ಓಟಿಟಿನಾ, ಚಿತ್ರಮಂದಿರವಾ?: ಬಿಡುಗಡೆ ಬಗ್ಗೆ ಸ್ಪಷ್ಟನೆ ನೀಡಿದ ‘ಮಾಸ್ಟರ್’ ಚಿತ್ರತಂಡ

Vijay-Master-Final
Published on

ಚೆನ್ನೈ: ಈ ದೀಪಾವಳಿಗೆ ವಿಜಯ್​ ಅಭಿನಯದ ‘ಮಾಸ್ಟರ್​’ ಚಿತ್ರ ಬಿಡುಗಡೆಯಾಗುತ್ತದೆ ಎಂದು ಕಾದಿದ್ದ ವಿಜಯ್​ ಅಭಿಮಾನಿಗಳು ಕಾದಿದ್ದಷ್ಟೇ ಬಂತು. ಆದರೆ, ಚಿತ್ರ ಬಿಡುಗಡೆಯಾಗಲಿಲ್ಲ. ಬಹುಶಃ ಮುಂದಿನ ವರ್ಷದ ಸಂಕ್ರಾಂತಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ನಡುವೆ ಓಟಿಟಿಯಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂಬ ಸುದ್ದಿಯೂ ಹರಿದಾಡಿತ್ತು. ಇದೀಗ ಹರಿದಾಡಿದ ಆ ಪ್ರಶ್ನೆಗೆ ಸ್ವತಃ ಚಿತ್ರತಂಡವೇ ಉತ್ತರ ನೀಡಿದೆ.

ನೆಟ್​ಫ್ಲಿಕ್ಸ್​ನಲ್ಲಿ ಮಾಸ್ಟರ್​ ಸಿನಿಮಾ ಪ್ರೀಮಿಯರ್ ಆಗಲಿದೆ. ಅಷ್ಟೇ ಅಲ್ಲ, ದೊಡ್ಡ ಮಟ್ಟದ ಮೊತ್ತ ಕೊಟ್ಟು ಸಿನಿಮಾ ಖರೀದಿಸಿದ್ದಾರೆ ಎಂಬೆಲ್ಲ ಮಾತುಗಳು ಕೇಳಿಬಂದಿದ್ದವು. ಇದೀಗ ಅದೆಲ್ಲವನ್ನು ಅಲ್ಲಗೆಳೆದ ತಂಡ, ಮೊದಲಿಗೆ ಚಿತ್ರಮಂದಿರದಲ್ಲಿಯೇ ಈ ಸಿನಿಮಾ ಬಿಡುಗಡೆ ಆಗಲಿದೆ. ಅದಾದ ಬಳಿಕ ಓಟಿಟಿ ವಿಚಾರ ಎಂದಿದೆ.

ಈಗಾಗಲೇ ಓಟಿಟಿ ಸಂಸ್ಥೆಯೊಂದರಿಂದ ಬೇಡಿಕೆ ಬಂದಿದೆ. ಆದರೆ, ನಮ್ಮ ಮೊದಲ ಆಯ್ಕೆ ಚಿತ್ರಮಂದಿರವಾಗಿದೆ. ಸದ್ಯದ ಮಟ್ಟಿಗೆ ಇಂಡಸ್ಟ್ರಿ ಸುಧಾರಿಸಿಕೊಳ್ಳಬೇಕಿದೆ. ಹಾಗಾಗಿ ಮೊದಲಿಗೆ ಚಿತ್ರಮಂದಿರದಲ್ಲಿಯೇ ಸಿನಿಮಾ ಬಿಡುಗಡೆ ಮಾಡಲಿದ್ದೇವೆ ಎಂದು ಪತ್ರಿಕಾ ಪ್ರಕಟನೆಯನ್ನೇ ಹೊರಡಿಸಿದೆ.

‘ಮಾಸ್ಟರ್​’ ಚಿತ್ರದಲ್ಲಿ ವಿಜಯ್​ ಮತ್ತು ವಿಜಯ್​ ಸೇತುಪತಿ ಜತೆಗೆ ಮಾಳವಿಕಾ ಮೋಹನನ್​, ಅರ್ಜುನ್​ ದಾಸ್​, ಆಂಡ್ರಿಯಾ ಜೆರೆಮಿಯಾ, ಶಂತನು ಭಾಗ್ಯರಾಜ್​, ನಾಸರ್​ ಮುಂತಾದವರು ನಟಿಸಿದ್ದು, ಲೋಕೇಶ್​ ಕನಕರಾಜ್​ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಅನಿರುದ್ಧ್​ ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net