ವಿಜಯವಾಣಿ ಸಿನಿಮಾ ವಿಮರ್ಶೆ; ಜಂಟಲ್​ವುನ್.. ಎಗ್​ಸೆಲೆಂಟ್..!

GENTLMEN
Published on

‘ನನ್ನ ಸಿನಿಮಾ ನೋಡುವಾಗ ಯಾರೂ ನಿದ್ರಿಸಬಾರದು.. ನಿದ್ರೆ ಎಂಥದು, ತೂಕಡಿಸಲೂಬಾರದು..’ ಎಂಬುದು ಪ್ರತಿಯೊಬ್ಬ ನಿರ್ದೇಶಕನ ಆಶಯ.

ಆದರೆ ಕುಂಭಕರ್ಣನಂತೆ ನಿದ್ರಿಸುವವನನ್ನೇ ಕಥಾನಾಯಕ ಆಗಿಸಿಕೊಂಡು ಒಂದೊಳ್ಳೆಯ ಕಥಾನಕ ಕಟ್ಟಿಕೊಟ್ಟು, ರೆಪ್ಪೆ ಮಿಟುಕಿಸದೆ ನೋಡುವಂಥ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ ನಿರ್ದೇಶಕ ಜಡೇಶ್ ಕುಮಾರ್. ದಿನಕ್ಕೆ 18 ಗಂಟೆಗಳ ಕಾಲ ಮಲಗೇ ಇರುವ ಹೀರೋ, ಆ ವಿಷಯ ಮುಚ್ಚಿಟ್ಟ ಎಂಬ ಕಾರಣಕ್ಕೆ ಅವನನ್ನು ದೂರ ಮಾಡುವ ಮತ್ತು ಅವನ ಆ ಸಮಸ್ಯೆಯ ಕಾರಣಕ್ಕೆ ಮತ್ತೆ ಹತ್ತಿರವಾಗುವ ಬ್ಯೂಟಿಫುಲ್ ಹೀರೋಯಿನ್ ಇಟ್ಟುಕೊಂಡು ‘ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್​ ಎಂಬ ಕಾಯಿಲೆಯ ಸುತ್ತವೇ ಕಥೆ ಸುತ್ತುವಂತೆ ಮಾಡಿದ್ದರೂ, ಇಲ್ಲಿಯ ಕಥೆ ‘ಎಗ್​ಸೆಂಟ್ರಿಕ್’.

ವಿಲನ್ ಹಾಗೂ ನೆಗೆಟಿವ್ ಶೇಡ್​ನ ಪಾತ್ರಗಳು ‘ಎಕ್ಸೆಂಟ್ರಿಕ್’. ಇದು ಕಾಯಿಲೆ ಆಧಾರಿತವಾಗಿ ಹೆಣೆದ ಸಿನಿಮಾವಾದರೂ ಇಲ್ಲಿ ‘ಎಗ್​ಸೆಲ್’ ಮಾಫಿಯಾನೇ ಕಥೆಯ ಅಂಡಾಣು. ಇದು ಒಂದು ‘ಮೊಟ್ಟೆ’ಯ ಕೊರತೆಗಾಗಿ ನಡೆಯುವ ಅನಾಚಾರಗಳ ಕಥೆ-ವ್ಯಥೆ. ಅಂಡಾಣು ಕೊರತೆಯಿಂದಾಗಿ ಮಕ್ಕಳಾಗದ ಸಮಸ್ಯೆ ಎದುರಿಸುವವರಿಗೆ, ಹದಿಹರೆಯದ ಹೆಣ್ಣುಮಕ್ಕಳನ್ನು ಅಪಹರಿಸಿ ಅವರಿಂದ ಅಂಡಾಣುಗಳನ್ನ ಪಡೆದು ಮಗು ಜನಿಸುವಂತೆ ಮಾಡುವ ದಂಧೆಯೇ ಇಲ್ಲಿನ ಕಥೆಯ ಕೇಂದ್ರ ಬಿಂದು.

ಒಂದು ಅನಾರೋಗ್ಯದಿಂದ ಆಗುವ ಸಮಸ್ಯೆ, ಇನ್ನೊಂದು ಅನಾರೋಗ್ಯದ ಸಮಸ್ಯೆಯ ಪರಿಹಾರಕ್ಕೆ ಹುಟ್ಟಿಕೊಂಡ ಅನಾಚಾರ ಎರಡನ್ನೂ ಹದವಾಗಿ ಹೆಣೆದು ಒಂದೇ ಚೌಕಟ್ಟಿನಲ್ಲಿಟ್ಟು ಜಾಗ್ರತೆ-ಜಾಗೃತಿ ಎರಡನ್ನೂ ಮೂಡಿಸುವ ಕೆಲಸ ಮಾಡಿದ್ದಾರೆ ನಿರ್ದೇಶಕರು.

