

ಚೆನ್ನೈ: ನಟ ಚಿಯಾನ್ ವಿಕ್ರಮ್ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಏಕೆಂದರೆ, ತಮ್ಮ ವಿಭಿನ್ನ ಪಾತ್ರಗಳಿಂದಲೇ ಕಾಲಿವುಡ್ ಮಾತ್ರವಲ್ಲದೆ ಎಲ್ಲ ಭಾಷೆಯ ಸಿನಿ ಅಭಿಮಾನಿಗಳಿಗೂ ವಿಕ್ರಮ್ ಪರಿಚಿತರು. ಯಾವುದೇ ಪಾತ್ರವಿರಲಿ ಅದಕ್ಕೆ ತಕ್ಕಂತೆ ತಮ್ಮ ಲುಕ್ ಬದಲಾಯಿಸಿಕೊಳ್ಳುತ್ತಾರೆ. ಅನಿಯನ್ ಮತ್ತು ಐ ಸಿನಿಮಾ ನೋಡಿದರೆ ಇದು ಗೊತ್ತಾಗುತ್ತದೆ. ಅಷ್ಟೇ ಏಕೆ ಇತ್ತೀಚೆಗಷ್ಟೇ ಬಿಡುಗಡೆಯಾದ ತಂಗಲಾನ್ ಎಂಬ ಪ್ರಯೋಗಾತ್ಮಕ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬಂದು ಭರ್ಜರಿ ಯಶಸ್ಸು ಕಂಡಿದ್ದಾರೆ.
ತಂಗಲಾನ್ ಸಿನಿಮಾ ವಿಶ್ವಾದ್ಯಂತ 100 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಹಿನ್ನೆಲೆಯಲ್ಲಿ ಸರಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಮತ್ತು ಮಾಧ್ಯಮ ಸಂದರ್ಶನ ನೀಡುವ ಮೂಲಕ ಸಿನಿ ಯಶಸ್ಸನ್ನು ಸಂಭ್ರಮಿಸುತ್ತಿದ್ದಾರೆ. ನಾನು ಮಾಡಿದ ಒಂದು ಸಣ್ಣ ತಪ್ಪಿಗೆ ಹಿಂದೊಮ್ಮೆ ಎರಡು ತಿಂಗಳ ಕಾಲ ಕಣ್ಣೀರಾಕಿದ್ದೇ ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಆಘಾತಕಾರಿ ಸಂಗತಿಗಳನ್ನು ವಿಕ್ರಮ್ ಬಹಿರಂಗಪಡಿಸಿದ್ದಾರೆ.
ದಿಗ್ಗಜ ನಿರ್ದೇಶಕ ಮಣಿರತ್ನಂ ಅವರ ನಿರ್ದೇಶನದಲ್ಲಿ ನಟಿಸಬೇಕೆಂಬುದು ಪ್ರತಿಯೊಬ್ಬ ಕಲಾವಿದನ ಕನಸು. ನನಗೂ ಆ ಆಸೆ ಇತ್ತು. ಆದರೆ ನಾನು ಮಾಡಿದ ಸಣ್ಣ ತಪ್ಪಿನಿಂದ ಆ ಅವಕಾಶ ಕೈ ತಪ್ಪಿ ಹೋಯಿತು. ಈ ತಪ್ಪಿನಿಂದ ನಾನು 2 ತಿಂಗಳು ಕಾಲ ಅತ್ತಿದ್ದೆ ಎಂದು ವಿಕ್ರಮ್ ಹಿಂದಿನ ಘಟನೆಯನ್ನು ನೆನೆದರು.
