ನಂದಿತು ನಂದಾದೀಪ: ಅಗಲಿದ ಚಿತ್ರರಂಗದ ಅಮ್ಮ, ಇಂದು ಸೋಲದೇವನಹಳ್ಳಿ ತೋಟದಲ್ಲಿ ಅಂತ್ಯಕ್ರಿಯೆ

Leelavathi
Published on

ಬಣ್ಣದ ಲೋಕದಲ್ಲಿ ಐದು ದಶಕ, 600ಕ್ಕೂ ಅಧಿಕ ಸಿನಿಮಾಗಳು, ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಛಾಪು ಮೂಡಿಸಿದ ಹೆಗ್ಗಳಿಕೆ, ವಿಭಿನ್ನ ಪಾತ್ರಗಳಲ್ಲಿ ಜೀವಿಸಿ ಹೃದಯದಲ್ಲಿ ಅಚ್ಚೊತ್ತಿರುವ ನಟಿ ಲೀಲಾವತಿಯವರ 86 ವರ್ಷಗಳ ಬದುಕಿನ ಪಯಣ ಸದಾ ನೆನಪಿನಂಗಳದಲ್ಲಿ ಹಚ್ಚಹಸಿರಾಗಿ ಉಳಿಯುವಂಥದ್ದು. ಸಿನಿಮಾರಂಗ ಕಂಡ ಶ್ರೇಷ್ಠ ಪ್ರತಿಭೆ ಇನ್ನೂ ನೆನಪು ಮಾತ್ರ.

ಮೂರು ತಲೆಮಾರುಗಳಿಗೆ ಚಿರಪರಿಚಿತ ನಾಯಕಿ ಲೀಲಾವತಿ. ನಾಯಕಿಗೆ ಹೇಳಿಸಿದಂತೇ ಇದ್ದ ಸುಂದರ ಮುಖ, ಅರಳು ಕಣ್ಣುಗಳು, ತಿದ್ದಿತೀಡಿದಂಥ ಹುಬ್ಬು, ಮೂಗು, ಮೈಮಾಟ ಜತೆಗೆ ಪ್ರಬುದ್ಧ ಅಭಿನಯದೊಂದಿಗೆ ಚಿತ್ರರಂಗದ ಪ್ರವೇಶ. ನಾಯಕಿಯಾಗಿ ಛಾಪು ಮೂಡಿಸಿದ ಲೀಲಾವತಿ ಪೋಷಕ ನಟಿಯಾಗಿಯೂ ಎಲ್ಲರ ಪ್ರೀತಿಗಳಿಸಿಕೊಂಡವರು.

ಬಡತನದ ವಿರುದ್ಧ ಸಂಘರ್ಷ: ಭಾವಪೂರ್ಣ ಅಭಿನಯಕ್ಕೆ ಹೆಸರಾದ ಲೀಲಾವತಿಯವರು ಅಭಿನಯ ಕ್ಷೇತ್ರಕ್ಕೆ ಬರಲೇಬೇಕೆಂಬ ಹಂಬಲದಿಂದೇನೂ ಬಂದವರಲ್ಲ. ಅವರ ಜೀವನ ತುಂಬ ದುಸ್ತರವಾಗಿತ್ತು. ಚಿಕ್ಕಂದಿನಲ್ಲಿ ತುಂಬ ಬಡತನವನ್ನು ಕಂಡವರು. ಯಾರೋ, ‘ಸಿನಿಮಾದಲ್ಲಿ ತುಂಬ ದುಡ್ಡು ಸಿಗುತ್ತದೆ’ ಎಂದಾಗ, ಅದನ್ನು ಕೇಳಿದ ಲೀಲಾವತಿಯವರು ‘ಹೌದಾ’ ಎಂದು ಕಣ್ಣರಳಿಸಿದ್ದರಂತೆ. ಹಾಗಂತ ಸ್ವತಃ ಲೀಲಾವತಿಯವರೇ ಹೇಳಿಕೊಂಡಿದ್ದಾರೆ.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರಾದ ಲೀಲಾವತಿ ಬಡತನದ ಕಾರಣದಿಂದಲೇ ಸಿನಿಮಾ ಕ್ಷೇತ್ರಕ್ಕೆ ಬಂದವರು. ರಂಗಭೂಮಿ ಹಾಗೂ ಚಲನಚಿತ್ರರಂಗದಲ್ಲಿ ಅಭಿನಯಿಸಬೇಕೆಂಬ ಅದಮ್ಯ ಹಂಬಲದಿಂದ ಅವರು ಹದಿಹರೆಯದಲ್ಲೇ ಮೈಸೂರಿಗೆ ಬಂದರು. ಹಾಗೆ ಮೈಸೂರಿಗೆ ಬಂದಾಕ್ಷಣ ಅವರಿಗೆ ಚಿತ್ರರಂಗ ರತ್ನಗಂಬಳಿ ಹಾಸಿ ಸ್ವಾಗತಿಸಲಿಲ್ಲ. ಉತ್ತಮ ಅವಕಾಶ ಸಿಗಲು ಸಾಕಷ್ಟು ದಿನಗಳ ಕಾಲ ಕಷ್ಟಪಡಲೇ ಬೇಕಾಯಿತು.

