ಇಂದಿನಿಂದ ವಿಕ್ರಾಂತ್ ರೋಣ: 50 ದೇಶಗಳ 3500ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಬಿಡುಗಡೆ

Vikrant Rona
Published on

ಬೆಂಗಳೂರು: ಸುದೀಪ್ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ‘ವಿಕ್ರಾಂತ್ ರೋಣ’ ಇಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಕೇವಲ ಮೂರು ದಿನಗಳಲ್ಲಿ ಬೆಂಗಳೂರು, ಮುಂಬೈ ಹಾಗೂ ಹೈದರಾಬಾದ್​ನಲ್ಲಿ ಪ್ರಿ-ರಿಲೀಸ್ ಕಾರ್ಯಕ್ರಮ ನಡೆಸಿದ ಚಿತ್ರತಂಡ ಬುಧವಾರ ದುಬೈನಲ್ಲಿ ಸ್ಪೆಷನ್ ಸ್ಕ್ರೀನಿಂಗ್ ಆಯೋಜಿಸಿತ್ತು. ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಹೀಗೆ ಐದು ಭಾಷೆಗಳಲ್ಲೂ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ‘ವಿಕ್ರಾಂತ್ ರೋಣ’ ಬಿಡುಗಡೆ ಪರ್ವದ ಕುರಿತು ಮಾತನಾಡುವ ನಿರ್ವಪಕ ಜಾಕ್ ಮಂಜು, ‘ಇಂದು ಚಿತ್ರವು ಜಗತ್ತಿನಾದ್ಯಂತ 2ಡಿ ಹಾಗೂ 3ಡಿಯಲ್ಲಿ ಬಿಡುಗಡೆಯಾಗುತ್ತಿದೆ. ಮೊದಲ ಪ್ರಾಮುಖ್ಯತೆ 3ಡಿಗೆ ನೀಡುತ್ತಿದ್ದೇವೆ. 3ಡಿ ಇಲ್ಲದ ಕಡೆ 2ಡಿಯಲ್ಲಿ ರಿಲೀಸ್ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಥಿಯೇಟರ್​ಗಳು ಹಾಗೂ ತೆಲುಗು ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಸುಮಾರು 450 ಥಿಯೇಟರ್​ಗಳು, ಹಿಂದಿ ರಾಜ್ಯಗಳಲ್ಲಿ 900ಕ್ಕೂ ಹೆಚ್ಚು ಥಿಯೇಟರ್​ಗಳು ಸೇರಿದಂತೆ ಭಾರತದಲ್ಲಿ 2600ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ರಿಲೀಸ್ ಆಗುತ್ತಿದೆ’ ಎಂದು ಭಾರತದ ಥಿಯೇಟರ್​ಗಳ ಕುರಿತು ಅಂಕಿ ಅಂಶಗಳನ್ನು ನೀಡುತ್ತಾರೆ. ಇನ್ನು ವಿಶ್ವದಾದ್ಯಂತ 50 ದೇಶಗಳ 3500ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ‘ವಿಕ್ರಾಂತ್ ರೋಣ’ ಬರೋಬ್ಬರಿ ಆಗುತ್ತಿದೆ. ಇದೇ ಮೊದಲ ಬಾರಿಗೆ ಗಲ್ಪ್ ರಾಷ್ಟ್ರಗಳಲ್ಲಿ ಬರೋಬ್ಬರಿ 220ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ‘ವಿಕ್ರಾಂತ್ ರೋಣ’ ಅಬ್ಬರವನ್ನು ನೋಡಿ ಬೇರೆ ಚಿತ್ರರಂಗದ ದೊಡ್ಡ ಸಿನಿಮಾಗಳು ಸಹ ರಿಲೀಸ್ ಡೇಟ್ ಮುಂದೂಡಿದ್ದು, ಥಿಯೇಟರ್​ಗಳ ಸಂಖ್ಯೆ ಮತ್ತಷ್ಟು ಹೆಚ್ಚು ಸಾಧ್ಯತೆಗಳೂ ಇವೆ.

