

ಹರ್ಷವರ್ಧನ್ ಬ್ಯಾಡನೂರು
ಬೆಂಗಳೂರು: ಸಿನಿಮಾ ಎಂದರೆ ಮನರಂಜನೆ ಮಾತ್ರವಲ್ಲ. ಅದು ಸಮಾಜಕ್ಕೆ ಹಿಡಿದ ಕನ್ನಡಿಯಂತಿರಬೇಕು. ಪ್ರೇಕ್ಷಕರಿಗೆ ಉತ್ತಮ ಸಂದೇಶ ಕೊಡುವಂತಿರಬೇಕು. ಯುವಪೀಳಿಗೆಯಲ್ಲಿ ಸ್ಪೂರ್ತಿ ತುಂಬುವಂತಿರಬೇಕು. ಸಾಧಿಸುವ ಛಲ, ಸಾಧನೆಗೆ ಬಲ ನೀಡುವಂತಿರಬೇಕು. ಥಿಯೇಟರ್ನಿಂದ ಹೊರಬಂದ ಬಳಿಕ ಪ್ರೇಕ್ಷಕರನ್ನು ಮತ್ತೊಮ್ಮೆ ಕಾಡುವಂತಿರಬೇಕು, ಇನ್ನೊಮ್ಮೆ ನೋಡುವಂತಿರಬೇಕು. ಈ ಎಲ್ಲ ವಿಷಯಗಳೂ ‘ವಿಜಯಾನಂದ’ ಚಿತ್ರದಲ್ಲಿ ಅಡಕವಾಗಿವೆ.
ತೆರೆಯ ಮೇಲೆ ಅಬ್ಬರಿಸಿ ಬೊಬ್ಬಿರಿಯುವ ರೀಲ್ ಹೀರೋಗಳ ನಡುವೆ ‘ವಿಜಯಾನಂದ’ ನಿಜಜೀವನದ ನಾಯಕನ ಕಥೆ. ಸಾಮಾನ್ಯನೊಬ್ಬ ಅಸಾಮಾನ್ಯ ಕನಸುಗಳನ್ನು ಕಂಡು, ಆ ಕನಸುಗಳನ್ನು ನನಸು ಮಾಡಿಕೊಂಡ ಹೋರಾಟದ ಕಥೆ. ಪದೇಪದೇ ಬಿದ್ದರೂ ಕೊಡವಿಕೊಂಡು ಮೇಲೆದ್ದು ಮತ್ತೆ ಮೊದಲಿಗಿಂತ ಮತ್ತಷ್ಟು ವೇಗವಾಗಿ ಮುನ್ನುಗ್ಗುವ ಸಾಹಸಿಯ ಕಥೆ. ಇದು ಭಾರತದ ಅತಿ ದೊಡ್ಡ ಲಾಜಿಸ್ಟಿಕ್ಸ್ ಸಂಸ್ಥೆ ಕಟ್ಟಿದ ಡಾ. ವಿಜಯ ಸಂಕೇಶ್ವರ ಅವರ ಜೀವನಗಾಥೆ.
ಕೆಲವು ದಿನಗಳ ಹಿಂದೆ ‘ವಿಜಯಾನಂದ’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ, ‘ಒಬ್ಬ ವ್ಯಕ್ತಿ ಎಂದಿಗೂ ನಿವೃತ್ತಿ ಹೊಂದಬಾರದು. ಕೆಲಸ ಮಾಡುತ್ತಲೇ ಇರಬೇಕು. ಮುಂದಿನ ಹತ್ತು ವರ್ಷಗಳಲ್ಲಿ ಇನ್ನೂ ಹತ್ತು ಪಟ್ಟು ಹೆಚ್ಚು ಕೆಲಸ ಮಾಡುವ ಛಲ ನನ್ನಲ್ಲಿದೆ’ ಎಂದಿದ್ದರು 72 ವರ್ಷದ ಡಾ. ವಿಜಯ ಸಂಕೇಶ್ವರ. ಅವರು ಹಾಗೆ ಹೇಳಲು ಕಾರಣವೇನು ಎಂಬ ಪ್ರಶ್ನೆಗೆ, ‘ವಿಜಯಾನಂದ’ ಚಿತ್ರದಲ್ಲಿ ಉತ್ತರ ದೊರೆಯಲಿದೆ. ಏಕೆಂದರೆ, ಅವರು ಎಂದೂ ಸುಮ್ಮನೆ ಕುಳಿತವರಲ್ಲ. ಸ್ಪೂರ್ತಿಯ ಚಿಲುಮೆಯಂತೆ ಹೊಸ ಹೊಸ ಸಾಹಸಗಳಿಗೆ ಕೈ ಹಾಕಿದವರು. ‘ಮುಂದಿಟ್ಟ ಹೆಜ್ಜೆ ಹಿಂದೆ ತೆಗೆಯೋಹಂಗಿಲ್ಲ ದೋಸ್ತಾ’ ಎಂದು ಎಷ್ಟೇ ಸಮಸ್ಯೆಗಳು ಎದುರಾದರೂ ಹಿಂಜರಿಯದೆ ಗೆದ್ದವರು.
