ಕನ್ನಡ ಚಿತ್ರರಂಗಕ್ಕೆ ದೃಷ್ಟಿ ತೆಗೀಬೇಕು; ವಿಕ್ರಾಂತ್ ರೋಣ ಟ್ರೇಲರ್ ನೋಡಿ ರವಿಚಂದ್ರನ್ ಖುಷಿ..

VR
Published on

ಬೆಂಗಳೂರು: ‘ಮುಂಚೆ ನನ್ನನ್ನು ಎಲ್ಲರೂ ಕನಸುಗಾರ ಅಂತ ಕರೆಯುತ್ತಿದ್ದರು. ಈಗ ಚಿತ್ರರಂಗದಲ್ಲಿ ಬಹಳ ಜನ ಕನಸುಗಾರರಿದ್ದಾರೆ. ಕನ್ನಡ ಚಿತ್ರರಂಗಕ್ಕೆ ದೃಷ್ಟಿ ತೆಗೆಯಬೇಕು ...’

ಬಹಳ ಖುಷಿಯಿಂದ ಹೇಳಿಕೊಂಡರು ರವಿಚಂದ್ರನ್. ಅವರ ಖುಷಿಗೆ ಕಾರಣ ‘ವಿಕ್ರಾಂತ್ ರೋಣ’ ಚಿತ್ರದ ಟ್ರೇಲರ್. ಇಂದು ಸಂಜೆ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ, ಬುಧವಾರ ಮಧ್ಯಾಹ್ನ ನಡೆದ ವಿಶೇಷ ಕಾರ್ಯಕ್ರಮದಲ್ಲಿ 3ಡಿ ಟ್ರೇಲರ್ ತೋರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಚಿತ್ರತಂಡದ ಜತೆಗೆ ರವಿಚಂದ್ರನ್, ಶಿವರಾಜಕುಮಾರ್, ರಮೇಶ್ ಅರವಿಂದ್, ಧನಂಜಯ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಯೋಗರಾಜ್ ಭಟ್, ಅರ್ಜುನ್ ಜನ್ಯ ಮುಂತಾದವರು ಹಾಜರಿದ್ದು ಟ್ರೇಲರ್ ನೋಡಿ ಖುಷಿಪಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ರವಿಚಂದ್ರನ್, ‘ಟ್ರೇಲರ್​ನಲ್ಲಿ ಸುದೀಪ್​ಗೆ ಭಯ ಅಂತ ಒಂದು ಸಂಭಾಷಣೆ ಇದೆ. ಸುದೀಪ್, ಈ ರವಿಚಂದ್ರನ್​ನ ಮಗ. ಅವನಿಗೆ ಭಯ ಇರೋಕೆ ಸಾಧ್ಯವೇ ಇಲ್ಲ. ‘ಪ್ರೇಮಲೋಕ’ ಚಿತ್ರ ನೋಡಿ ನಮ್ಮ ತಂದೆ ನನ್ನನ್ನು ತಬ್ಬಿಕೊಂಡು ಅತ್ತಿದ್ದರು ನಾನಿನ್ನೂ ಮರೆತಿಲ್ಲ. ಈಗ ನಾನು ಅಪ್ಪನ ಸ್ಥಾನಕ್ಕೆ ಬಂದಿದ್ದೇನೆ. ತಾಕತ್ತಿದ್ದರೆ ಒಂದೊಳ್ಳೆಯ ಸಿನಿಮಾ ಮಾಡಿ ಅಳಿಸಿ ಎಂದು ನನ್ನ ಮಕ್ಕಳಿಗೆ ಹೇಳಿದ್ದೇನೆ. ಈ ಟ್ರೇಲರ್ ಬೇರೊಂದು ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತದೆ. ಮುಖ್ಯವಾಗಿ ಉದ್ದೇಶ ಚೆನ್ನಾಗಿರಬೇಕು. ಆಗ ಇಡೀ ಜಗತ್ತಿಗೇ ತಲುಪಿಸಬಹುದು’ ಎಂದರು ರವಿಚಂದ್ರನ್.

