

ಬೆಂಗಳೂರು: ‘ನಾನು ಸ್ವಲ್ಪ ದಿನ ಮಾತನಾಡುವುದಿಲ್ಲ ...’- ಹಾಗಂತ ಒಂದು ದಿನ ಘೋಷಿಸಿಬಿಟ್ಟರು ಡಾ. ವಿಷ್ಣುವರ್ಧನ್. ಅಲ್ಲಿಂದ ಅವರು ಆರೇಳು ತಿಂಗಳುಗಳ ಕಾಲ ನಿಜಕ್ಕೂ ಮಾತನಾಡಲಿಲ್ಲ. ಆ ನಂತರ ಮಾತನಾಡಿದರಾದರೂ, ಅವರು ಸಾಕಷ್ಟು ಬದಲಾಗಿದ್ದರು. ಪತ್ರಿಕಾಗೋಷ್ಠಿಗಳಲ್ಲಿ ಅವರು ಭಾಗವಹಿಸುತ್ತಿದ್ದರೂ ಮೌನಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದರು. ಅಷ್ಟರಲ್ಲಾಗಲೇ, ಅವರು ಬನ್ನಂಜೆ ಗೋವಿಂದಾಚಾರ್ಯ ಅವರನ್ನು ತಮ್ಮ ಆಧ್ಯಾತ್ಮ ಗುರುಗಳು ಎಂದು ಸ್ವೀಕರಿಸಿದ್ದರು ಎಂಬ ಸುದ್ದಿ ಇತ್ತು. ಅದಕ್ಕೆ ತಕ್ಕ ಹಾಗೆ, ಅವರ ಮಾತುಗಳಲ್ಲಿ ಆಧ್ಯಾತ್ಮ ಇಣುಕುತ್ತಿತ್ತು. ಮೂಡ್ ಇದ್ದರೆ ಹಲವು ಸ್ವಾರಸ್ಯಕರ ಸಂಗತಿಗಳನ್ನು ಅವರ ಮಾತುಗಳಲ್ಲಿ ಕೇಳಬಹುದಾಗಿತ್ತು. ವಿಷ್ಣುವರ್ಧನ್ ಅವರ ಚಿತ್ರಗಳ ಕೆಲವು ಪತ್ರಿಕಾಗೋಷ್ಠಿಗಳಲ್ಲಿ ಅವರಾಡಿದ ಕೆಲವು ನೆನಪಿನಲ್ಲಿ ಉಳಿಯುವ ಮಾತುಗಳು 11ನೇ ಪುಣ್ಯಸ್ಮರಣೆ ನಿಮಿತ್ತ ಇಲ್ಲಿವೆ.