

ಬೆಂಗಳೂರು: ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರ ಜೀವನವನ್ನಾಧರಿಸಿ ನಿರ್ಮಾಣವಾದ 'ವಿಜಯಾನಂದ' ಚಿತ್ರವು ಅತ್ಯುತ್ತಮ ಬಯೋಪಿಕ್ ಸೇರಿದಂತೆ ಐದು ವಿಭಾಗಗಳಲ್ಲಿ ಚಿತ್ರಸಂತೆ ವಾರ್ಷಿಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಕಳೆದ ಕೆಲದ ವರ್ಷಗಳಿಂದ ಚಿತ್ರಸಂತೆ ನಿಯತಕಾಲಿಕೆಯು ವಾರ್ಷಿಕ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು, ಇಂದು ಸಂಜೆ ಚೌಡಯ್ಯ ಸ್ಮಾರಕ ಭವನದಲ್ಲಿ 2022ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
'ವಿಜಯಾನಂದ' ಚಿತ್ರದ ನಿರ್ಮಾಪಕ ಡಾ. ಆನಂದ ಸಂಕೇಶ್ವರ ಅವರಿಗೆ ಅತ್ಯುತ್ತಮ ಬಯೋಪಿಕ್ ಪ್ರಶಸ್ತಿ ಸಿಕ್ಕರೆ, ಚಿತ್ರದ ನಿರ್ದೇಶಕಿ ರಿಷಿಕಾ ಶರ್ಮಾ ಅವರು ಅತ್ಯುತ್ತಮ ನಿರ್ದೇಶಕಿಯಾಗಿ ಹೊರಹೊಮ್ಮಿದ್ದಾರೆ. ಡಾ. ವಿಜಯ ಸಂಕೇಶ್ವರ ಅವರ ಪಾತ್ರವನ್ನು ನಿರ್ವಹಿಸಿರುವ ನಿಹಾಲ್ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ವಸ್ತ್ರವಿನ್ಯಾಸಕಿ ಲಕ್ಷ್ಮೀ ಕೃಷ್ಣ ಅವರು ಅತ್ಯುತ್ತಮ ವಸ್ತ್ರ ವಿನ್ಯಾಸಕಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ರವಿಚಂದ್ರನ್ ಅವರು ವಿಶೇಷ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅಶ್ವಿನಿ ಪುನೀತ್‌ರಿಂದ ಉದ್ಘಾಟನೆ: 10ನೇ ವರ್ಷದ ಸಂಭ್ರಮದಲ್ಲಿರುವ 'ಚಿತ್ರಸಂತೆ' ಪತ್ರಿಕೆಯು, ಕಳೆದ ಎರಡು ವರ್ಷಗಳಿಂದ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಈ ಬಾರಿಯ ಕಾರ್ಯಕ್ರಮವನ್ನು ಪುನೀತ್ ಅವರ ಪತ್ನಿ ಮತ್ತು ನಿರ್ಮಾಪಕಿ ಅಶ್ವಿನಿ ಪುನೀತ್ ಉದ್ಘಾಟಿಸಲಿದ್ದಾರೆ. ಧ್ರುವ ಸರ್ಜಾ ವಿಶೇಷ ಅತಿಥಿಯಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ ಐದಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ಶುರುವಾಗಲಿದ್ದು, ಹಲವು ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಮುಖವಾಗಿ ಹಿರಿಯ ನಟ ದೇವರಾಜ್ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಚಿತ್ರರಂಗದಲ್ಲಿ 25 ವರ್ಷ ಪೂರೈಸಿರುವ ನಟಿ ಶ್ರುತಿ ಅವರಿಗೆ 'ಚಿತ್ರಸಂತೆ'ಯ ವಿಶೇಷ ಪ್ರಶಸ್ತಿ ಸಂದಾಯವಾಗಲಿದೆ.
ಈ ಬಾರಿ ಪ್ರಶಸ್ತಿ ಕಣದಲ್ಲಿ 'ಕಾಂತಾರ', 'ಕೆಜಿಎಫ್ 2, 'ಗಂಧದಗುಡಿ', 'ಜೇಮ್ಸ್', 777 ಚಾರ್ಲಿ', 'ಗಾಳಿಪಟ 2', 'ತ್ರಿವಿಕ್ರಮ', 'ಏಕ್ ಲವ್ ಯಾ', 'ಮಾನ್ಸೂನ್ ರಾಗ", 'ಬನಾರಸ್', 'ವೇದ', 'ತೋತಾಪುರಿ', 'ಗುರು ಶಿಷ್ಯರು', 'ಲೈಫ್ 360', "ಶಿವ 143, 'ಕಂಬ್ಳಿಹುಳ' ಮುಂತಾದ ಚಿತ್ರಗಳು ಹಲವು ವಿಭಾಗಗಳಲ್ಲಿ ಸ್ಪರ್ಧಿಸುತ್ತಿವೆ.