

ಕೊಚ್ಚಿ: ಒಂದೇ ರೂಪದ ಏಳು ಮಂದಿ ಈ ಜಗತ್ತಿನಲ್ಲಿ ಇರುತ್ತಾರೆ ಎಂಬ ನಂಬಿಕೆಯಿದೆ. ಅದರಲ್ಲೂ ಸೆಲೆಬ್ರಿಟಿಗಳ ವಿಚಾರಕ್ಕೆ ಬಂದಾಗ ಅವರಂತೆಯೇ ಕಾಣುವ ಮತ್ತೊಬ್ಬರನ್ನು ನೋಡುವುದೇ ಒಂದು ಖುಷಿ. ಡಾ. ರಾಜ್ಕುಮಾರ್, ವಿಷ್ಣುವರ್ಧನ್, ರವಿಚಂದ್ರನ್, ಅಂಬರೀಷ್, ಸಲ್ಮಾನ್ ಖಾನ್, ಶಾರುಖ್ ಖಾನ್, ಐಶ್ವರ್ಯಾ ರೈ ಸೇರಿದಂತೆ ಅನೇಕ ಸೆಲೆಬ್ರಿಟಿಗಳನ್ನು ಹೋಲುವ ಮತ್ತೊಬ್ಬರನ್ನು ನೋಡಿದ್ದೇವೆ. ಇದೀಗ ಸೂಪರ್ ರಜಿನಿಕಾಂತ್ರನ್ನೇ ಹೋಲುವ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಸಂಚಲನ ಸೃಷ್ಟಿಸಿದ್ದಾರೆ.
ಸದ್ಯ ಜೂನಿಯರ್ ರಜಿನಿಕಾಂತ್ ಎನಿಸಿಕೊಂಡಿರುವ ವ್ಯಕ್ತಿಯ ಹೆಸರು ಸುಧಾಕರ್ ಪ್ರಭು. ಇವರು ಫೋರ್ಟ್ ಕೊಚ್ಚಿಯ ಪಟ್ಟಾಲಂ ರಸ್ತೆಯಲ್ಲಿ ಟೀ ಅಂಗಡಿ ನಡೆಸುತ್ತಿದ್ದಾರೆ. ಸಿನಿಮಾ ಹೊರತಾಗಿ ರಜಿನಿಕಾಂತ್ ಅವರು ಸಾಮಾನ್ಯ ಜೀವನದಲ್ಲಿ ಇರುವಂತೆ ಬೋಳು ತಲೆ ಮತ್ತು ಬಿಳಿ ಗಡ್ಡದ ರೂಪವನ್ನೇ ಸುಧಾಕರ್ ಪ್ರಭು ಹೋಲುತ್ತಾರೆ. ನೋಡಿದವರು ಒಂದು ಕ್ಷಣ ಹುಬ್ಬೇರಿಸುವುದಂತೂ ಖಚಿತ. ಅಷ್ಟೊಂದು ಸಾಮ್ಯತೆ ಇಬ್ಬರ ನಡುವೆಯೂ ಇದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಸುಧಾಕರ್ ಪ್ರಭು, ಒಂದು ಶಾರ್ಟ್ಸ್ ಮತ್ತು ಶರ್ಟ್ಸ್ ಧರಿಸಿದ್ದು, ರಜಿನಿಕಾಂತ್ ಮ್ಯಾನರಿಸಂ ನಕಲಿ ಮಾಡಿ, ಕೆಲವರ ಜತೆ ಮಾತನಾಡುತ್ತಿದ್ದಾರೆ. ವಿಡಿಯೋವನ್ನು @despoters_12345 ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಈವರೆಗೂ ಒಂದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.
ಮೊದಲು ಪತ್ತೆಹಚ್ಚಿದ್ದು ಯಾರು? ಅಂದಹಾಗೆ ಸುಧಾರಕ್ ಪ್ರಭು ಅವರನ್ನು ಮಲಯಾಳಂ ನಟ ಹಾಗೂ ನಿರ್ದೇಶಕ ನಾದಿರ್ಷಾ ಮೊದಲು ಪತ್ತೆಹಚ್ಚಿದರು. ಸಿನಿಮಾ ಚಿತ್ರೀಕರಣಕ್ಕಾಗಿ ಕೊಚ್ಚಿಯಲ್ಲಿ ಇರಬೇಕಾದರೆ ಸುಧಾಕರ್ ಅವರನ್ನು ಕಂಡು ಅವರೊಡನೆ ಮಾತನಾಡಿ, ಫೋಟೋ ಕ್ಲಿಕ್ಕಿಸಿಕೊಂಡು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ವೈರಲ್ ವಿಡಿಯೋದಿಂದ ಲಕ್ ರಜಿನಿಕಾಂತ್ ಹೋಲಿಕೆ ಇರುವ ಸುಧಾಕರ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸುಧಾಕರ್ ಅವರ ಲಕ್ ಬದಲಾಗಿದೆ. ಜನರು ಅವರನ್ನು ಗುರುತಿಸಲು ಶುರುವಾಗಿದ್ದು, ಸೆಲ್ಫಿಗೆ ಮುಗಿಬೀಳುತ್ತಿದ್ದಾರೆ. ಅಲ್ಲದೆ, ಕೇರಳಾದ್ಯಂತ ನಡೆಯುವ ಸಾಕಷ್ಟು ಕಾರ್ಯಕ್ರಮ ಮತ್ತು ಸಮಾರಂಭಗಳಿಗೆ ಸುಧಾಕರ್ ಅವರನ್ನು ಆಹ್ವಾನಿಸಲಾಗುತ್ತಿದೆ. ಇದರಿಂದ ಅವರಿಗೂ ಸಹ ಖುಷಿಯಾಗಿದೆ. ರಜಿನಿಯಂತೆ ಕಾಣುವ ಪಾಕ್ ಅಭಿಮಾನಿ ಪಾಕಿಸ್ತಾನದ ನಿವೃತ್ತ ಸರ್ಕಾರಿ ನೌಕರ ರೆಹಮತ್ ಗ್ಯಾಶ್ಕೊರಿ ನೋಡಲು ಹೆಚ್ಚು ಕಡಿಮೆ ರಜಿನಿಕಾಂತ್ ರೀತಿಯೇ ಇದ್ದಾರೆ. ಹೇರ್ ಸ್ಟೈಲ್ ಸಹ ಹಾಗೇ ಇದೆ. ಹೀಗಾಗಿ ಇವರನ್ನು ಪಾಕಿಸ್ತಾನದ ರಜಿನಿಕಾಂತ್ ಎಂದು ಕರೆಯುತ್ತಾರೆ. ಅವರ ವಿಡಿಯೋ ಕಳೆದ ವರ್ಷ ವೈರಲ್ ಆಗಿ ಜಾಲತಾಣದಲ್ಲಿ ಸಂಚಲನ ಮೂಡಿಸಿತ್ತು. ನನ್ನ ನಡಿಗೆ, ದೇಹ ಭಾಷೆ, ಹೇರ್ ಸ್ಟೈಲ್ ಮತ್ತು ರೈಫಲ್ ಶೂಟಿಂಗ್ ಎಲ್ಲವೂ ರಜಿನಿಕಾಂತ್ ರೀತಿಯೇ ಇದೆ ಎಂದು ಜನರು ಹೇಳುತ್ತಿದ್ದರು ಎಂದು ಸ್ವತಃ ರೆಹಮತ್ ಹೇಳಿದ್ದರು. (ಏಜೆನ್ಸೀಸ್)