

ಬೆಂಗಳೂರು: ವಿಜಯಪ್ರಸಾದ್ ನಿರ್ದೇಶನದ ಚಿತ್ರವೊಂದು ಬಿಡುಗಡೆಯಾಗಿ ಐದು ವರ್ಷಗಳೇ ಆಗಿವೆ. ‘ನೀರ್ದೋಸೆ’ಯೇ ಕೊನೆ. ಇದೀಗ ಅವರ ಮೂರು ಚಿತ್ರಗಳು ಎರಡು ತಿಂಗಳ ಅಂತರದಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಈ ಕುರಿತು ‘ವಿಜಯವಾಣಿ’ಯ ಜತೆಗೆ ಮಾತನಾಡಿದ ವಿಜಯಪ್ರಸಾದ್, ‘ಮೊದಲು ‘ತೋತಾಪುರಿ - 1’ ಬಿಡುಗಡೆಯಾಗಲಿದೆ. ಅದಾಗಿ ನಾಲ್ಕು ವಾರಗಳ ನಂತರ ‘ಪೆಟ್ರೋಮ್ಯಾಕ್ಸ್ ಬಿಡುಗಡೆಯಾಗಲಿದೆ. ಪುನಃ ತಿಂಗಳ ಅಂತರದಲ್ಲಿ ‘ತೋತಾಪುರಿ - 2’ ತೆರೆಕಾಣಲಿದೆ. ಅಕ್ಟೋಬರ್ನಲ್ಲಿ ‘ತೋತಾಪುರಿ 1’ ಬಂದರೆ, ನವೆಂಬರ್ನಲ್ಲಿ ‘ಪೆಟ್ರೋಮ್ಯಾಕ್ಸ್’ ಬರಲಿದೆ. ಬದುಕು ಮತ್ತು ಬೆಳಕು ಎಂಬ ಪರಿಕಲ್ಪನೆಯ ಚಿತ್ರ ಅದು. ಹಾಗಾಗಿ, ದೀಪಾವಳಿ ಹೊತ್ತಿಗೆ ಚಿತ್ರ ಬಿಡುಗಡೆಯಾದರೆ ಚೆನ್ನಾಗಿರುತ್ತದೆ. ಇವೆಲ್ಲವೂ ಸದ್ಯ ಯೋಚನೆಯ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ವಸ್ತುಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎನ್ನುತ್ತಾರೆ ಅವರು.
ಈ ಮಧ್ಯೆ, ಯೋಗಿ ಅಭಿನಯದಲ್ಲಿ ವಿಜಯಪ್ರಸಾದ್, ‘ಸಿದ್ಲಿಂಗು 2’ ಶುರು ಮಾಡಲಿದ್ದಾರೆ ಎಂಬ ಸುದ್ದಿ ಇದೆ. ಈ ಕುರಿತು ಮಾತನಾಡುವ ಅವರು. ‘‘ಸಿದ್ಲಿಂಗು 2’ ಮಾಡುವುದು ನಿಜ. ಯಾವಾಗ? ಯಾರು ನಿರ್ವಿುಸುತ್ತಾರೆ? ಎಂಬ ವಿಷಯಗಳು ಇನ್ನಷ್ಟೇ ತೀರ್ವನವಾಗಬೇಕಿದೆ. ಅದಕ್ಕೂ ಮುನ್ನ ‘ಪರಿಮಳ ಲಾಡ್ಜ್’ ಶುರುವಾಗಬೇಕು’ ಎನ್ನುತ್ತಾರೆ.