

ಬೆಂಗಳೂರು: ಸಿನಿಮಾ ಮೇಕಿಂಗ್ಗೆ ಹೊಸ ರೀತೀಯ ವ್ಯಾಖ್ಯಾನ ನೀಡುವುದು ನಿರ್ದೇಶಕ ಸೂರಿಗೆ ಹೊಸದಲ್ಲ. ಈ ಹಿಂದೆ ಸ್ಟಾರ್ಗಳನ್ನು ಇಟ್ಟುಕೊಂಡು ಪ್ರಯೋಗಗಳನ್ನು ಮಾಡಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.
ಈ ಬಾರಿ ‘ಪಾಪ್ ಕಾರ್ನ್ ಮಂಕಿ ಟೈಗರ್’ ಎಂಬ ವಿಚಿತ್ರವಾದ ಟೈಟಲ್ ಇಟ್ಟುಕೊಂಡು ಅಖಾಡಕ್ಕಿಳಿದಿದ್ದಾರೆ. ಈ ಬಾರಿಯ ಪ್ರಯೋಗವನ್ನು ಪ್ರೇಕ್ಷಕ ಕೊಂಚ ಅರಗಿಸಿಕೊಳ್ಳಬೇಕಿದೆ. ಸೂರಿಯವರ ಸಿನಿಮಾಗಳಲ್ಲಿ ರಕ್ತ, ರೌಡಿಸಂ, ಸಂಬಂಧಗಳು, ಪ್ರೀತಿ, ದ್ವೇಷ, ಅಧಿಕಾರದ ಆಸೆ ಇವೆಲ್ಲವೂ ಕಾಮನ್ ಎಲಿಮೆಂಟ್. ಆದರೆ ಈ ಚಿತ್ರದಲ್ಲಿ ರಕ್ತಪಾತ ಕೊಂಚ ಹೆಚ್ಚಾಗಿಯೇ ಇದೆ. ಅದೆಲ್ಲದರ ನಡುವೆ ಬದುಕಿನ ಕೆಲ ಸತ್ಯಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ. ಸೀನ ಎಂಬ ವ್ಯಕ್ತಿಯ ಜರ್ನಿಯನ್ನು ಈ ಚಿತ್ರದಲ್ಲಿ ಹೇಳಿರುವ ಸೂರಿ, ಈ ವಿಚಾರದಲ್ಲಿ ಪ್ರೇಕ್ಷಕನನ್ನು ಗೊಂದಲಕ್ಕೆ ತಳ್ಳಿದ್ದಾರೆ. ಕಡೆಗೆ ಆ ಗೊಂದಲದಿಂದ ನೋಡುಗನನ್ನು ಹೊರ ತರಲು ಪ್ರಯಾಸ ಪಡುತ್ತಾರೆ.
ಕೆಲವು ಪುಸ್ತಕಗಳಲ್ಲಿ ಪ್ರತಿ ಪುಟದಲ್ಲಿನ, ಪ್ರತಿ ಅಕ್ಷರವೂ ಓದಲು ಬಹಳ ಚೆನ್ನಾಗಿದೆ ಎನಿಸುತ್ತದೆ. ಜತೆಗೆ ಆ ಪುಸ್ತಕ ಓದುಗನನ್ನು ಬೆಂಬಿಡದೇ ಓದಿಸಿಕೊಂಡು ಹೋಗುತ್ತದೆ. ಕಡೆಗೆ ನಾವು ಓದಿದ್ದೇನು, ಆ ಪುಸ್ತಕದ ಒಟ್ಟು ಸಾರಾಂಶವೇನು ಎಂಬುದೇ ಗೊತ್ತಾಗಿರುವುದಿಲ್ಲ್ಲ ಈ ಚಿತ್ರದಲ್ಲಿಯೂ ಸಹ ಪ್ರತಿ ಫ್ರೇಮ್ ನೋಡಿಸಿಕೊಂಡು ಹೋಗುತ್ತದೆ.