ಸನ್ನಿವೇಶ 1 - ‘ಕುಟುಂಬ ದೊಡ್ಡದಾಗುತ್ತಿದೆ. ಪ್ರಿಂಟಿಂಗ್ ಪ್ರೆಸ್ನಿಂದ ಎಲ್ಲರಿಗೂ ಹೊಟ್ಟೆ ತುಂಬಲ್ಲ. ಎಲ್ಲರೂ ಒಂದೇ ತಟ್ಟೇಲಿ ತಿಂದ್ರೆ ಯಾರ ಹೊಟ್ಟೇನೂ ತುಂಬಲ್ಲ ...’ ಎಂದು ವಿಜಯ್ (ನಿಹಾಲ್) ಅಪ್ಪನ ಬಳಿ ಟ್ರಾನ್ಸ್ಪೋರ್ಟ್ ಬಿಜಿನೆಸ್ ಶುರು ಮಾಡುವ ನಿರ್ಧಾರದ ಬಗ್ಗೆ ಹೇಳುತ್ತಾರೆ. ಅದಕ್ಕೆ ಅಪ್ಪನ ಒಪ್ಪಿಗೆ ಸಿಗುವುದಿಲ್ಲ. ಆದರೆ, ಛಲ ಬಿಡದೆ ವಿಜಯ್ ಸಾಲ ಮಾಡಿ ಒಂದು ಲಾರಿ ಖರೀದಿಸಿ ಲಾಜಿಸ್ಟಿಕ್ಸ್ ಉದ್ಯಮಕ್ಕೆ ಇಳಿಯುತ್ತಾರೆ.
ಸನ್ನಿವೇಶ 2 - ವಿಜಯ್ 15 ವರ್ಷದ ಮಗನನ್ನು ಕರೆದು ಕಣ್ಣೀರು ಹಾಕುತ್ತಾ, ‘ನಮ್ಮ ಕಂಪನಿ ಆಸ್ತಿ ಎರಡು ಕೋಟಿ, ಸಾಲ 10 ಕೋಟಿ, ನನಗೇನಾದರೂ ಆದರೆ ಈ ಸಾಲ ನೀನು ತೀರಿಸಬೇಕು’ ಎಂದು ಪ್ರಮಾಣ ಮಾಡಿಸಿಕೊಳ್ಳುತ್ತಾರೆ.
ಸನ್ನಿವೇಶ 3 - ‘ದುಡಿಯದೇ ಕೂತ ಪ್ರತಿಯೊಬ್ಬ ಶ್ರೀಮಂತನೂ ... ಭಿಕ್ಷುಕನೇ. ನನಗೆ ನಿಂತರೆ ತ್ರಾಸ್ ಆಗತೈತಿ... ಓಡಾಡುತ್ತಿದ್ರೆ ಆರಾಮ್ ನಾನು’ ಎಂದು ಹೇಳುತ್ತಾರೆ 50 ವರ್ಷ ದಾಟಿದ ವಿಜಯ್.