ಪ್ರಶಸ್ತಿಗಳ ಗೌರವ

2003ರಲ್ಲಿ ಬಿಡುಗಡೆಯಾದ ‘ಸ್ವಾತಿಮುತ್ತು’ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ, ಬಹುಭಾಷೆಯ ಚಿತ್ರಗಳು ಸೇರಿ ಒಟ್ಟು 600 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮೂರು ಬಾರಿ ರಾಜ್ಯ ಸರ್ಕಾರದಿಂದ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಭಾಜನರಾದರು. ಗೆಜ್ಜೆಪೂಜೆ (1969-70), ಸಿಪಾಯಿರಾಮು (1971-72), ಡಾಕ್ಟರ್ ಕೃಷ್ಣ (1989-90) ಚಿತ್ರಗಳು ಇವರಿಗೆ ಪ್ರಶಸ್ತಿಯನ್ನು ತಂದುಕೊಟ್ಟವು.

ಮುಗ್ಧತೆಯ ಅಮ್ಮ

‘ಗೆಜ್ಜೆಪೂಜೆ’ ಚಿತ್ರದಲ್ಲಿ ಅಮ್ಮನ ಪಾತ್ರ ಮಾಡಲು ಪುಟ್ಟಣ್ಣ ಲೀಲಾವತಿಯನ್ನು ಕೇಳಿದರು. ಗೆಜ್ಜೆಪೂಜೆಯಲ್ಲಿನ ಅಮ್ಮನ ಪಾತ್ರ ಯಶಸ್ಸನ್ನು ತಂದುಕೊಟ್ಟಿತು. ಆ ಪಾತ್ರವನ್ನು ಜನ ಮೆಚ್ಚಿಕೊಂಡರು. ಆ ಬಳಿಕ ವಿಷ್ಣುವರ್ಧನ್, ಅನಂತ್​ನಾಗ್, ಪ್ರಭಾಕರ್, ಅಂಬರೀಷ್ ಹೀಗೆ ದೊಡ್ಡ ದೊಡ್ಡ ನಟರುಗಳಿಗೆಲ್ಲ ಅಮ್ಮನಾಗಿ ನಟಿಸಿದರು.

