ಮೂರು ವರ್ಷಗಳ ನಂತರ ವಿಹಾನ್​ ರೀಎಂಟ್ರಿ ...

Vihan Gowda
Published on

ಬೆಂಗಳೂರು: 'ಪಂಚತಂತ್ರ' ನಂತರ ಚಿತ್ರರಂಗದಿಂದ ದೂರವೇ ಇದ್ದ ವಿಹಾರ್​, ಈಗ ಮತ್ತೆ ರೀಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಈ ಸಲ ವಿಹಾನ್‌ಗೆ ರಕ್ಷಿತ್‌ ಶೆಟ್ಟಿ ಸಾಥ್‌ ನೀಡುತ್ತಿದ್ದು, ತಮ್ಮ ಪರಂವಾ ಸ್ಟುಡಿಯೋಸ್​ ನಿರ್ಮಾಣದ ಹೊಸ ಚಿತ್ರದಲ್ಲಿ ವಿಹಾನ್​ಗೆ ಒಂದು ಅವಕಾಶ ಕೊಡುತ್ತಿದ್ದಾರೆ.

ರಕ್ಷಿತ್‌ ಶೆಟ್ಟಿ ಅವರ ಸೆವೆನ್‌ ಆಡ್ಸ್‌ ಟೀಮ್‌ನಲ್ಲಿ ಬರಹಗಾರರಾಗಿ ಗುರುತಿಸಿಕೊಂಡಿರುವ ಚಂದ್ರಜೀತ್‌ ಬೆಳ್ಳಿಯಪ್ಪ ಈ ಹೊಸ ಚಿತ್ರದ ನಿರ್ದೇಶಕರು. ಈ ಮೊದಲು ರಿಷಬ್‌ ಶೆಟ್ಟಿ ಅವರ 'ಕಥಾಸಂಗಮ' ಸಿನಿಮಾದಲ್ಲಿನ 'ರೇನ್‌ಬೋ ಲ್ಯಾಂಡ್‌' ಏಪಿಸೋಡ್‌ ಅನ್ನು ಚಂದ್ರಜಿತ್‌ ನಿರ್ದೇಶನ ಮಾಡಿದ್ದರು. ಅದಕ್ಕೂ ಮೊದಲು 'ಅವನೇ ಶ್ರೀಮನ್ನಾರಾಯಣ' ಚಿತ್ರದ ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದರು. ಈಗ ಅವರು ಈ ಹೆಸರಿಡದ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ರೊಮ್ಯಾನ್ಸ್‌ ಡ್ರಾಮಾ ಶೈಲಿಯ ಈ ಚಿತ್ರದ ಪ್ರೀ ಪ್ರೊಡಕ್ಷನ್‌ ಕೆಲಸಗಳೂ ಈಗಾಗಲೇ ಶುರುವಾಗಿವೆ.

ಚಿತ್ರದಲ್ಲಿ ನಾಯಕನಿಗೆ ಮೂರು ಹಂತಗಳಿರಲಿವೆಯಂತೆ. ಕಾಲೇಜ್‌ ವಿದ್ಯಾರ್ಥಿ, ಕ್ರಿಕೆಟ್‌ ಆಟಗಾರ ಹಾಗೂ ಬಿಜಿನೆಸ್‌ ಮ್ಯಾನ್‌ ಆಗಿ ವಿಹಾನ್‌ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂರೂ ಶೇಡ್​ಗಳ ಪಾತ್ರಕ್ಕೆ ವಿಹಾನ್​ ಹೊಂದುತ್ತಾರೆ ಎಂಬ ಕಾರಣಕ್ಕೆ, ಅವರನ್ನು ಆಯ್ಕೆ ಮಾಡಲಾಗಿದೆ. ಈ ಚಿತ್ರಕ್ಕೆ ನಾಯಕಿಯಾಗಿ 'ನಮ್ಮನೆ ಯುವರಾಣಿ ಧಾರಾವಾಹಿ ಮೂಲಕ ಎಲ್ಲರ ಗಮನ ಸೆಳೆದ ಅಂಕಿತಾ ಅಮರ್‌ ನಟಿಸಲಿದ್ದಾರೆ.

ಈ ಚಿತ್ರದ ಶೀರ್ಷಿಕೆಯನ್ನು ಆಗಸ್ಟ್​ನಲ್ಲಿ ಅಧಿಕೃತವಾಗಿ ಘೋಷಿಸಲಾಗಲಿದ್ದು, ಸೆಪ್ಟೆಂಬರ್​ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಅಮೆರಿಕಾದ ನ್ಯೂಯಾರ್ಕ್‌ ಫಿಲಂ ಅಕಾಡೆಮಿಯಲ್ಲಿ ಪದವಿ ಪಡೆದು, ಅಲ್ಲಿಯೇ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿರುವ ಶ್ರೀವಾತ್ಸವನ್‌ ಸೆಲ್ವರಾಜನ್‌ ಈ ಸಿನಿಮಾಕ್ಕೆ ಕ್ಯಾಮರಾ ಹಿಡಿಯಲಿದ್ದಾರೆ. ಇದು ಅವರ ಚೊಚ್ಚಲ ಚಿತ್ರವಾಗಿರಲಿದೆ. ಗಗನ್‌ ಬದೇರಿಯಾ ಸಂಗೀತ ಸಂಯೋಜಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net