

ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಬಹಳ ಖುಷಿಯಾಗಿದ್ದಾರೆ. ಅದೇ ಖುಷಿಯಲ್ಲಿ ತಮ್ಮ ಹೆಂಡತಿಗೆ, ‘ಐ ಆ್ಯಮ್ ಪ್ರೌಡ್ ಆಫ್ ಯೂ ಅನುಷ್ಕಾ ...’ ಎಂದು ಬೆನ್ನು ತಟ್ಟಿದ್ದಾರೆ. ಗಂಡನಿಂದ ಬೆನ್ನು ತಟ್ಟಿಸಿಕೊಳ್ಳುವಂತದ್ದೇನು ಮಾಡಿದರು ಅನುಷ್ಕಾ ಎಂಬ ಪ್ರಶ್ನೆ ಬರುವುದು ಸಹಜವೇ. ಅದಕ್ಕೆ ಉತ್ತರ ಏನು ಗೊತ್ತಾ? ‘ಪಾತಾಳ್ ಲೋಕ್’.
ಅನುಷ್ಕಾ ಶರ್ಮ, ‘ಪಾತಾಳ್ ಲೋಕ್’ ಎಂಬ ವೆಬ್ ಸೀರೀಸ್ ನಿರ್ಮಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಆ ವೆಬ್ ಸೀರೀಸ್ ಮೂರು ದಿನಗಳ ಹಿಂದೆ ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಿತ್ತು. ಪಾತಕ ಲೋಕದ ಕ್ರೂರ ಅಧ್ಯಾಯಗಳ ಈ ವೆಬ್ ಸೀರೀಸ್ ನೋಡಿದವರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಮರ್ಶಕರು, ಜನ ಸಾಮಾನ್ಯರು, ಸೆಲೆಬ್ರಿಟಿಗಳು ... ಹೀಗೆ ಎಲ್ಲರೂ ಈ ಒಂಬತ್ತು ಕಂತುಗಳ ವೆಬ್ ಸೀರೀಸ್ ನೋಡಿ ದಂಗಾಗಿರುವುದಷ್ಟೇ ಅಲ್ಲ, ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ.
ಈಗ ಆ ಸಾಲಿಗೆ ವಿರಾಟ್ ಸಹ ಸೇರಿದ್ದಾರೆ. ಇತ್ತೀಚೆಗೆ ಪಟ್ಟಾಗಿ ಕೂತು ಅಷ್ಟೂ ಎಪಿಸೋಡುಗಳನ್ನು ನೋಡಿರುವ ವಿರಾಟ್, ಈ ವೆಬ್ ಸೀರೀಸ್ ಬಗ್ಗೆ ಖುಷಿಯಿಂದ ಮಾತಾಡಿದ್ದಾರೆ. ಮೊದಲಿಗೆ, ಆ ವೆಬ್ ಸೀರೀಸ್ ಅವರ ಮನಸ್ಸು ಗೆದ್ದಿದೆ. ಎರಡನೆಯದಾಗಿ, ಅದನ್ನು ನಿರ್ಮಿಸಿದ್ದು ಅವರ ಹೆಂಡತಿ. ಈ ಎರಡೂ ಖುಷಿಯ ವಿಚಾರಗಳನ್ನು ತಮ್ಮ ಇನ್ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ ವಿರಾಟ್. ಅಷ್ಟೇ ಅಲ್ಲ, ತಮ್ಮ ಲ್ಯಾಪ್ಟಾಪ್ನಲ್ಲಿ ‘ಪಾತಾಳ್ ಲೋಕ್’ ಜತೆಗಿನ ಒಂದು ಫೋಟೋ ಸಹ ಹಂಚಿಕೊಂಡಿದ್ದಾರೆ.
‘‘ಪಾತಾಳ್ ಲೋಕ್’ನ ಇಡೀ ಸೀಸನ್ ನೋಡಿ ಮುಗಿಸಿದ್ದೇನೆ. ಕಥೆ ಹೇಳುವ ವಿಚಾರದಲ್ಲಿ ಮತ್ತು ಅಭಿನಯದಲ್ಲಿ ಅದೊಂದು ಮಾಸ್ಟರ್ಪೀಸ್. ಜನ ಸಹ ಅದರ ಬಗ್ಗೆ ಮೆಚ್ಚಿ ಮಾತಾಡುತ್ತಿದ್ದಾರೆ. ಇಂಥದ್ದೊಂದು ಶೋ ನಿರ್ಮಿಸಿದ ನನ್ನ ಹೆಂಡತಿ ಬಗ್ಗೆ ಹೆಮ್ಮೆ ಎನಿಸುತ್ತಿದೆ’ ಎಂದು ವಿರಾಟ್ ಕೋಹ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.