ಈ ಮೂರು ಸನ್ನಿವೇಶಗಳು ಸಾಕು ‘ವಿಜಯಾನಂದ’ ಸಿನಿಮಾ ಬಗ್ಗೆ ನಿಮಗೊಂದು ಐಡಿಯಾ ಬಂದಿರುತ್ತದೆ. ಸಾಮಾನ್ಯವಾಗಿ ಹೊಸ ಕೆಲಸಕ್ಕೆ ಕೈ ಹಾಕಿದಾಗ ಇರುವ ವೇಗ ದಿನಕಳೆದಂತೆ ಕಡಿಮೆಯಾಗುತ್ತದೆ. ವರ್ಷಗಳು ಉರುಳಿದಂತೆ ಇನ್ನು ಸಾಕು ಅಂತನ್ನಿಸಿಬಿಡುತ್ತದೆ. ವಯಸ್ಸಾದಂತೆ ನಿವೃತ್ತಿಯ ಕಡೆ ಗಮನ ಹೋಗಿಬಿಡುತ್ತದೆ. ಆದರೆ 26ನೇ ವಯಸ್ಸಿನಲ್ಲಿ ಮೊದಲ ಲಾರಿ ಖರೀದಿ ಮಾಡಿದ ವಿಜಯ್, ಹಲವು ಸವಾಲುಗಳನ್ನು ಮೆಟ್ಟಿ ನಿಂತು, ಹಂಗಿಸಿದವರಿಗೆ ಯಶಸ್ಸಿನ ಮೂಲಕ ಉತ್ತರ ಕೊಡುತ್ತಾರೆ. ಅವರಿಗೆ 50 ವರ್ಷ ದಾಟಿದ ಬಳಿಕವೂ ಅದೇ ವೇಗ, ಹುಮ್ಮಸ್ಸು, ಹೋರಾಟದ ಛಲ. ಸಮಸ್ಯೆಗಳು ಬಂದವೆಂದು ಸೋತು ಸುಮ್ಮನಾಗದೇ, ಹಿಂದೇಟು ಹಾಕದೇ, ಅಪ್ಪನಿಂದ ಕಲಿತ ಪ್ರಾಮಾಣಿಕತೆಯನ್ನು ಮಗನಿಗೂ ಕಲಿಸಿ, ಮುನ್ನಡೆಸುತ್ತಾರೆ. ಹಾಗಾದರೆ, ಒಂದು ಲಾರಿ ಇಂದು 5500 ಲಾರಿಗಳು ಹೇಗಾದವು? ವಿಆರ್ಎಲ್ ಬಸ್ ಸೇವೆ ಆರಂಭಿಸಿದ್ದೇಕೆ? ಪತ್ರಿಕೋದ್ಯಮಕ್ಕೆ ಬರಲು ಕಾರಣವೇನು? ಈ ಎಲ್ಲ ಉದ್ಯಮಗಳಲ್ಲೂ ಅವರು ಗೆಲುವು ಕಂಡಿದ್ದು ಹೇಗೆ? ಎದುರಿಸಿದ ಸಮಸ್ಯೆಗಳೇನು? ಅಡ್ಡಗಾಲು ಹಾಕಿದ್ದು ಯಾರು? ಬೆನ್ನು ತಟ್ಟಿ, ಬೆಂಬಲವಾಗಿ ನಿಂತವರು ಯಾರು? ಒಬ್ಬ ಸಾಮಾನ್ಯ ವ್ಯಕ್ತಿ ಅಸಾಮಾನ್ಯ ಸಾಧನೆ ಮಾಡಿದ್ದಾದರೂ ಹೇಗೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ‘ವಿಜಯಾನಂದ’ ಸಿನಿಮಾದಲ್ಲಿ ದೊರೆಯಲಿದೆ.
