ಜೋಗ್ 101 ಫಸ್ಟ್ ಲುಕ್; ವಿಜಯ್ ಆ್ಯಂಡ್ ವಿಜಯ್ ಕಾಂಬಿನೇಷನ್‌ನ ಸಿನಿಮಾ

ಜೊಗ
Published on

ಬೆಂಗಳೂರು: ಇತ್ತೀಚೆಗಷ್ಟೆ ‘ಕದ್ದ ಚಿತ್ರ’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟ ವಿಜಯ್ ರಾಘವೇಂದ್ರ, ಇದೀಗ ಮತ್ತೊಂದು ಸಿನಿಮಾ ‘ಜೋಗ್ 101’ ಪ್ರೋಮೋ ರಿಲೀಸ್‌ನಲ್ಲಿ ಭಾಗವಹಿಸಿದ್ದರು. ಸಸ್ಪೆನ್ಸ್ ಥ್ರಿಲ್ಲರ್ ಜಾನರ್‌ನ ಈ ಚಿತ್ರಕ್ಕೆ ವಿಜಯ್ ರಾಘವೇಂದ್ರ ನಾಯಕನಾಗಿದ್ದು, ವಿಜಯ್ ಕನ್ನಡಿಗ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.

ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಈ ಹಿಂದೆ ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಈಗ ಚಿತ್ರದಲ್ಲಿ ವಿಜಯ್ ಮೊದಲ ನೋಟವನ್ನು ವಿಡಿಯೋ ಮೂಲಕ ಅನಾವರಣ ಮಾಡಲಾಗಿದೆ. ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರಿಗೆ ತೇಜಸ್ವಿನಿ ಶೇಖರ್ ನಾಯಕಿಯಾಗಿದ್ದಾರೆ. ಕನ್ನಡದ ‘ಸಂಘರ್ಷ’, ‘ರಾಧಿಕಾ’ ಸೇರಿ ಕೆಲವು ತಮಿಳು ಧಾರಾವಾಹಿಗಳಲ್ಲಿ ನಟಿಸಿರುವ ತೇಜಸ್ವಿನಿ, ‘ಲಾಂಗ್ ಡ್ರೈವ್’ ಎಂಬ ಚಿತ್ರದಲ್ಲೂ ನಾಯಕಿಯಾಗಿ ಮಿಂಚಿದ್ದಾರೆ. ಇದೀಗ ‘ಜೋಗ್ 101’ ಚಿತ್ರದಲ್ಲಿ ವಿಜಯ್ ರಾಘವೇಂದ್ರಗೆ ಜೋಡಿಯಾಗಿದ್ದಾರೆ. ಜತೆಗೆ ಗೋವಿಂದೇ ಗೌಡ, ಕಡ್ಡಿಪುಡಿ ಚಂದ್ರು, ರಾಜೇಶ್ ನಟರಂಗ, ತಿಲಕ್, ನಿರಂಜನ್ ದೇಶಪಾಂಡೆ, ಶಶಿಧರ್, ಪ್ರಸನ್ನ, ಸುಂದರಶ್ರೀ, ಹರ್ಷಿತಾ ಗೌಡ ಮುಖ್ಯ ತಾರಾಬಳಗದಲ್ಲಿದ್ದಾರೆ.

ಚಿತ್ರಕ್ಕೆ ಅವಿನಾಶ್ ಆರ್. ಬಾಸೂತ್ಕರ್ ಸಂಗೀತವಿರಲಿದ್ದು, ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ ಹಾಗೂ ಮನ್ವರ್ಷಿ ಗೀತೆಗಳನ್ನು ರಚಿಸಿದ್ದಾರೆ. ಉಳಿದಂತೆ ಚಿತ್ರಕ್ಕೆ ಸುನೀತ್ ಹಲಗೇರಿ ಛಾಯಾಗ್ರಹಣ, ಮೋಹನ್ ರಂಗಕಹಳೆ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಕಲೈ ಮಾಸ್ಟರ್ ನೃತ್ಯ ನಿರ್ದೇಶನವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net