆಲ್ಲ ಮುಗಿದಿದ್ದು, ಸೆನ್ಸಾರ್ ಆಗಿ ಬಿಡುಗಡೆ ಆಗುವುದಷ್ಟೇ ಬಾಕಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net