

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾ ಕಾರ್ಯಕಾರಿ ಸದಸ್ಯ ಪ್ರವೀಣ್ ನೆಟ್ಟಾರ್ ಅವರನ್ನು ಕೊಲೆ ಮಾಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಆಗ್ರಹಿಸಿ ಬಿಜೆಪಿ ಯುವ ಪದಾಧಿಕಾರಿಗಳು ಆರಂಭಿಸಿರುವ ರಾಜೀನಾಮೆ ತಂತ್ರ ಚಳವಳಿ ರೂಪವನ್ನು ಪಡೆಯಲಾರಂಭಿಸಿದೆ.
ತುಮಕೂರು ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಸಹ ಸಂಚಾಲಕಿ ಶಕುಂತಲಾ ನಟರಾಜ್, ಮೈಸೂರಿನ ನರಸಿಂಹರಾಜ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಲೋಹಿತ್ ಸೇರಿದಂತೆ ಇತರ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ ಬೆನ್ನಿಗೆ ರಾಜ್ಯದ ವಿವಿಧ ಭಾಗಗಳಲ್ಲಿನ ಬಿಜೆಪಿ ಯುವ ಪದಾಧಿಕಾರಿಗಳು ರಾಜೀನಾಮೆ ನೀಡಲಾರಂಭಿಸಿದ್ದಾರೆ.
ಬಾಗಲಕೋಟೆಯ ತೇರದಾಳ ಶಾಸಕ ಸಿದ್ದು ಸವದಿ ಅವರ ಪುತ್ರ ವಿದ್ಯಾಧರ ಸವದಿ ಬಾಗಲಕೋಟೆ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಚಿವ ಶ್ರೀನಿವಾಸ ಪೂಜಾರಿ ಅವರ ಕ್ಷೇತ್ರವಾದ ಕೋಟದ ಯುವ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ಸುಶಾಂತ್ ಶೆಟ್ಟಿ ರಾಜೀನಾಮೆ ನೀಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮಂಡಲದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿಧರ್ ಆಕ್ರೋಶ ವ್ಯಕ್ತಪಡಿಸಿದ್ದು, ಅವರು ಸೇರಿದಂತೆ ಎಲ್ಲ ಪದಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. ಬಿಜೆಪಿಯ ಕಾರಟಗಿ ಮಂಡಲ ಮಹಿಳಾ ಪ್ರಧಾನ ಕಾರ್ಯದರ್ಶಿ ಸುಹಾಸಿನಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.
ಬಿಜೆಪಿ ಕಾರ್ಯಕರ್ತರ ಹತ್ಯೆ, ಸರ್ಕಾರದ ವೈಫಲ್ಯವನ್ನು ಖಂಡಿಸಿ ಕೊಡಗು ಜಿಲ್ಲಾ ಬಿಜೆಪಿ ಕಾರ್ಯಕಾರಿ ಸಮಿತಿ ಸ್ಥಾನಕ್ಕೆ ಮಾಜಿ ಜಿಲ್ಲಾಧ್ಯಕ್ಷ ಮಾಚಿಮಾಡ ರವೀಂದ್ರ ರಾಜೀನಾಮೆ ನೀಡಿದ್ದಾರೆ.
ಕೊಪ್ಪಳ ಜಿಲ್ಲೆಯ ಕಾರ್ಮಿಕ ಜಿಲ್ಲಾ ಪ್ರಕೋಷ್ಠಕದ ಸಂಚಾಲಕ ಶಿವಕುಮಾರ್ ಅದೋನಿ ಕೂಡ ರಾಜೀನಾಮೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಅರಭಾವಿ ಸಾಮಾಜಿಕ ಜಾಲತಾಣ ಸದಸ್ಯ ಸ್ಥಾನಕ್ಕೆ ಅವಿನಾಶ್ ಹಿರೇಮಠ ರಾಜೀನಾಮೆ ನೀಡಿದ್ದಾರೆ.
ಪ್ರವೀಣ್ ಹತ್ಯೆಗೆ ನ್ಯಾಯ ಸಿಗುವವರೆಗೂ ಸಂಘಟನೆಯಲ್ಲಿ ಕೆಲಸ ಮಾಡುವುದಿಲ್ಲ, ಅಗತ್ಯ ಬಿದ್ದರೆ ರಾಜೀನಾಮೆಗೂ ಸಿದ್ಧ ಎಂದು ಚಿತ್ರದುರ್ಗದ ಹೊಸದುರ್ಗ ಮಂಡಲ ಉಪಾಧ್ಯಕ್ಷ ಮಂಜು ಸಾಣೇಹಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದು, ಹೊಸದುರ್ಗ ಮಂಡಲ ಕಾರ್ಯದರ್ಶಿ ಎನ್.ಆರ್. ಜಗದೀಶ್, ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಠ ರಮೇಶ್ ಗೂಳಿಹಟ್ಟಿ ಸೇರಿ ಹಲವು ಕಾರ್ಯಕರ್ತರು ಸಂಘಟನೆಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಪತ್ರಮುಖೇನ ತಿಳಿಸಿದ್ದಾರೆ.