ಯಾವುದೇ ದೃಶ್ಯವನ್ನು ಮಿಸ್ ಮಾಡಿಕೊಳ್ಳಬಾರದು ಎನಿಸುತ್ತದೆ. ಹೊರ ಬಂದ ಮೇಲೆ ನಾವು ನೋಡಿದ್ದೇನು, ಎಂಬುದನ್ನು ಪ್ರೇಕ್ಷಕ ತನ್ನನ್ನು ತಾನೇ ಕೇಳಿಕೊಳ್ಳಬೇಕು ಎನಿಸುತ್ತದೆ. ಪ್ರತಿ ಚಿತ್ರದಂತೆ ಈ ಸಿನಿಮಾದಲ್ಲಿಯೂ ಸೂರಿ ‘ಗಲೀಜು’ ‘ಕೊತ್ತಂಬರಿ’ ರೀತಿ ಚಿತ್ರ ವಿಚಿತ್ರವಾದ ಹೆಸರಿನ ಪಾತ್ರಗಳನ್ನು ಸೃಷ್ಟಿಸಿದ್ದಾರೆ. ಮಾಸ್ ಪ್ರೇಕ್ಷಕರಿಗೆ ಹಬ್ಬ ಎನಿಸುವಂತಹ ಸಾಕಷ್ಟು ದೃಶ್ಯಗಳು ಚಿತ್ರದಲ್ಲಿವೆ. ಸಿನಿಮಾದ ಮೊದಲಾರ್ಧದಲ್ಲಿ ಭರ್ಜರಿ ಮನರಂಜನೆ ನೀಡುವ ಸಿನಿಮಾ ದ್ವಿತೀಯಾರ್ಧದಲ್ಲಿ ಕೊಂಚ ಎಳೆದಂತೆ ಅನಿಸುತ್ತದೆ. ಸ್ಲಂ, ರೌಡಿಸಂ, ಬೆಂಗಳೂರು, ಬಾಂಬೆ ಹೀಗೆ ಎಲ್ಲವನ್ನು ತಮ್ಮ ಕ್ಯಾಮೆರಾದಲ್ಲಿ ಅದ್ಭುತವಾಗಿ ಸೆರೆಹಿಡಿದ ಸಿನಿಮಾಟೋಗ್ರಫರ್ ಶೇಖರ್ , ಹಿನ್ನೆಲೆ ಸಂಗೀತ ಮತ್ತು ಅಲ್ಲಲ್ಲಿ ಬರುವ ಬಿಟ್ ಸಾಂಗ್ಗಳಿಂದ ಸಂಗೀತ ನಿರ್ದೇಶಕ ಚರಣ್ ರಾಜ್ ಇಬ್ಬರೂ ಸಿನಿಮಾವನ್ನು ಬೇರೆಯದ್ದೇ ಲೆವೆಲ್ಗೆ ತೆಗೆದುಕೊಂಡು ಹೋಗಿದ್ದಾರೆ.
ಡಾಲಿ ಪಾತ್ರದ ಮೂಲಕ ಧನಂಜಯ ಅವರಿಗೆ ಬೇರೆಯದ್ದೇ ಇಮೇಜ್ ಕೊಟ್ಟಿದ್ದ ಸೂರಿ, ಮಂಕಿ ಸೀನನ ಮೂಲಕ ಆತನೊಳಗಿನ ‘ನಟ ರಾಕ್ಷಸ’ನನ್ನು ಬಡಿದೆಬ್ಬಿಸಿದ್ದಾರೆ. ನಿರ್ದೇಶಕರ ಪರಿಕಲ್ಪನೆಗೆ ತಮ್ಮನ್ನು ತಾವು ಅರ್ಪಿಸಿಕೊಂಡಿರುವುದು ಚಿತ್ರದ ಪ್ರತಿ ಫ್ರೇಮ್ಲ್ಲಿಯೂ ಕಾಣುತ್ತದೆ. ನಿವೇದಿತಾ ಅವರದ್ದು ಎಂದಿನಂತೆ ಖಡಕ್ ನಟನೆ. ಸ್ಪರ್ಶ ರೇಖಾ ಹೀಗೂ ನಟಿಸುತ್ತಾರೆ ಎಂಬಂತೆ ನಟನೆ ಮಾಡಿದ್ದಾರೆ. ಸ್ಕ್ರೀನ್ ಸ್ಪೇಸ್ ಕಮ್ಮಿ ಇದ್ದರೂ, ಅಮೃತಾ ಅವರದ್ದು ಗಮನ ಸೆಳೆಯುವ ನಟನೆ. ಇಡೀ ಸಿನಿಮಾದ ಅಚ್ಚರಿ ಎಂದರೆ ಸಪ್ತಮಿ. ಮೊದಲ ಬಾರಿಗೆ ನಟಿಸಿರುವ ಅವರು, ತಮ್ಮ ಎನರ್ಜಿಯಿಂದ ಪ್ರೇಕ್ಷಕರ ಶಿಳ್ಳೆ ಗಿಟ್ಟಿಸುತ್ತಾರೆ. ಮೂಗನಾಗಿ ನಟಿಸಿರುವ ಗೌತಮ್ ಗಲೀಜು ಪಾತ್ರದಲ್ಲಿರುವ ಅಲ್ಲು, ಬಬ್ಲು ಆಗಿರುವ ಪೂರ್ಣಚಂದ್ರ, ಹೀಗೆ ಪ್ರತಿಯೊಬ್ಬರು ತಮ್ಮದೇ ಆದ ಛಾಪನ್ನು ಚಿತ್ರದಲ್ಲಿ ಮೂಡಿಸುತ್ತಾರೆ. ಇದು ಕನ್ನಡಕ್ಕೆ ಹೊಸ ಮಾದರಿಯ ಮೇಕಿಂಗ್ ಇರುವ ಚಿತ್ರ. ಜತೆಗೆ ಚಿತ್ರದಲ್ಲಿನ ರಾನೆಸ್ ತುಂಬ ಜಾಸ್ತಿ. ಆದರೆ ಈ ಹೊಸ ಮಾದರಿಯನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂಬುದರ ಮೇಲೆ ಚಿತ್ರದ ಫಲಿತಾಂಶ ಗೊತ್ತಾಗಲಿದೆ.
ಹರೀಶ್ ಬಸವರಾಜ್