ಸಿನಿಮಾ ಕೆಲಸ ಮುಗಿದಿದೆ.. ಮುಂದೇನು? ಕೃಷಿ ಭವಿಷ್ಯ

Ullasa-2
Published on

ಬೆಂಗಳೂರು: ಸಿನಿಮಾ ಸಂಬಂಧಿ ಕೆಲಸಗಳಿಗೆ ಕರೊನಾ ಕಂಟಕವಾಗಿ ಪರಿಣಮಿಸಿದೆ. ಸಿನಿಮಾ ಮಂದಿ ಕೆಲಸ ಇಲ್ಲದೆ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಯಾರ ಬಳಿಯೂ ನಿಖರವಾದ ಉತ್ತರ ಇಲ್ಲ. ಸಿನಿಮಾ ಕ್ಷೇತ್ರ ಮತ್ತೆ ಮೊದಲಿನಂತಾಗುವುದು ಯಾವಾಗ ಎಂದು. ಒಂದಷ್ಟು ಮಂದಿ ಇದೇ ಲಾಕ್​ಡೌನ್ ಅವಧಿಯಲ್ಲಿ ಸಿನಿಮಾ ಹೊರತಾಗಿ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ನಟಿ ಕೃಷಿ ತಾಪಂಡ ಸಹ, ಇದೇ ಪರಿಸ್ಥಿತಿ ಮುಂದುವರಿದರೆ ಐಟಿ ಬಿಟಿ ಕ್ಷೇತ್ರದತ್ತ ಮರಳುವ ಸೂಚನೆ ನೀಡಿದ್ದಾರೆ.

ಹೌದು, ಎಲ್ಲ ಅಂದುಕೊಂಡಂತೆ ಆಗಿದ್ದರೆ, ಕೃಷಿ ನಟನೆಯ ಮೂರು ಸಿನಿಮಾಗಳು ಈ ವರ್ಷ ತೆರೆಕಾಣಬೇಕಿತ್ತು. ‘ಬ್ಲಾಂಕ್’, ‘ಲಂಕೆ’ ಮತ್ತು ‘ರೂಪಾಯಿ’ ಸಿನಿಮಾಗಳು ಈಗಾಗಲೇ ಬಹುತೇಕ ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿವೆ. ಸದ್ಯದ ಪರಿಸ್ಥಿತಿ ನೋಡಿದರೆ, ಚಿತ್ರಮಂದಿರ ತೆರೆಯುವ ಲಕ್ಷಣಗಳಿಲ್ಲ. ಹಾಗಾಗಿ ಮುಂದೇನು ಎಂಬುದಕ್ಕೆ ಈಗಲೇ ಉತ್ತರ ಕಂಡುಕೊಂಡಿದ್ದಾರೆ ಕೃಷಿ.

‘ಕಳೆದ ಫೆಬ್ರವರಿಯಲ್ಲಿಯೇ ಒಪ್ಪಿಕೊಂಡ ಎಲ್ಲ ಸಿನಿಮಾಗಳ ಕೆಲಸ ಮಾಡಿಕೊಟ್ಟಿದ್ದೇನೆ. ಇದೀಗ ಅವುಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಆದರೆ, ಅವುಗಳ ರಿಲೀಸ್ ಬಗ್ಗೆಯೇ ಗೊಂದಲ ಶುರುವಾಗಿದೆ. ‘ಬ್ಲಾಂಕ್’ ಚಿತ್ರವನ್ನು ಓಟಿಟಿಯಲ್ಲಿ ತೆರೆಗೆ ತರುವ ಬಗ್ಗೆ ನಿರ್ಮಾಪಕರ ಜತೆ ಚರ್ಚೆ ಮಾಡಿದ್ದೇನೆ. ಸದ್ಯ ‘ಬ್ಲಾಂಕ್’ ಸೆನ್ಸಾರ್​ನಲ್ಲಿದೆ. ಮೊದಲ ಕಾಪಿ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ’ ಎನ್ನುವ ಕೃಷಿ, ಭವಿಷ್ಯದ ಬಗ್ಗೆಯೂ ಯೋಜನೆ ರೂಪಿಸಿದ್ದಾರೆ.

‘ಸಿನಿಮಾಕ್ಕೆ ಬರುವುದಕ್ಕೂ ಮುನ್ನ ನಾನು ಎಂಎನ್​ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಈಗ ಹೋದರೂ ನನಗೆ ಅಲ್ಲಿ ಕೆಲಸ ಇದೆ. ಕಿರುತೆರೆಯಲ್ಲಿಯೂ ಅವಕಾಶಗಳಿವೆ. ಮುಂದಿನ ಆರು ತಿಂಗಳ ಬೆಳವಣಿಗೆ ನೋಡಿಕೊಂಡು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬುದನ್ನು ನಿರ್ಧರಿಸುತ್ತೇನೆ’ ಎಂಬುದು ಕೃಷಿ ಮಾತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net