

ಟಾಲಿವುಡ್ ನಟಿ ಚಾರ್ಮಿ ನಿರ್ಮಾಣದಲ್ಲಿ ಗುರುತಿಸಿಕೊಂಡಿದ್ದರೂ, ಅವರು ನಿರ್ಮಾಣದ ಯಾವ ಚಿತ್ರ ಸಹ ಗೆದ್ದಿರಲಿಲ್ಲ. ಕಳೆದ ವರ್ಷ ಬಿಡುಗಡೆಯಾದ 'ಇಸ್ಮಾರ್ಟ್ ಶಂಕರ್' ಬರುವ ತನಕ. ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಈ ಚಿತ್ರ ನಿರ್ಮಿಸಿದ್ದ ಚಾರ್ಮಿ, ಮೊದಲ ಬಾರಿಗೆ ಯಶಸ್ಸು ಕಂಡರು ಎಂದರೆ ತಪ್ಪಿಲ್ಲ.
ಈ ಚಿತ್ರದಿಂದ ಕನ್ನಡದ ನಟಿ ನಭಾ ನಟೇಶ್, ಟಾಲಿವುಡ್ನಲ್ಲಿ ಬೇಡಿಕೆಯ ನಟಿಯಾದರು. ಇನ್ನು ಚಿತ್ರ ನಿರ್ಮಿಸಿದ್ದ ಚಾರ್ಮಿ ಕೌರ್ಗೆ ಒಂದಿಷ್ಟು ಹಣ ನೋಡುವಂತಾಯಿತು. ಅಷ್ಟೇ ಅಲ್ಲ, ಈ ಯಶಸ್ಸಿನಿಂದ ಇನ್ನಷ್ಟು ದೊಡ್ಡ ಕನಸುಗಳನ್ನೂ ಕಾಣುವಂತಾಯಿತು.
ಆ ಚಿತ್ರ ಬಿಡುಗಡೆಯಾಗಿ ಇಂದಿಗೆ ಒಂದು ವರ್ಷವಾಗಿದ್ದು, ಈ ಹಿನ್ನೆಲೆಯಲ್ಲಿ ಮಾತನಾಡಿರುವ ಚಾರ್ಮಿ, 'ಅಂಥದ್ದೊಂದು ಯಶಸ್ಸಿಗೆ ಬಹಳ ದಿನಗಳಿಂದ ಕಾದಿದ್ದೆವು. ಆದರೆ, ಕಾರಣಾಂತರಗಳಿಂದ ಹಿಂದಿನ ಚಿತ್ರಗಳು ಅಷ್ಟು ಯಶಸ್ಸಾಗಲಿಲ್ಲ. ಈ ಚಿತ್ರ ಮಾತ್ರ ನಮಗೆ ಇನ್ನಷ್ಟು ಚಿತ್ರಗಳನ್ನು ಮಾಡುವುದಕ್ಕೆ ಹುಮ್ಮಸ್ಸು ನೀಡಿತು' ಎಂದು ಹೇಳಿಕೊಂಡಿದ್ದಾರೆ ಚಾರ್ಮಿ.
ಈ ಮಧ್ಯೆ ಅವರು ಲಾಕ್ಡೌನ್ ಸಮಯವನ್ನು ಹೇಗೆ ಕಳೆದರು ಎಂಬ ಪ್ರಶ್ನೆಗೆ, ಪುರಿ ಜಗನ್ನಾಥ್ ಹೇಳುತ್ತಿದ್ದ ಕಥೆಗಳನ್ನು ಕೇಳುತ್ತಿದ್ದರಂತೆ. ಈ ಕುರಿತು ಮಾತನಾಡಿರುವ ಅವರು, 'ಪುರಿ ಕಳೆದ ನಾಲ್ಕು ತಿಂಗಳುಗಳಿಂದ ಬರೆಯುತ್ತಲೇ ಇದ್ದಾರೆ. ಈ ಅವಧಿಯಲ್ಲಿ ಅದೆಷ್ಟು ಕಥೆ-ಚಿತ್ರಕಥೆಗಳನ್ನು ಅವರು ಬರೆದಿಟ್ಟುಕೊಂಡಿದ್ದಾರೋ ಗೊತ್ತಿಲ್ಲ' ಎನ್ನುತ್ತಾರೆ ಚಾರ್ಮಿ.
ಈ ಕಥೆಗಳನ್ನೆಲ್ಲಾ ಕೇಳಿ ಖುಷಿಪಟ್ಟಿರುವ ಚಾರ್ಮಿ, 'ಮುಂದಿನ ದಿನಗಳಲ್ಲಿ ಅವೆಲ್ಲಾ ಚಿತ್ರಗಳಾಗಿ ಬರಲಿವೆ. ಈ ಸಮಯದಲ್ಲಿ ನಾವು ಅದೆಷ್ಟು ಪ್ರಿಪೇರ್ ಆಗಿದ್ದೇವೆ ಎಂದರೆ, ಮುಂದಿನ 10 ವರ್ಷಗಳಿಗಾಗುವಷ್ಟು ಕಂಟೆಂಟ್ ನಮ್ಮ ಬಳಿ ಇದೆ. ಮುಂದಿನ ದಿನಗಳಲ್ಲಿ ಒಂದರ ಹಿಂದೊಂದು ಚಿತ್ರವನ್ನು ಘೋಷಿಸುತ್ತೇವೆ' ಎಂದು ಹೇಳಿಕೊಂಡಿದ್ದಾರೆ ಚಾರ್ಮಿ.
ಬರೀ ಚಿತ್ರಗಳಷ್ಟೇ ಅಲ್ಲ, ಓಟಿಟಿಗೆ ಸಹ ಒಂದಿಷ್ಟು ಕಂಟಂಟ್ ರೆಡಿ ಮಾಡಿಟ್ಟುಕೊಂಡಿದ್ದಾರಂತೆ ಪುರಿ ಜಗನ್ನಾಥ್. 'ಓಟಿಟಿಯಿಂದ ಬಹಳಷ್ಟು ನಿರ್ಮಾಪಕರಿಗೆ ಸಹಾಯವಾಗುತ್ತಿದೆ. ನಮಗೂ ಈ ವೇದಿಕೆಯಲ್ಲಿ ಏನಾದರೂ ಮಾಡಬೇಕು ಎಂಬ ಆಸೆ ಇದೆ. ಅದಕ್ಕೆ ಸರಿಯಾಗಿ ಪುರಿ ಜಗನ್ನಾಥ್ ಒಂದಿಷ್ಟು ಕಥೆ ಸಿದ್ಧ ಮಾಡಿಟ್ಟುಕೊಂಡಿದ್ದಾರೆ. ಒಂದಿಷ್ಟು ಹೊಸ ನಿರ್ದೇಶಕರಿಂದ ಕೆಲಸ ಮಾಡಿಸುವ ಯೋಚನೆಯೂ ಇದೆ' ಎನ್ನುತ್ತಾರೆ ಅವರು.