ನಾಯಕಿ ಆಗುವ ಮುನ್ನ

ನೋಡಲು ಸುಂದರಿ. ಅಭಿನಯ ಚತುರೆ, ಒಳ್ಳೆಯ ಭಾಷೆ... ಇವೆಲ್ಲ ಇದ್ದಾಗಲೂ ಅವರಿಗೆ ಮೊದಲು ಸಿಕ್ಕಿದ್ದು ಒಂದು ಸಖಿಯ ಪಾತ್ರ. ಡಿ. ಶಂಕರ ಸಿಂಗ್ ಅವರ ಯಶಸ್ವೀ ಚಿತ್ರಗಳಲ್ಲಿ ಒಂದಾದ ನಾಗಕನ್ನಿಕಾ (1949) ಚಿತ್ರದಲ್ಲಿ ನಾಯಕಿ ನಾಗಕನ್ಯೆಗೆ ಗಾಳಿ ಬೀಸುವ ಸಖಿ ಪಾತ್ರದಲ್ಲಿ ಇವರು ಅಭಿನಯಿಸಿದರು. ಆಗ ಲೀಲಾವತಿ ನವಯೌವ್ವನದ ತರುಣಿ. ಬಳಿಕ, ಮಹಾಲಿಂಗ ಭಾಗವತರ ನೆರವಿನಿಂದ ಸುಬ್ಬಯ್ಯ ನಾಯ್ಡು ಅವರ ‘ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ’ಗೆ ಸೇರಿಕೊಂಡರು. ನಾಟಕಗಳಲ್ಲಿಯೂ ಇವರಿಗೆ ಹೇಳಿಕೊಳ್ಳುವಂಥ ಪಾತ್ರ ಸಿಗಲಿಲ್ಲ. ಸಣ್ಣಪುಟ್ಟ ಪಾತ್ರಗಳಿಗೆ ತೃಪ್ತರಾಗಬೇಕಾಯಿತು. ಮುಂದೆ 1958ರಲ್ಲಿ ಸುಬ್ಬಯ್ಯನಾಯ್ಡು ಅವರೇ ನಿರ್ವಿುಸಿ, ನಿರ್ದೇಶಿಸಿದ ‘ಭಕ್ತ ಪ್ರಹ್ಲಾದ’ ಚಿತ್ರದಲ್ಲಿ ದೊರೆತ ಸಣ್ಣ ಪಾತ್ರವನ್ನು ನಿರ್ವಹಿಸಲು ಮದರಾಸಿಗೆ ತೆರಳಿದರು. ಅವಕಾಶಗಳನ್ನು ನಿರೀಕ್ಷಿಸಿ ಮದರಾಸಿನಲ್ಲಿಯೇ (ಈಗಿನ ಚೆನ್ನೈ) ಉಳಿದರು. ಮುಂದೆ ಕನ್ನಡದ ಹೆಸರಾಂತ ನಟಿಯಾಗಿ ಹೆಸರು ಮಾಡಿದ್ದೊಂದು ಇತಿಹಾಸ. ಮದರಾಸಿನಲ್ಲಿ ನೆಲೆಸಿದ ನಂತರ ಅವಕಾಶಗಳು ಒಂದೊಂದೇ ಆಗಿ ಬರಲಾರಂಭಿಸಿದವು. ಪಿ.ಕೆ.ಲಾಲ್ ನಿರ್ದೇಶನದ ‘ಮಾಂಗಲ್ಯ ಯೋಗ’ (1958) ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ ಮೊದಲ ಚಿತ್ರ. ಬಾಲಕೃಷ್ಣ ಈ ಚಿತ್ರದ ಪ್ರಮುಖ ಪಾತ್ರದಾರಿ. ಮದರಾಸಿನ ಗೋಲ್ಡನ್ ಸ್ಟುಡಿಯೋದಲ್ಲಿ ಡಾ.ರಾಜಕುಮಾರ್ ಚಿತ್ರೀಕರಣ ವೀಕ್ಷಿಸಲು ಬಂದಿದ್ದರು. ಲೀಲಾವತಿ ಅವರ ಕಲಾಪ್ರತಿಭೆಯನ್ನು ಕಂಡು ತಮ್ಮ ಮುಂದಿನ ಚಿತ್ರದಲ್ಲಿ ಅವಕಾಶ ಕೊಡಲು ನಿರ್ಧರಿಸಿದರು. ರಾಜಕುಮಾರ್ ಹಾಗೂ ಇತರ ಕಲಾವಿದರು ಕೂಡಿ ನಿರ್ವಿುಸಿದ ‘ರಣಧೀರ ಕಂಠೀರವ’ (1960) ಚಿತ್ರದಲ್ಲಿ ಅಭಿನಯಿಸಿದರು. ರಾಜಕುಮಾರ್ ಅವರ ಜತೆ ನಟಿಸಿದ ಲೀಲಾವತಿಯವರ ಮೊದಲ ಚಿತ್ರವಿದು.

