50ನೇ ವರ್ಷದಲ್ಲಿ ಕಂಗನಾ ಏನಾಗಿರಬೇಕಂತೆ?

Cini- kangana
Published on

ಮುಂಬೈ: ಅನಿಸಿದ್ದನ್ನು ನೇರವಾಗಿ ಹೇಳುವವವರ ಪೈಕಿ ಕಂಗನಾ ಸಹ ಒಬ್ಬರು. ತಮ್ಮ ಭಾವನೆಯನ್ನು ಮುಚ್ಚುಮರೆಯಿಲ್ಲದೆ ಹಂಚಿಕೊಳ್ಳುವ ಕಂಗನಾ, ಬಾಲಿವುಡ್​ನಲ್ಲಿ ಸ್ವಜನಪಕ್ಷಪಾತದ ಬಗ್ಗೆ ಕೆಲವು ವರ್ಷಗಳ ಹಿಂದೆಯೇ ಮಾತನಾಡಿ, ಹಲವು ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿದ್ದರು.

ಇದೀಗ ಕಂಗನಾ ತಮ್ಮ ಕನಸಿನ ಬಗ್ಗೆ ಮಾತನಾಡಿದ್ದಾರೆ. ತನಗೆ 50 ವರ್ಷವಾಗುವಷ್ಟರಲ್ಲಿ, ದೇಶದ ಪ್ರಮುಖ ಶ್ರೀಮಂತರ ಪಟ್ಟಿಯಲ್ಲಿ ತಮ್ಮ ಹೆಸರಿರಬೇಕು ಎಂದು ಬಯಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ಹೃತಿಕ್ ಮತ್ತು ನನ್ನ ಅಫೇರ್ ದೊಡ್ಡ ಸುದ್ದಿಯಾದಾಗ, ನಾನು ಹೃತಿಕ್ ಅವರನ್ನು ಪ್ರೀತಿಸುತ್ತಿರುವುದು ಅವರ ಬಳಿ ಇರುವ ದುಡ್ಡು ಮತ್ತು ಜನಪ್ರಿಯತೆಗಾಗಿ ಎಂದು ಹಲವರು ಮಾತಾಡಿಕೊಂಡಿದ್ದರು. ಆಗ ನನಗೆ ಏನು ಉತ್ತರಿಸಬೇಕು ಎಂಬುದೇ ಗೊತ್ತಿರಲಿಲ್ಲ’ ಎಂದು ಹೇಳಿಕೊಂಡಿದ್ದಾರೆ ಕಂಗನಾ.

ಕ್ರಮೇಣ, ಈ ಮಾತುಗಳನ್ನೆಲ್ಲಾ ಸುಳ್ಳು ಮಾಡಬೇಕು ಎಂದು ಅವರು ನಿರ್ಧರಿಸಿದರಂತೆ. ‘ಅಲ್ಲಿಯವರೆಗೂ ನಾನು ಯಾವತ್ತೂ ದುಡ್ಡು ಮಾಡಬೇಕೆಂದು ಯೋಚಿಸಿರಲಿಲ್ಲ. ಯಾವಾಗ ಹಣಕ್ಕೋಸ್ಕರ ನಾನು ಇಷ್ಟೆಲ್ಲಾ ಮಾಡುತ್ತಿದ್ದೀನಿ ಎಂಬ ಆರೋಪ ಹೊರಿಸಿದರೋ, ಆಗ ನಾನು ಅದನ್ನು ಸುಳ್ಳು ಮಾಡಬೇಕಿತ್ತು. ದುಡ್ಡನ್ನು ನಾನೇ ಸ್ವಂತವಾಗಿ ದುಡಿಯಬಲ್ಲೆ ಎಂದು ತೋರಿಸಬೇಕಿತ್ತು. ಅಲ್ಲಿಂದ ನನ್ನ ಪಾಡಿಗೆ ನಾನು ಕೆಲಸ ಮಾಡುತ್ತಾ ಹೋದೆ. ಇವತ್ತು ನನ್ನದೇ ಸ್ವಂತ ಸುಸಜ್ಜಿತ ಮನೆ ಮತ್ತು ಆಫೀಸ್ ಇದೆ. ಅದೇ, ಅವರು (ಹೃತಿಕ್) ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅದೂ ಅವರಪ್ಪ ಕೊಟ್ಟ ದುಡ್ಡಿನಿಂದ’ ಎಂದು ಹೃತಿಕ್ ಬಗ್ಗೆ ನೇರವಾಗಿ ಮಾತನಾಡಿದ್ದಾರೆ ಕಂಗನಾ. ಇನ್ನು, ಅವರ ಮುಂದಿನ ಗುರಿಯ ಬಗ್ಗೆ ಮಾತನಾಡಿರುವ ಕಂಗನಾ, ‘ನನಗೆ 50 ವರ್ಷವಾಗುವಷ್ಟರಲ್ಲಿ, ದೇಶದ ಪ್ರಮುಖ ಶ್ರೀಮಂತರ ಪಟ್ಟಿಯಲ್ಲಿ ನನ್ನ ಹೆಸರಿರಬೇಕು ಎಂಬುದು ನನ್ನ ಆಸೆ’ ಎಂದು ಹೇಳಿಕೊಂಡಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net