ವಿಕ್ರಾಂತ್ ರೋಣ ಅಲ್ಲ ವಿಕ್ಟರಿ ರೋಣ!

ಇನ್ನು, ಮಂಗಳವಾರ ನಗರದ ಲುಲು ಮಾಲ್​ನಲ್ಲಿ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನಟ-ನಿರ್ದೇಶಕ ಉಪೇಂದ್ರ, ‘ ಸುದೀಪ್ ನನಗೆ 25-30 ವರ್ಷಗಳ ಹಿಂದಿನ ಪರಿಚಯ. ‘ವಿಕ್ರಾಂತ್ ರೋಣ’, ಮೂರು ವರ್ಷಗಳ ಪರಿಶ್ರಮ. ಕೆಲವು ತುಣುಕುಗಳನ್ನು ನೋಡಿದ್ದೇನೆ. ಸಖತ್ ಎಂಜಾಯ್ ಮಾಡುತ್ತೀರಿ ಎಂಬ ನಂಬಿಕೆ ನನಗೆ ಇದೆ. ಇದು ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಸಿನಿಮಾ. ಯಶ್ ನಾವು ಯಾರಿಗೂ ಕಡಿಮೆ ಇಲ್ಲ ಅಂತ ಭಾರತದಾದ್ಯಂತ ಸದ್ದು ಮಾಡಿದರು. ಈಗ ಸುದೀಪ್ ವಿಶ್ವದಾದ್ಯಂತ ಸದ್ದು ಮಾಡಲಿದ್ದಾರೆ. ಇದು ವಿಕ್ರಾಂತ್ ರೋಣ ಅಲ್ಲ, ವಿಕ್ಟರಿ ರೋಣ’ ಎಂದರು.

ದೆಹಲಿಯಲ್ಲಿ ಸಂಸದರಿಗೆ ವಿಶೇಷ ಪ್ರದರ್ಶನ!

ಕೆಲವು ದಿನಗಳ ಹಿಂದಷ್ಟೇ ‘ವಿಕ್ರಾಂತ್ ರೋಣ’ ಚಿತ್ರದ ಪ್ರಚಾರಕ್ಕಾಗಿ ನಟ ಸುದೀಪ್ ದೆಹಲಿಗೆ ಭೇಟಿ ನೀಡಿದ್ದರು. ಸುಮಾರು 13 ವರ್ಷಗಳ ಅವರು ದೆಹಲಿಗೆ ಭೇಟಿ ನೀಡಿದ್ದು ಸಾಕಷ್ಟು ಕುತೂಹಲ ಮೂಡಿಸಿತ್ತು. ಆ ಸಮಯದಲ್ಲಿ ಪ್ರಲ್ಹಾದ್ ಜೋಶಿ, ರಾಜೀವ್ ಚಂದ್ರಶೇಖರ್ ಸೇರಿದಂತೆ ಹಲವು ಸಂಸದರನ್ನು ಭೇಟಿಯಾದರು. ಈಗ ಕರ್ನಾಟಕದ ಸಂಸದರು, ರಾಜ್ಯಸಭಾ ಸದಸ್ಯರು ಹಾಗೂ ವಿಶೇಷ ಅಧಿಕಾರಿಗಳಿಗಾಗಿ ದೆಹಲಿಯಲ್ಲಿ ಇಂದು ರಾತ್ರಿ ಚಿತ್ರದ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ.

ಎಲ್ಲೆಲ್ಲಿ? ಎಷ್ಟೆಷ್ಟು? ಚಿತ್ರಮಂದಿರಗಳು
  • ಕರ್ನಾಟಕದಲ್ಲಿ - 400
  • ಆಂಧ್ರ ಮತ್ತು ತೆಲಂಗಾಣ - 450
  • ಉತ್ತರ ಭಾರತ - 900
  • ಭಾರತದಲ್ಲಿ ಒಟ್ಟಾರೆ - 2600
  • ಗಲ್ಪ್ ರಾಷ್ಟ್ರಗಳಲ್ಲಿ - 220
  • ಜಗತ್ತಿನಾದ್ಯಂತ - 3500
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net