ತಮ್ಮದೇ ಚಿತ್ರಗಳ ದಾಖಲೆಗಳನ್ನು 'ಸಲಾರ್​' ಮುರಿಯಲಿದೆಯಂತೆ … ವಿಜಯ್ ಕಿರಗಂದೂರು ವಿಶ್ವಾಸ

Salaar
Published on

ಮುಂಬೈ: ಮುಂದಿನ ವರ್ಷದ ಅತೀ ನಿರೀಕ್ಷಿತ ಚಿತ್ರಗಳ ಪೈಕಿ ಪ್ರಭಾಸ್​ ಅಭಿನಯದ 'ಸಲಾರ್​' ಸಹ ಒಂದು. ಈ ಚಿತ್ರವು ತಮ್ಮ ಸಂಸ್ಥೆಯ ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯುತ್ತದೆ ಎಂಬ ವಿಶ್ವಾಸವನ್ನು ಹೊಂಬಾಳೆ ಫಿಲಂಸ್​ ವಿಜಯ್​ ಕಿರಗಂದೂರು ವ್ಯಕ್ತಪಡಿಸಿದ್ದಾರೆ.

ವಿಜಯ್​ ಕಿರಗಂದೂರು ಇತ್ತೀಚೆಗೆ ಮುಂಬೈನಲ್ಲಿ ನಡೆದ ಒಂದು ಸಮಾರಂಭವೊಂದರಲ್ಲಿ ಭಾಗವಹಿಸಿ ಹಲವು ವಿಚಾರಗಳನ್ನು ಮಾತನಾಡಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ತಮ್ಮ ಸಂಸ್ಥೆಯು ಮೂರು ಸಾವಿರ ಕೋಟಿ ಹೂಡಿಕೆ ಮಾಡುತ್ತದೆ ಎಂಬುದರಿಂದ ಹಿಡಿದು, 'ಕಾಂತಾರ 2' ಚಿತ್ರದವರೆಗೂ ಹಲವು ವಿಷಯಗಳನ್ನು ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮದೇ ಸಂಸ್ಥೆ ನಿರ್ಮಿಸುತ್ತಿರುವ ಇನ್ನೊಂದು ಮಹತ್ವಾಕಾಂಕ್ಷೆಯ ಚಿತ್ರ 'ಸಲಾರ್​' ಬಗ್ಗೆಯೂ ಮಾತನಾಡಿದ್ದಾರೆ.

'ಈಗಾಗಲೇ' ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಜನವರಿ ಹೊತ್ತಿಗೆ ಚಿತ್ರೀಕರಣ ಸಂಪೂರ್ಣವಾಗಲಿದೆ. ಗ್ರಾಫಿಕ್ಸ್​ ಕೆಲಸಗಳಿಗೆ ಆರು ತಿಂಗಳಾದರೂ ಬೇಕು. ಅವೆಲ್ಲವನ್ನೂ ಮುಗಿಸಿ, ಸೆ. 28ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಅದೊಂದು ಔಟ್​ ಆಂಡ್​ ಔಟ್​ ಆಕ್ಷನ್​ ಚಿತ್ರ. ಚೆನ್ನಾಗಿ ಮೂಡಿ ಬಂದಿದೆ. ಆ ಚಿತ್ರವು ನಮ್ಮ ಸಂಸ್ಥೆಯ ಚಿತ್ರಗಳಾದ 'ಕೆಜಿಎಫ್​', 'ಕೆಜಿಎಫ್​ 2' ಮತ್ತು 'ಕಾಂತಾರ' ಚಿತ್ರಗಳು ಮಾಡಿರುವ ದಾಖಲೆಗಳನ್ನು ಮುರಿಯಲಿದೆ ಎಂಬ ನಂಬಿಕೆ ನನಗಿದೆ' ಎಂದಿದ್ದಾರೆ.

'ಸಲಾರ್​' ಚಿತ್ರದ ಮೂಲಕ ಟಾಲಿವುಡ್​ಗೆ ಅಧಿಕೃತವಾಗಿ ಎಂಟ್ರಿ ಕೊಡುತ್ತಿದ್ದಾರೆ ವಿಜಯ್​ ಕಿರಗಂದೂರು. 'ಸಲಾರ್​' ಚಿತ್ರವು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಪ್ರಭಾಸ್​ ನಾಯಕನಾಗಿ ನಟಿಸುತ್ತಿದ್ದಾರೆ. ಇನ್ನು, ಮಲಯಾಳಂ ನಟ ಪೃಥ್ವಿರಾಜ್​ ನೆಗೆಟಿವ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಕನ್ನಡದ ಪ್ರಶಾಂತ್​ ನೀಲ್​ ನಿರ್ದೇಶನ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net