

ಬೆಂಗಳೂರು: ಯಶ್ ಅಭಿನಯದ 'ಕೆಜಿಎಫ್ 2' ಚಿತ್ರ ಬಿಡುಗಡೆಯಾಗಿ ಎಂಟು ತಿಂಗಳುಗಳಾಗಿವೆ. ಈ ಎಂಟು ತಿಂಗಳುಗಳಲ್ಲಿ ಯಶ್ ಅಭಿನಯದ ಹೊಸ ಚಿತ್ರ ಘೋಷಣೆಯಾಗಿಲ್ಲ. ಯಶ್ ಅಭಿನಯದ ಹೊಸ ಚಿತ್ರ ಯಾವುದು? ಯಾರು ನಿರ್ದೇಶನ ಮಾಡುತ್ತಾರೆ? ಯಾರು ನಿರ್ಮಿಸುತ್ತಾರೆ? ಎಂಬೆಲ್ಲ ಕುತೂಹಲಗಳು ಅವರ ಅಭಿಮಾನಿ ವಲಯದಲ್ಲಿ ಇದೆ. ಆದರೆ, ಯಶ್ ಮಾತ್ರ ತಮ್ಮ ಮುಂದಿನ ಚಿತ್ರ ಯಾವುದು ಎಂಬ ರಹಸ್ಯವನ್ನು ಬಿಟ್ಟುಕೊಟ್ಟಿಲ್ಲ.
ಹೀಗಿರುವಾಗಲೇ, ಯಶ್ ಹುಟ್ಟುಹಬ್ಬಕ್ಕೆ ಅವರ ಹೊಸ ಚಿತ್ರದ ಅಧಿಕೃತ ಘೋಷಣೆ ಆಗಲಿದೆ ಎಂಬ ಸುದ್ದಿಯೊಂದು ಕೇಳಿ ಬರುತ್ತಿದೆ. ಯಶ್ ತಮ್ಮ ಹುಟ್ಟುಹಬ್ಬವನ್ನು ಜ.8ಕ್ಕೆ ಆಚರಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಹೊಸ ಚಿತ್ರದ ಬಗ್ಗೆ ಏನಾದರೂ ವಿಷಯ ಹೊರಬೀಳಬಹುದು ಎಂಬ ನಿರೀಕ್ಷೆ ಇದೆ.
ತಮ್ಮ ಹೊಸ ಚಿತ್ರದ ಕುರಿತು ಮಾತನಾಡಿರುವ ಅವರು, 'ನನ್ನ ಮುಂದಿನ ಚಿತ್ರ ಯಾವುದು? ಮುಂದಿನ ನಡೆ ಏನು ಎಂದು ಬಹಳಷ್ಟು ಜನ ಕೇಳುತ್ತಿದ್ದಾರೆ. 'ಕೆಜಿಎಫ್ 2' ಚಿತ್ರದ ಯಶಸ್ಸು ಮತ್ತು ಖ್ಯಾತಿಯನ್ನು ಎನ್ಕ್ಯಾಶ್ ಮಾಡಿಕೋ, ಬೇಗೆ ಇನ್ನೊಂದು ಸಿನಿಮಾ ಮಾಡು ಎಂದು ಹೇಳಿದವರಿದ್ದಾರೆ. ಆದರೆ, ಹಣ ಮಾಡೋದು ನನ್ನ ಉದ್ದೇಶ ಅಲ್ಲ. ಒಂದು ಸಿನಿಮಾ ಎಂದರೆ ಅದು ನನ್ನನ್ನು ಮೊದಲು ಎಕ್ಸೈಟ್ ಮಾಡೇಕು. ಜನ ಬಯಸಿದ್ದನ್ನು ನಾನು ಬಹಳ ಚೆನ್ನಾಗಿ ಕೊಡಬೇಕು ಎನ್ನುವುದು ನನ್ನ ಆಸೆ. ಹಾಗಾಗಿ, ಅರೆಬರೆಯಾಗಿರುವಾಗಿ ಘೋಷಿಸುವುದಕ್ಕೆ ಇಷ್ಟವಿಲ್ಲ. ಎಲ್ಲವೂ ಒಂದು ಹಂತಕ್ಕೆ ಬಂದ ಮೇಲೆ ಹೇಳುತ್ತೇನೆ' ಎಂದು ಹೇಳಿದ್ದಾರೆ ಯಶ್.
ಈ ಮಧ್ಯೆ, ಯಶ್ ಅಭಿನಯದ 19ನೇ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಿಸುತ್ತಿದೆ, ನರ್ತನ್ ನಿರ್ದೇಶನ ಮಾಡುತ್ತಿದ್ದಾರೆ ಎಂದು ಸಾರುವ ಪೋಸ್ಟರ್ಗಳು ಸೋಷಿಯಲ್ ಮೀಡಿಯಾದಲ್ಲಿ ಕೆಲವು ದಿನಗಳ ಹಿಂದೆ ಹರಿದಾಡಿದ್ದವು. ಆದರೆ, ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯವರಾಗಲೀ, ಯಶ್ ಕಡೆಯಿಂದಾಗಲೀ ಈ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.