ನನಗೆ ಮಣಿರತ್ನಂ ಅಂದರೆ ತುಂಬಾ ಇಷ್ಟ. ಅವರ ನಿರ್ದೇಶನದಲ್ಲಿ ಒಂದು ಸಿನಿಮಾವನ್ನಾದರೂ ಮಾಡಬೇಕೆಂಬುದು ನನ್ನ ಕನಸು. ನನ್ನ ಕನಸು ಈಡೇರಿದ ನಂತರ ನಾನು ಸಿನಿಮಾಗಳಿಗೆ ಗುಡ್ ಬೈ ಹೇಳಲು ಸಿದ್ಧ. 1995ರಲ್ಲಿ ತೆರೆಕಂಡ ಬಾಂಬೆ ಸಿನಿಮಾಕ್ಕೆ ನಾಯಕನಾಗಿ ಆಯ್ಕೆಯಾಗಿದ್ದೆ. ಆದರೆ, ನಾನು ಮಾಡಿದ ಸಣ್ಣ ತಪ್ಪಿನಿಂದಾಗಿ ಅವಕಾಶ ಮಿಸ್ ಮಾಡಿಕೊಂಡೆ. ಈ ಘಟನೆ ಬಳಿಕ ಬಾಂಬೆ ಸಿನಿಮಾವನ್ನು ನಿರಾಕರಿಸಿದ್ದಾರೆ ಎಂದು ವದಂತಿಗಳನ್ನು ಹಬ್ಬಿಸಿದರು. ಆದರೆ, ಅದು ಸುಳ್ಳು. ನಾನು ಬಾಂಬೆ ಸಿನಿಮಾವನ್ನು ನಿರಾಕರಿಸಲಿಲ್ಲ ಎಂದರು.
ಇದ್ದಕ್ಕಿದ್ದಂತೆ ನನ್ನನ್ನು ಆಡಿಷನ್‌ಗೆ ಕರೆದಿದ್ದರಿಂದ ಮತ್ತು ವಿಡಿಯೋ ಕ್ಯಾಮೆರಾವನ್ನು ಪಡೆಯದ ಕಾರಣ ನಾನು ಆಡಿಷನ್ ಸರಿಯಾಗಿ ಮಾಡಲಿಲ್ಲ. ಅಂದು ಸ್ಟಿಲ್ ಕ್ಯಾಮೆರಾ ಪಡೆಯಲಾಗಿತ್ತು. ಕ್ಯಾಮೆರಾ ಮುಂದೆ ಆಕ್ಟ್ ಮಾಡಲು ಹೇಳಿದರು. ನಾಯಕಿ ಓಡುತ್ತಿರುವುದನ್ನು ನೋಡಿ ನಿಂತಲ್ಲೇ ನಿಂತು ಕಳೆದು ಹೋಗುವಂತೆ ಆ್ಯಕ್ಟ್ ಮಾಡಲು ಹೇಳಿದರು. ಆದರೆ ನಾನು ಗೊಂದಲಕ್ಕೀಡಾದೆ. ಏಕೆಂದರೆ, ಅದು ಸ್ಟಿಲ್ ಕ್ಯಾಮೆರಾ ಹೊರತು ವಿಡಿಯೋ ಕ್ಯಾಮೆರಾ ಅಲ್ಲ, ನಾನು ಯಾಕೆ ನಟಿಸಬೇಕು? ನಾನೇನಾದರೂ ಚಲಿಸಿದರೆ ಅವರಿಗೆ ಮಸುಕು ಚಿತ್ರಣ ಬರುತ್ತದೆ ಎಂದು ನನಗೆ ಅರ್ಥವಾಗಿ ನಟಿಸಲಿಲ್ಲ. ಈ ತಪ್ಪಿನಿಂದ ನಾನು ಅವಕಾಶ ಕಳೆದುಕೊಂಡೆ. ಇದಾದ ಬಳಿಕ ಸುಮಾರು 2 ತಿಂಗಳವರೆಗೂ ಕಣ್ಣೀರಾಕಿದ್ದೆ ಎಂದು ವಿಕ್ರಮ್ ಹೇಳಿದರು.
ವಿಕ್ರಮ್ಗೆ ಮಿಸ್ ಆದ ಅವಕಾಶ ಅರವಿಂದ ಸ್ವಾಮಿಯವರ ಪಾಲಾಯಿತು. ಆದರೆ ಆನಂತರ ವಿಕ್ರಮ್ ಆಸೆ 2010ರಲ್ಲಿ ತೆರೆಕಂಡ ರಾವನ್ ಮತ್ತು ಕಳೆದ ವರ್ಷ ತೆರೆಕಂಡ ಪೊನ್ನಿಯನ್ ಸೆಲ್ವನ್ ಭಾಗ-1ರ ಮೂಲಕ ಈಡೇರಿದೆ. (ಏಜೆನ್ಸೀಸ್)