ಇಂದಿನಿಂದ ಪ್ರೈಂನಲ್ಲಿ ಯುವರತ್ನ ಹವಾ ಬಿಡುಗಡೆಯಾದ ಒಂದೇ ವಾರದಲ್ಲಿ ಓಟಿಟಿಗೆ...

Yuvaratna Final
Published on

ಬೆಂಗಳೂರು: ಪವರ್​​ಸ್ಟಾರ್ ಪುನೀತ್ ರಾಜ್​ಕುಮಾರ್ ಅಭಿನಯದ ಏಪ್ರಿಲ್ 1 ರಂದು ಬಿಡುಗಡೆಯಾಗಿದ್ದ ಯುವರತ್ನ ಸಿನಿಮಾ ಅಮೆಜಾನ್​ ಪ್ರೈಂನಲ್ಲಿ ಲಭ್ಯವಾಗಿದೆ.

ಹೌದು, ಸಿನಿಮಾ ಬಿಡುಗಡೆಯಾಗಿ ಒಂದೇ ವಾರದಲ್ಲಿ ಅಂದರೆ ಏಪ್ರಿಲ್ 9 ಕ್ಕೆ ಒಟಿಟಿ ವೇದಿಕೆಯಲ್ಲಿ ಯುವರತ್ನ ತೆರೆ ಕಂಡಿದೆ. ಇದರಿಂದ ಅಪ್ಪು ಅಭಿಮಾನಿಗಳು ಒಂದು ರೀತಿ ಬೇಸರಗೊಂಡರೂ, ಕೋವಿಡ್ ಕಾರಣದಿಂದ ಅನಿವಾರ್ಯವಾಗಿ ಒಟಿಟಿ ಯಲ್ಲಿ ಯುವರತ್ನ ನೋಡುವಂತಾಗಿದೆ. ಪ್ರೈಂಗೆ ಸುಮಾರು 20 ಕೋಟಿ ರೂಪಾಯಿಗೆ ಯುವರತ್ನ ಮಾರಾಟವಾಗಿದೆ ಎಂದು ಹೇಳಲಾಗಿದೆ.

ಚಿತ್ರಮಂದಿರಗಳಲ್ಲೂ ಮುಂದುವರೆಯಲಿದೆ : ‘ಯುವರತ್ನ’ ಚಿತ್ರವು ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುವುದರಿಂದ ಚಿತ್ರಮಂದಿರಗಳಲ್ಲಿ ಸಹಜವಾಗಿಯೇ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಲಿದೆ. ಆದರೆ, ಹೆಚ್ಚಿನ ಜನರಿಗೆ ತಲುಪುವ ನಿಟ್ಟಿನಲ್ಲಿ ಇಂಥದ್ದೊಂದು ತೀರ್ಮಾನ ತೆಗೆದುಕೊಳ್ಳಲಾಗಿದೆ ಎನ್ನುತ್ತಾರೆ ನಿರ್ಮಾಪಕ ವಿಜಯ್‌ಕುಮಾರ್ ಕಿರಗಂದೂರು. ಈ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿರುವ ಅವರು, ‘ಒಂದೊಳ್ಳೆಯ ಸಂದೇಶವಿರುವ ಚಿತ್ರವನ್ನು ಇನ್ನಷ್ಟು ಹೆಚ್ಚಿನ ಜನರಿಗೆ ತಲುಪಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಚಿತ್ರಮಂದಿರಗಳಲ್ಲೂ ಚಿತ್ರಪ್ರದರ್ಶನ ಮುಂದುವರೆಯಲಿದೆ’ ಎಂದು ಅವರು ಹೇಳಿದ್ದಾರೆ.

ನಾಲ್ವರು ಶ್ರೀಗಳಿಂದ ಯುವರತ್ನ ವೀಕ್ಷಣೆ: ‘ಯುವರತ್ನ’ ಚಿತ್ರಕ್ಕೆ ಕೇವಲ ಪ್ರೇಕ್ಷಕ ವಲಯದಿಂದ ಮಾತ್ರವಲ್ಲದೇ ಸ್ವಾಮೀಜಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರದಲ್ಲಿ ಗುರುವಾರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಶ್ರೀಗಳು, ವಾಲ್ಮೀಕಿ ಪೀಠದ ಜಗದ್ಗುರು ಪ್ರಸನ್ನಾನಂದ ಸ್ವಾಮೀಜಿ, ಕನಕಗುರು ಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಒಟ್ಟಿಗೆ ಚಿತ್ರ ವೀಕ್ಷಿಸಿ ಚಿತ್ರದ ಆಶಯವನ್ನು ಶ್ಲಾಸಿದ್ದಾರೆ.

ಈ ಕುರಿತು ಚಿತ್ರ ನಿರ್ಮಿಸಿರುವ ಹೊಂಬಾಳೆ ಪಿಲ್ಮ್ಸ್​ ಪ್ರತಿಕ್ರಿಯಿಸಿದ್ದು, ಕೋವಿಡ್ ಕಾರಣದಿಂದಾಗಿ ಅನಿವಾರ್ಯವಾಗಿ ಯುವರತ್ನ ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಮಾಡಲಾಗಿದೆ. ಏಕೆಂದರೆ ಒಂದು ಉತ್ತಮ ಸದಭಿರುಚಿಯ ಕನ್ನಡ ಸಿನಿಮಾವನ್ನು ಕುಟುಂಬದವರು, ಹಿರಿಯರು ಕಣ್ತುಂಬಿಕೊಳ್ಳಲಿ ಎಂದು ಬಿಡುಗಡೆ ಮಾಡಲಾಗಿದೆ. ಅದಾಗ್ಯೂ ಯುವರತ್ನ ಚಿತ್ರಮಂದಿರಗಳಲ್ಲಿಯೂ ಮುಂದುವರೆಯಲಿದೆ ಎಂದು ಹೇಳಿದೆ.

ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದಿರುವ ಯುವರತ್ನದಲ್ಲಿ ಪುನೀತ್ ರಾಜ್​ಕುಮಾರ್, ಪ್ರಕಾಶ್ ರಾಜ್, ಡಾಲಿ ಧನಂಜಯ್, ಸಾಯಿ ಕುಮಾರ್ ಸೇರಿದಂತೆ ಅನೇಕ ನಟರ ದಂಡೇ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net