ಕಾರಣ ನಾನೊಬ್ಬನೇ!; ಪೆಟ್ರೋಮ್ಯಾಕ್ಸ್ ಸೋಲಿಗೆ ಕ್ಷಮೆ ಕೇಳಿದ ವಿಜಯಪ್ರಸಾದ್

Petromax
Published on

ಬೆಂಗಳೂರು: ಜುಲೈ 14ರಂದು ರಾಜ್ಯಾದ್ಯಂತ ಬಿಡುಗಡೆಯಾದ ಸತೀಶ್ ನೀನಾಸಂ, ಹರಿಪ್ರಿಯಾ ಅಭಿನಯದ ‘ಪೆಟ್ರೋಮ್ಯಾಕ್ಸ್’ ನಿರೀಕ್ಷಿತ ಯಶಸ್ಸು ಪಡೆಯಲಿಲ್ಲ. ಚಿತ್ರತಂಡದವರು ಸಾಕಷ್ಟು ಪ್ರಚಾರ ಮಾಡಿದರೂ, ಡಬಲ್ ಮೀನಿಂಗ್ ಸಂಭಾಷಣೆಗಳು ಹೆಚ್ಚಿವೆ ಎಂಬ ಅಭಿಪ್ರಾಯಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಹೆಚ್ಚು ಜನರನ್ನು ತಲುಪುವುದಕ್ಕೆ ಸಾಧ್ಯವಾಗಲಿಲ್ಲ. ಈಗ ಆ ಹೊಣೆಯನ್ನು ನಿರ್ದೇಶಕ ವಿಜಯಪ್ರಸಾದ್ ಹೊತ್ತುಕೊಂಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ನಮ್ಮ ‘ಪೆಟ್ರೋಮ್ಯಾಕ್ಸ್’ ಚಿತ್ರವು ನಾವು ಅಂದುಕೊಂಡಂತೆ ಎಲ್ಲರನ್ನೂ ತಲುಪಲು ಆಗಲಿಲ್ಲ. ಅದಕ್ಕೆ ಕಾರಣ ಖಂಡಿತವಾಗಿಯೂ ನೀವಂತೂ ಅಲ್ಲವೇ ಅಲ್ಲ. ಹಾಗೆಯೇ, ನಮ್ಮ ಚಿತ್ರತಂಡದ ಯಾರೊಬ್ಬರೂ ಅಲ್ಲ. ಇದಕ್ಕೆ ಕಾರಣ ನಾನೊಬ್ಬನೇ. ಕ್ಷಮೆ ಇರಲಿ’ ಎಂದು ಅವರು ಬರೆದುಕೊಂಡಿದ್ದಾರೆ.

ಚಿತ್ರ ಸೋತಿದ್ದರಿಂದ ಚಿತ್ರತಂಡದಲ್ಲೇನಾದರೂ ಭಿನ್ನಾಭಿಪ್ರಾಯಗಳೆದ್ದಿವೆಯಾ? ಅದೇ ಕಾರಣಕ್ಕೆ ವಿಜಯಪ್ರಸಾದ್, ಸೋಲಿನ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರಾ? ಎಂಬ ಪ್ರಶ್ನೆ ಬರುವುದು ಸಹಜ. ಈ ಪ್ರಶ್ನೆಗಳನ್ನು ಅವರ ಮುಂದಿಟ್ಟರೆ, ಚಿತ್ರತಂಡದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎನ್ನುತ್ತಾರೆ ಅವರು.

ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು, ‘ಚಿತ್ರತಂಡದಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾವೆಲ್ಲರೂ ಚೆನ್ನಾಗಿಯೇ ಇದ್ದೇವೆ. ಆದರೆ, ಚಿತ್ರ ಹೆಚ್ಚು ಜನರನ್ನು ತಲುಪಲಿಲ್ಲ ಎಂಬ ವಿಷಯ ಮನಸ್ಸು ಕೊರೆಯುತ್ತಿತ್ತು. ಹಾಗಾಗಿ, ಮನಸ್ಸು ಹಗುರ ಮಾಡಿಕೊಳ್ಳುವುದಕ್ಕೆ ಈ ಜವಾಬ್ದಾರಿಯನ್ನು ಹೊತ್ತುಕೊಂಡೆ’ ಎನ್ನುತ್ತಾರೆ. ಅಂದಹಾಗೆ, ವಿಜಯಪ್ರಸಾದ್ ನಿರ್ದೇಶನದ ‘ತೋತಾಪುರಿ’ ಚಿತ್ರವು ಸೆ.30ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದ್ದು, ಈ ಚಿತ್ರದ ಪ್ರಚಾರದ ಚಟುವಟಿಕೆಗಳನ್ನು ಸೋಮವಾರದಿಂದ ಪ್ರಾರಂಭಿಸಿದ್ದಾರೆ ವಿಜಯಪ್ರಸಾದ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net