ನಿಮಗಿದೋ ಶುಭಾಶಯ...; ವಿಷ್ಣು, ಉಪ್ಪಿ, ಶ್ರುತಿ ಬರ್ತ್​ಡೇ ಸಂಭ್ರಮ

Birthday
Published on

ಬೆಂಗಳೂರು: ಸ್ಯಾಂಡಲ್​ವುಡ್ ಪಾಲಿಗೆ ಸೆ. 18 ವಿಶೇಷವಾದ ದಿನ. ಸಾಹಸ ಸಿಂಹ ವಿಷ್ಣುವರ್ಧನ್, ನಟ ಉಪೇಂದ್ರ ಮತ್ತು ನಟಿ ಶ್ರುತಿ ಅವರ ಜನ್ಮದಿನವಿಂದು. ಈ ತ್ರಿವಳಿ ಕಲಾವಿದರ ಬರ್ತ್​ಡೇಗೆ ಶನಿವಾರ ಚಿತ್ರತಂಡಗಳಿಂದ ಮತ್ತು ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆಯೇ ಹರಿದುಬಂದಿದೆ.

ವಿಷ್ಣುವರ್ಧನ್ ಅವರ ಜಯಂತಿ ಪ್ರಯುಕ್ತ ಚಂದನವನದ ಬಹುತೇಕರು ನೆಚ್ಚಿನ ಸಾಹಸಸಿಂಹನಿಗೆ ಅವರೊಂದಿಗಿನ ಫೋಟೋ ಹಂಚಿಕೊಂಡು ಶುಭ ಕೋರಿದರೆ, ಇತ್ತ ಅಭಿಮಾನ್ ಸ್ಟುಡಿಯೋದಲ್ಲಿರುವ ಪುಣ್ಯಭೂಮಿಯಲ್ಲಿ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ವಿಶೇಷ ಪೂಜೆ ನೆರವೇರಿದೆ. ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಭಾರತೀ ವಿಷ್ಣುವರ್ಧನ್, ಅನಿರುದ್ಧ ಜತ್ಕರ್ ಸೇರಿ ಹಲವರು ಪಾಲ್ಗೊಂಡು ಸಂಭ್ರಮಿಸಿದ್ದಾರೆ.

ಉಪ್ಪಿಗೆ ಪೋಸ್ಟರ್ ಟೀಸರ್ ಉಡುಗೊರೆ: ಉಪೇಂದ್ರ ಬರ್ತ್​ಡೇ ಪ್ರಯುಕ್ತ ‘ಕಬ್ಜ’ ಚಿತ್ರದಿಂದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಅಷ್ಟೇ ಅಲ, ದೀಪಾವಳಿಗೆ ಚಿತ್ರದ ಟೀಸರ್ ಬರಲಿದೆ ಎಂಬ ಸುಳಿವು ನೀಡಿದ್ದಾರೆ ನಿರ್ದೇಶಕ ಚಂದ್ರು. ಇದಲ್ಲದೆ, ಓಂಪ್ರಕಾಶ್ ರಾವ್ ನಿರ್ದೇಶನದ ‘ತ್ರಿಶೂಲಂ’, ‘ಬುದ್ಧಿವಂತ’ ತೆಲುಗಿನ ‘ಗಣಿ’ ಸೇರಿ ಹಲವು ಸಿನಿಮಾ ತಂಡಗಳಿಂದ ಪೋಸ್ಟರ್ ಬಿಡುಗಡೆ ಆಗಿದೆ. ಉಪೇಂದ್ರ ಅಭಿನಯದಲ್ಲಿ ರಾಮ್​ಗೋಪಾಲ್​ ವರ್ಮ ಒಂದು ಚಿತ್ರ ನಿರ್ದೇಶಿಸುತ್ತಾರೆ ಎಂಬ ಸುದ್ದಿ ಇತ್ತು. ಅದನ್ನು ಒಪ್ಪಿಕೊಂಡಿರುವ ಆರ್​ಜಿವಿ, ಸದ್ಯದಲ್ಲೇ ಉಪೇಂದ್ರ ಜತೆಗೆ ಒಂದು ಆಕ್ಷನ್ ಸಿನಿಮಾ ಮಾಡುತ್ತಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ.

ಇನ್ನು, ಶ್ರುತಿ ತಮ್ಮ ಹುಟ್ಟುಹಬ್ಬವನ್ನು ಕುಟುಂಬದವರ ಜತೆಗೆ ತಿರುಪತಿಯಲ್ಲಿ ಆಚರಿಸಿಕೊಂಡಿದ್ದು, ಅವರ ಜನ್ಮದಿನಕ್ಕೆ ‘ಭಜರಂಗಿ 2’ ಚಿತ್ರದ ವಿಶೇಷ ಲುಕ್ ಹೊರಬಂದರೆ, ‘ರತ್ನನ್ ಪ್ರಪಂಚ’ ಚಿತ್ರದ ಯಲ್ಲವ್ವ ಪಾತ್ರದ ಲುಕ್ ಸಹ ಬಿಡುಗಡೆ ಆಗಿ ಕುತೂಹಲ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net