ಕಾಯಕಯೋಗಿಯಾಗಿ ಕೆಲಸ ಮಾಡಿದ್ರೆ ಫಲಿತಾಂಶ ಹೇಗಿರುತ್ತೆ ಅನ್ನೋದಕ್ಕೆ ವಿಜಯಾನಂದ ಉದಾಹರಣೆ: ಜಗದೀಶ ಶೆಟ್ಟರ್​

Vijay Sankeshwar
Published on

ಹುಬ್ಬಳ್ಳಿ: ಕಾಯಕಯೋಗಿಯಾಗಿ ಕೆಲಸ ಮಾಡಿದ್ರೆ ಫಲಿತಾಂಶ ಹೇಗಿರುತ್ತೆ ಅನ್ನೋದಕ್ಕೆ ಇಂದು ಬಿಡುಗಡೆಯಾಗಿರುವ ವಿಜಯಾನಂದ ಸಿನಿಮಾ ಒಂದು ಉತ್ತಮ ಉದಾಹರಣೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ಹುಬ್ಬಳ್ಳಿಯ ಪಿವಿಆರ್​ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ​ ಜಗದೀಶ್​ ಶೆಟ್ಟರ್​, ವಿಜಯ ಸಂಕೇಶ್ವರರು ಜೀವನದಲ್ಲಿ ಏನು ಸಾಧನೆ ಮಾಡಿದ್ದಾರೋ ಆ ಕುರಿತು ನಿರ್ಮಾಣವಾಗಿರುವ ಮತ್ತು ಇಂದು ತೆರೆಕಂಡಿರುವ ವಿಜಯಾನಂದ ಸಿನಿಮಾ ಯುವ ಜನಾಂಗಕ್ಕೆ ಮಾರ್ಗದರ್ಶನ ನೀಡುವಂಥದ್ದು, ಒಬ್ಬ ವ್ಯಕ್ತಿ ಪರಿಶ್ರಮದಿಂದ ಮತ್ತು ಬಹಳ ನಿಷ್ಠೆಯಿಂದ ಕೆಲಸ ಮಾಡಿದಾಗ ಏನು ಫಲಿತಾಂಶ ಬರುತ್ತದೆಯೋ ಅದಕ್ಕೆ ಈ ವಿಜಯಾನಂದ ಸಿನಿಮಾ ಒಂದು ಉತ್ತಮ ಉದಾಹರಣೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯಾನಂದ ಸಿನಿಮಾ ಬಹಳ ಅತ್ಯುತ್ತಮವಾಗಿ ನಿರ್ಮಾಣವಾಗಿದೆ. ನಮ್ಮ ಯುವಕರಿಗೆ ಮಾರ್ಗದರ್ಶನ ಮಾಡುವಂತಹ ಸಿನಿಮಾ ಇದಾಗಲಿದೆ. ನಮ್ಮ ಮನೆಯಲ್ಲೂ ಸಿನಿಮಾದ ಶೂಟಿಂಗ್​ ನಡೆಯಿತು. ಈ ವೇಳೆ ಸಿನಿಮಾದ ಕಲಾವಿದರನ್ನು ನಾನು ಭೇಟಿಯಾಗಿ, ಶುಭ ಕೋರಿದ್ದೆ. ಈಗಲೂ ಶುಭ ಕೋರುತ್ತೇನೆ. ಇಡೀ ಸಿನಿಮಾ ತಂಡಕ್ಕೆ ಒಳ್ಳೆಯದಾಗಲಿ ಎಂದು ಮಾಜಿ ಸಿಎಂ ಹಾರೈಸಿದರು.

ಸಮೂಹ ಸಂಸ್ಥೆಗಳ ಎಂಡಿ ಡಾ. ಆನಂದ ಸಂಕೇಶ್ವರ ನಿರ್ವಿುಸಿರುವ ‘ವಿಜಯಾನಂದ’ ಚಿತ್ರಕ್ಕೆ ‘ಟ್ರಂಕ್’ ಖ್ಯಾತಿಯ ರಿಷಿಕಾ ಶರ್ಮಾ ಆಕ್ಷನ್ ಕಟ್ ಹೇಳಿದ್ದಾರೆ. ದಕ್ಷಿಣ ಭಾರತದ ಹೆಸರಾಂತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಸಂಗೀತ ನೀಡಿದ್ದು, ಕೀರ್ತನ್ ಪೂಜಾರಿ ಛಾಯಾಗ್ರಹಣದಲ್ಲಿ ಸಿನಿಮಾ ಮೂಡಿಬಂದಿದೆ. ಈಗಾಗಲೇ ಚಿತ್ರತಂಡ ದೆಹಲಿ, ಮುಂಬೈ, ಅಹ್ಮದಾಬಾದ್, ಲಖನೌ, ಇಂದೋರ್, ಚೆನ್ನೈ, ಕೊಚ್ಚಿ, ಹೈದರಾಬಾದ್ ಸೇರಿದಂತೆ ಹಲವೆಡೆ ಪ್ರಚಾರ ಮಾಡಿದ್ದು, ದೇಶದ ಮೂಲೆಮೂಲೆಗಳಿಗೂ 32 ಟ್ಯಾಬ್ಲೋಗಳು ಸಂಚರಿಸಿವೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net