

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ವಿನೋದ್ ಪ್ರಭಾಕರ್ ನಟಿಸುತ್ತಿರುವ ಸಿನಿಮಾ ‘ಫೈಟರ್’. ಇತ್ತೀಚೆಗಷ್ಟೆ ಚಿತ್ರದ ಮಾಸ್ ಟೀಸರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಬುಧವಾರ (ಸೆ.13) ಚಿತ್ರದ ಮೊದಲ ಹಾಡು ಬಿಡುಗಡೆ ಮಾಡಿದೆ. ‘ಐ ವಾನಾ ಫಾಲೋ ಯೂ… ರುಕ್ಕೋ ರುಕ್ಕೋ ರೋಮಿಯೋ, ನನ್ನ ಕಡೆ ನೋಡಯ್ಯೋ…’ ಎಂದು ಸಾಗುವ ಹಾಡಿದು. ನಾಯಕನ ಹಿಂದೆ ಸುತ್ತುತ್ತಾ ಆತನನ್ನು ಛೇಡಿಸುವ ರೀತಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ವಿನೋದ್ ಪ್ರಭಾಕರ್ ಹಾಗೂ ಲೇಖಾಚಂದ್ರ ಈ ಹಾಡಿಗೆ ಸ್ಟೈಲಿಶ್ ಲುಕ್‌ನಲ್ಲಿ ಸ್ಟೆಪ್ಸ್ ಹಾಕಿದ್ದಾರೆ.
ಇದನ್ನೂ ಓದಿ : ‘ಚಕ್ ದೇ ಇಂಡಿಯಾ’ ಖ್ಯಾತಿಯ ನಟ ರಿಯೊ ಕಪಾಡಿಯಾ ವಿಧಿವಶ!
ಗುರುಕಿರಣ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಕವಿರಾಜ್ ಸಾಹಿತ್ಯ ಬರೆದಿದ್ದು, ಚೈತ್ರಾ ಧ್ವನಿಯಾಗಿದ್ದಾರೆ. ಭಜರಂಗಿ ಮೋಹನ್ ನೃತ್ಯ ನಿರ್ದೇಶನ ಈ ಹಾಡಿಗಿದೆ. ಬಹುತೇಕ ಪಾಂಡಿಚೆರಿಯ ಸುತ್ತಮುತ್ತ ಈ ಹಾಡಿನ ಶೂಟಿಂಗ್ ನಡೆಸಲಾಗಿದ್ದು ಕಲರ್‌ಫುಲ್ ಆಗಿ ಮೂಡಿಬಂದಿದೆ. ನೂತನ್ ಉಮೇಶ್ ನಿರ್ದೇಶನದ ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಪಾವನಾ ಹಾಗೂ ಲೇಖಾಚಂದ್ರ ನಟಿಸಿದ್ದಾರೆ. ‘ಲಾಕಪ್ ಡೆತ್’ ಖ್ಯಾತಿಯ ನಟಿ ನಿರೋಷ ‘ಫೈಟರ್’ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ದೊಡ್ಡ ಗ್ಯಾಪ್‌ನ ನಂತರ ಮತ್ತೆ ಕನ್ನಡದಲ್ಲಿ ಅಭಿನಯಿಸಿರುವುದು ವಿಶೇಷ.
ಇದನ್ನೂ ಓದಿ : 100 ಕುಟುಂಬಗಳಿಗೆ ‘ಖುಷಿ’ ಹಂಚಿದ ನಟ ವಿಜಯ್ ದೇವರಕೊಂಡ
ಇದೊಂದು ಕೌಟುಂಬಿಕ ಮನರಂಜನಾತ್ಮಕ ಚಿತ್ರ. ಅವ್ಯವಸ್ಥೆಯ ವಿರುದ್ಧ ತೊಡೆ ತಟ್ಟಿನಿಂತಾಗ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಸಿನಿಮಾದಲ್ಲಿ ಹೇಳಿದ್ದೇವೆ. ಇದರ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಕೂಡ ಇದೆ.
-ವಿನೋದ್ ಪ್ರಭಾಕರ್, ನಾಯಕ