ಬಯೋಪಿಕ್ಗಳಲ್ಲಿ ನಟಿಸುವುದು ಸಾಮಾನ್ಯದ ಮಾತಲ್ಲ, ಸರಳವೂ ಅಲ್ಲ. ಆ ವ್ಯಕ್ತಿಯಂತೆ ಕಾಣಿಸಬೇಕು, ಅವರಂತೆ ನಡೆಯಬೇಕು, ಮಾತನಾಡಬೇಕು, ಬಾಡಿ ಲಾಂಗ್ವೇಜ್... ಹೀಗೆ ಪ್ರತಿಯೊಂದು ಅಂಶವೂ ಮುಖ್ಯವಾಗಿರುತ್ತದೆ. ಹೀಗಿರುವಾಗ ನಟ ನಿಹಾಲ್ ಎರಡನೇ ಚಿತ್ರದಲ್ಲಿಯೇ ಇಂತಹ ಸವಾಲಿನ ಪಾತ್ರಕ್ಕೆ ಒಡ್ಡಿಕೊಂಡಿದ್ದಾರೆ, ಜತೆಗೆ ಅದರಲ್ಲಿ ಗೆದ್ದಿದ್ದಾರೆ ಕೂಡ. ಡಾ. ವಿಜಯ ಸಂಕೇಶ್ವರ ಪಾತ್ರದಲ್ಲಿ ಮೂರು ವಯೋಮಾನಗಳ ಬೇರೆ ಬೇರೆ ಶೇಡ್ಗಳಲ್ಲಿ ಮಿಂಚಿದ್ದಾರೆ ನಿಹಾಲ್. ಬಿ.ಜಿ. ಸಂಕೇಶ್ವರ ಪಾತ್ರದಲ್ಲಿ ಅನಂತ್ ನಾಗ್ ಅವರನ್ನು ತೆರೆಯ ಮೇಲೆ ನೋಡುವುದೇ ಒಂದು ಖುಷಿ. ಬಹುಶಃ ಅವರನ್ನು ಬಿಟ್ಟರೆ ಆ ಪಾತ್ರಕ್ಕೆ ಬೇರಾರೂ ಅಷ್ಟು ಅದ್ಭುತವಾಗಿ ಜೀವ ತುಂಬಲು ಸಾಧ್ಯವಾಗುತ್ತಿರಲಿಲ್ಲ ಅಂತನ್ನಿಸುವ ಮಟ್ಟಿಗೆ ಇಷ್ಟವಾಗುತ್ತಾರೆ ಅನಂತ್ ನಾಗ್. ಪತಿ-ಮಗನ ನಡುವಿನ ಹಗ್ಗಜಗ್ಗಾಟದಲ್ಲಿ ಸಿಲುಕುವ ಚಂದ್ರಮ್ಮ ಪಾತ್ರದಲ್ಲಿ ವಿನಯಾ ಪ್ರಸಾದ್ ಗಮನ ಸೆಳೆಯುತ್ತಾರೆ. ಶ್ರೀಮತಿ ಲಲಿತಾ ಸಂಕೇಶ್ವರ ಪಾತ್ರದಲ್ಲಿ ಸಿರಿ ಪ್ರಹ್ಲಾದ್ ಕೂಡ ಹೇಳಿ ಮಾಡಿಸಿದಂತಿದ್ದಾರೆ. ಡಾ. ಆನಂದ ಸಂಕೇಶ್ವರ ಪಾತ್ರದಲ್ಲಿ ಭರತ್ ಬೋಪಣ್ಣ ನಟನೆ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಪ್ರಕಾಶ್ ಬೆಳವಾಡಿ ವಿಶಿಷ್ಟ ಹಾವ-ಭಾವಗಳಿಂದ ಗಮನಸೆಳೆಯುತ್ತಾರೆ. ರವಿಚಂದ್ರನ್, ರಾಜೇಶ್ ನಟರಂಗ, ಶೈನ್ ಶೆಟ್ಟಿ, ದಯಾಳ್ ಪದ್ಮನಾಭನ್, ಉಮೇಶ್ ಬಣಕಾರ್, ಅರ್ಚನಾ ಕೊಟ್ಟಿಗೆ, ಪ್ರಸಾದ್ ವಸಿಷ್ಠ, ಕಾರ್ತಿಕ್ ಪತ್ತಾರ್, ನಟರಾಜ್ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ನಿರ್ದೇಶಕಿ ರಿಷಿಕಾ ಶರ್ಮಾ ಅವರಿಗೆ ‘ವಿಜಯಾನಂದ’ ಎರಡನೆಯ ಚಿತ್ರ. ಕರಿಯರ್ ಪ್ರಾರಂಭದಲ್ಲೇ ಲೆಜೆಂಡ್ ಒಬ್ಬರ ಬಯೋಪಿಕ್ ಮಾಡುವ ಅವರ ಧೈರ್ಯ ಮೆಚ್ಚುವಂತದು. ಸಿನಿಮಾದ ಶೇಕಡಾ 99ರಷ್ಟು ಭಾಗ ಡಾ. ವಿಜಯ ಸಂಕೇಶ್ವರ ಜೀವನಾಧಾರಿತ ಕಥೆಯಾಗಿರುವ ಕಾರಣ, ಅದನ್ನು ಅಷ್ಟೇ ನೈಜತೆಯಿಂದ ಕಟ್ಟಿಕೊಟ್ಟಿದ್ದಾರೆ ರಿಷಿಕಾ. ಕಥೆಯೊಂದಿಗೆ ಪ್ರೇಕ್ಷಕರನ್ನೂ 1970, 80ರ ದಶಕಕ್ಕೆ ಕರೆದೊಯ್ಯುವ ಅವರ ಚಾಕಚಕ್ಯತೆ, ಆ ಕಾಲಘಟ್ಟ ಮತ್ತು ಪರಿಸರವನ್ನು ಹಿಡಿದಿಟ್ಟಿರುವ ರೀತಿ, ಯಾವ ವಿಷಯವನ್ನು ಎಷ್ಟು ಹೇಳಬೇಕು? ಯಾಕೆ ಹೇಳಬೇಕು? ಎಂಬ ಅವರ ಸ್ಪಷ್ಟತೆ ಸಿನಿಮಾ ನೋಡಿದವರಿಗೆ ಆಶ್ಚರ್ಯ ಉಂಟು ಮಾಡಬಹುದು. ಗೋಪಿ ಸುಂದರ್ ಸಂಗೀತದಲ್ಲಿ ಮೂಡಿಬಂದಿರುವ ‘ಹಾಗೆ ಆದ ಆಲಿಂಗನ...’ ಹಾಡು ಸಂಗೀತ ಪ್ರಿಯರ ಮನಗೆದ್ದಿದೆ. ಅದನ್ನು ಸಿನಿಮಾದಲ್ಲಿ ನೋಡಿದರೆ ಮತ್ತಷ್ಟು ಹತ್ತಿರವಾಗುವುದರಲ್ಲಿ ಎರಡು ಮಾತಿಲ್ಲ. ಜತೆಗೆ ಕೆಲವೆಡೆ ಸನ್ನಿವೇಶಗಳ ಬದಲಾಗಿ ಹಾಡಿನ ಬಿಟ್ಗಳನ್ನು ಬಳಸಲಾಗಿದ್ದು, ಕಥೆಗೆ ಪೂರಕವಾಗಿದೆ. ಗೋಪಿ ಸುಂದರ್ ಹಿನ್ನೆಲೆ ಸಂಗೀತವೂ ಸುಂದರವಾಗಿ ಮೂಡಿಬಂದಿದೆ. ಛಾಯಾಗ್ರಾಹಕ ಕೀರ್ತನ್ ಪೂಜಾರಿ ಅವರ ಇದುವರೆಗಿನ ಬೆಸ್ಟ್ ಕೆಲಸವನ್ನು ಈ ಚಿತ್ರದಲ್ಲಿ ನೋಡಬಹುದು. ರಘು ನಿಡುವಳ್ಳಿ ಅವರ ಸಂಭಾಷಣೆ ಮಾಸ್ ಮತ್ತು ಕ್ಲಾಸ್ ಎರಡೂ ರೀತಿಯ ಪ್ರೇಕ್ಷಕರಿಗೆ ಇಷ್ಟವಾಗಲಿದೆ.
ಒಟ್ಟಾರೆ ಕನಸು ಕಾಣುವ ಪ್ರತಿಯೊಬ್ಬರೂ, ಆ ಕನಸು ನನಸು ಮಾಡಿಕೊಳ್ಳುವ ಸ್ಪೂರ್ತಿಗಾಗಿ ‘ವಿಜಯಾನಂದ’ ಚಿತ್ರವನ್ನು ನೋಡಬೇಕು.