ಭಾರತದ ಐವರು ಟಾಪ್ ಹೀರೋಗಳ ಪೈಕಿ ಸುದೀಪ್ ಸಹ ಒಬ್ಬರು ಎಂದ ರಕ್ಷಿತ್, ‘ಅವರೊಂದು ಪಾಂಡೋರಾ ಬಾಕ್ಸ್ ಇದ್ದಂತೆ. ಅವರಲ್ಲಿ ಸಾಕಷ್ಟು ಪ್ರತಿಭೆ ಇದೆ. ಅದನ್ನು ನಿರ್ದೇಶಕರು ಹೇಗೆ ಹೊರಗೆ ತೆಗೆಯುತ್ತಾರೆ ಎನ್ನುವುದು ಬಹಳ ಮುಖ್ಯ. ಈ ಚಿತ್ರವು ಭಾರತಕ್ಕೆ ಕನ್ನಡ ಚಿತ್ರರಂಗದಿಂದ ಇನ್ನೊಂದು ಕೊಡುಗೆ. ನಾನು ಚಿತ್ರರಂಗಕ್ಕೆ ಬಂದ ಹೊಸದರಲ್ಲಿ ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಚಿತ್ರರಂಗ ಚಿಕ್ಕದು ಎಂಬ ಮಾತಿತ್ತು. ಸಿನಿಮಾ ದೊಡ್ಡದು, ಚಿಕ್ಕದು ಆಗಬಹುದು. ಚಿತ್ರರಂಗ ಚಿಕ್ಕದಾಗುವುದಕ್ಕೆ ಸಾಧ್ಯವೇ ಇಲ್ಲ’ ಎಂದರು ರಕ್ಷಿತ್. ಸುದೀಪ್ ನಮ್ಮ ಹೃದಯಕ್ಕೆ ಹತ್ತಿರ ಎಂದರು ಶಿವರಾಜಕುಮಾರ್.

ರಮೇಶ್ ಅರವಿಂದ್ ಅವರಿಗೆ ಚಿತ್ರ ನೋಡಿ ಎರಡ್ಮೂರು ದಿನಗಳ ಕಾಲ ಚಿತ್ರದ ಗುಂಗಿನಿಂದ ಹೊರ ಬರಲಿಲ್ಲವಂತೆ. ತಾನು ಚಿತ್ರರಂಗದ ಪರವಾಗಿ ಬರಲಿಲ್ಲ, ಸುದೀಪ್ ಅಭಿಮಾನಿಯಾಗಿ ಬಂದಿದ್ದಾಗಿ ರಿಷಬ್ ಹೇಳಿಕೊಂಡರು. ಇನ್ನು, ಸುದೀಪ್ ಈ ಸಮಾರಂಭಕ್ಕೆ ಬಂದು ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದ ಹೇಳುವುದರ ಜತೆಗೆ, ಇಂಥದ್ದೊಂದು ಚಿತ್ರದಲ್ಲಿ ಅವಕಾಶ ಕೊಟ್ಟ ಎಲ್ಲರಿಗೂ ಥ್ಯಾಂಕ್ಸ್ ಹೇಳಿದ್ದರು. ‘ರಾ ರಾ ರಕ್ಕಮ್ಮ’ ಹಾಡಿಗೆ ಹೆಜ್ಜೆ ಹಾಕಿದ್ದ ಜಾಕ್​ಲೀನ್ ಫರ್ನಾಂಡಿಸ್ ಸಹ ಬಂದಿದ್ದರು. ಕೊನೆಗೆ ಸೆಲೆಬ್ರಿಟಿಗಳೆಲ್ಲ ಜಾಕ್​ಲೀನ್ ಜತೆಗೆ ಹೆಜ್ಜೆ ಹಾಕುವಲ್ಲಿಗೆ ಕಾರ್ಯಕ್ರಮ ಮುಗಿಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net