ಕುಂಭಕರ್ಣನಾಗಿಯೂ, ಆ ಸಮಸ್ಯೆಯಿಂದ ಹೊರಬರಲು ಯತ್ನಿಸುವ ಜಂಟಲ್​ವುನ್ ಆಗಿಯೂ ಪ್ರಜ್ವಲ್ ದೇವರಾಜ್ ಅಭಿನಯ ಇಲ್ಲಿ ಮೆಚ್ಚುಗೆ ಗಳಿಸುತ್ತದೆ. ಈ ಚಿತ್ರದಿಂದ ಅವರ ವೃತ್ತಿಜೀವನಕ್ಕೆ ಒಂದು ತಿರುವು ಸಿಕ್ಕರೂ ಅಚ್ಚರಿ ಏನಲ್ಲ. ನಾಯಕಿ ನಿಶ್ವಿಕಾ ನಾಯ್ಡು ಇಲ್ಲಿ ತಪಸ್ವಿನಿ ಪಾತ್ರದಲ್ಲಿ ಡ್ಯುಯೆಟ್​ಗಿಂತ ಹೆಚ್ಚಾಗಿ ಡಯೆಟ್​ನಲ್ಲೇ ಕಾಣಿಸಿಕೊಂಡಿದ್ದರೂ ಇಷ್ಟವಾಗುತ್ತಾರೆ. ಟ್ರಾಫಿಕ್ ಪೊಲೀಸ್ ಆಗಿ ತಬಲಾ ನಾಣಿ ಒಂದೆರಡು ಸನ್ನಿವೇಶಗಳಲ್ಲಷ್ಟೇ ಕಾಣಿಸಿಕೊಂಡರೂ ನಕ್ಕೋ ನಕ್ಕೋ ಎನಿಸುವಷ್ಟು ನಗಿಸಿ ಹೋಗುತ್ತಾರೆ.

ವಿಲನ್ ಅರ್ಜುನ್, ಪೊಲೀಸ್ ಅಧಿಕಾರಿ ಆಗಿ ಕಾಣಿಸಿಕೊಂಡಿರುವ ಸಂಚಾರಿ ವಿಜಯ್ ಮಾತ್ರವಲ್ಲದೆ ಭರತ್ ಕಲ್ಯಾಣ್, ಪ್ರಶಾಂತ್ ಸಿದ್ದಿ ಸೇರಿ ಎಲ್ಲ ಪಾತ್ರಧಾರಿಗಳ ಅಭಿನಯಕ್ಕೆ ಇಲ್ಲಿ ಮೆಚ್ಚುಗೆ ಸಲ್ಲುತ್ತದೆ. ಚಿತ್ರಕಥೆ, ಸಂಭಾಷಣೆ, ಹಿನ್ನೆಲೆ ಸಂಗೀತ, ಛಾಯಾಗ್ರಹಣ, ಸಾಹಸ ಸಂಯೋಜನೆ ಕೂಡ ಇಲ್ಲಿ ಗಮನ ಸೆಳೆಯುತ್ತದೆ. ಎರಡು ಹಾಡುಗಳು ಇಷ್ಟವಾಗುತ್ತವೆ. ಇಲ್ಲಿ ಕಥಾನಾಯಕನ ಅಣ್ಣನ ಮಗಳು ವರು ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲನಟಿ ಆರಾಧ್ಯಾ ನೆನಪಲ್ಲುಳಿಯುವ ಅಭಿನಯ ನೀಡಿದ್ದಾಳೆ.

ಒಂದರ್ಥದಲ್ಲಿ ಈ ಚಿತ್ರಕ್ಕೆ ಇವಳೇ ಹೀರೋಯಿನ್. ದ್ವಿತೀಯಾರ್ಧವಂತೂ ಕಥೆಯಲ್ಲಿ ಪೂರ್ತಿ ಇವಳೇ ಆವರಿಸಿಕೊಂಡಿರುತ್ತಾಳೆ. ಕಳೆದು ಹೋಗುವ ವರುವನ್ನು ನಾಯಕ ಭರತ್ ದಿನದಲ್ಲಿ ಎಚ್ಚರ ಇರುವ 6 ಗಂಟೆಗಳಲ್ಲಿ ಹೇಗೆ ಹುಡುಕುತ್ತಾನೆ ಎಂಬುದೇ ಚಿತ್ರದಲ್ಲಿನ ಕೌತುಕ ಹೆಚ್ಚಿಸುವ ಅಂಶ.

ಈ ಹಂತದಲ್ಲಿ ಸಿಗುವ ಒಂದೇ ಒಂದು ಸುಳಿವು ಎಗ್​ಸೆಲ್ ಮಾಫಿಯಾದತ್ತ ಲೀಡ್ ಕೊಡುತ್ತದೆ. ಅಲ್ಲಿಂದ ಮುಂದೆ ಏನೇನಾಗುತ್ತದೆ ಎಂಬುದು ಪ್ರೇಕ್ಷಕರನ್ನು ಆಸನದ ಅಂಚಿಗೆ ತಂದು ಕೂರಿಸಿ ನೋಡಿಸಿಕೊಂಡುಹೋಗುತ್ತದೆ. ಒಟ್ಟಿನಲ್ಲಿ ನಾಯಕ ‘ಎಗ್​ಸೆಲ್’ ಮಾಫಿಯಾದ ‘ಸೈಟ್’ ಪತ್ತೆ ಮಾಡಿ ‘ಜಂಟಲ್​ವುನ್’ ಎನಿಸಿಕೊಳ್ಳುವ ‘ಎಗ್’ಸೈಟಿಂಗ್ ಕಥಾಹಂದರದ ಈ ಸಿನಿಮಾ ‘ಎಗ್’ಸೆಲೆಂಟ್.

| ರವಿಕಾಂತ ಕುಂದಾಪುರ ಬೆಂಗಳೂರು  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net