ಮಾಂಗಲ್ಯ ಯೋಗ ಮೊದಲ ಕನ್ನಡ ಚಿತ್ರ ರಾಜಕುಮಾರ್ ಜತೆ ಹಲವು ಸಿನಿಮಾ

‘ದಶಾವತಾರ’ (1960) ಚಿತ್ರದಲ್ಲಿ ಮೂರು ಪಾತ್ರಗಳು ದೊರೆತವು. ಕಯಾದು ಹಾಗೂ ಮಂಡೋದರಿ ಪಾತ್ರಗಳನ್ನು ರಾಜಕುಮಾರ್ ಅವರೊಂದಿಗೂ, ಸೀತೆ ಪಾತ್ರವನ್ನು ರಾಜಾಶಂಕರ್ ಅವರೊಂದಿಗೂ ಅಭಿನಯಿಸಿದರು. 1960ರಲ್ಲಿ ಬಿಡುಗಡೆಯಾದ ‘ರಾಣಿ ಹೊನ್ನಮ್ಮ’ ರಾಜಕುಮಾರ್ ಅವರೊಂದಿಗೆ ನಾಯಕಿಯಾಗಿ ಪೂರ್ಣ ಪ್ರಮಾಣದಲ್ಲಿ ಅಭಿನಯಿಸಿದ ಚಿತ್ರ. ಈ ಚಿತ್ರದ ಯಶಸ್ಸಿನ ನಂತರ ಡಾ.ರಾಜಕುಮಾರ್ ಮತ್ತು ಲೀಲಾವತಿ ಅವರ ಜೋಡಿ ಜನಪ್ರಿಯತೆ ಗಳಿಸಿ ಆ ಕಾಲದ ಚಿತ್ರರಂಗದ ಯಶಸ್ವೀ ಜೋಡಿಯೆನಿಸಿತು. ಹಲವಾರು ಚಿತ್ರಗಳಲ್ಲಿ ಅವರು ನಾಯಕನಟರಿಗೆ ದೊರಕುತ್ತಿದ್ದ ಎರಡರಷ್ಟು ಸಂಭಾವನೆ ಪಡೆಯುವಷ್ಟು ಪ್ರಸಿದ್ಧಿ ಪಡೆದಿದ್ದರು. ‘ಕಿತ್ತೂರು ಚೆನ್ನಮ್ಮ’ (1960), ‘ಕಣ್ತೆರೆದು ನೋಡು’ (1961), ‘ಕೈವಾರ ಮಹಾತ್ಮೆ’ (1961), ‘ರತ್ನಮಂಜರಿ’ (1962) ‘ಗಾಳಿಗೋಪುರ’ (1963), ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದರು. ‘ವಿಧಿವಿಲಾಸ’, ‘ನಂದಾದೀಪ’, ‘ಕನ್ಯಾರತ್ನ’, ‘ಜೀವನತರಂಗ’, ‘ಮಲ್ಲಿ ಮದುವೆ’, ‘ಕುಲವಧು’, ‘ಕಲಿತರೂ ಹೆಣ್ಣೆ’, ‘ಬೇವು ಬೆಲ್ಲ’, ‘ವೀರಕೇಸರಿ’, ‘ವಾಲ್ಮೀಕಿ’, ‘ಮನಮೆಚ್ಚಿದ ಮಡದಿ’ ಮುಂತಾದ ಚಿತ್ರಗಳಲ್ಲಿ ರಾಜಕುಮಾರ್ ಅವರೊಂದಿಗೆ ಅಭಿನಯಿಸಿದರು. ‘ರತ್ನಮಂಜರಿ’ ಉದಯಕುಮಾರ್ ಅವರೊಂದಿಗೆ ನಾಯಕಿಯಾಗಿ ನಟಿಸಿದ ಮೊದಲ ಚಿತ್ರ. ರಾಜಕುಮಾರ್ ಅವರೊಂದಿಗೆ ಜನಪ್ರಿಯ ಜೋಡಿಯಾಗಿ ಪ್ರಖ್ಯಾತರಾಗಿದ್ದ ಇವರು ‘ಭೂದಾನ’ದಲ್ಲಿ ರಾಜಕುಮಾರ್ ಅವರ ಮಗಳಾಗಿ, ‘ಪ್ರೇಮಮಯಿ’ಯಲ್ಲಿ ಅತ್ತಿಗೆಯಾಗಿ, ‘ನಾ ನಿನ್ನ ಮರೆಯಲಾರೆ’ ಚಿತ್ರದಲ್ಲಿ ಅತ್ತೆಯಾಗಿಯೂ ಅಭಿನಯಿಸಿದರು.

ನಿರ್ಮಾಪಕಿಯಾದ ನಾಯಕಿ

ಲೀಲಾವತಿಯವರ ಪುತ್ರ ವಿನೋದ್​ರಾಜ್, ದ್ವಾರಕೀಶ್ ನಿರ್ವಣದ ‘ಡಾನ್ಸ್ ರಾಜಾ ಡಾನ್ಸ್’ ಚಿತ್ರದ ಮೂಲಕ ನಾಯಕ ನಟರಾದರು. ವಿನೋದ್​ರಾಜ್ ಅವರನ್ನು ನಾಯಕರನಾಗಿ ಹಾಕಿಕೊಂಡು ಸ್ವತಃ ಲೀಲಾವತಿಯವರೇ ‘ಕಾಲೇಜ್ ಹೀರೋ’ ಚಿತ್ರ ನಿರ್ವಿುಸುವ ಮೂಲಕ ನಿರ್ವಪಕಿಯೂ ಆದರು. ಲೀಲಾವತಿಯವರೇ ಕಥೆ ಬರೆದು, ನಿರ್ವಿುಸಿದ ವಿನೋದ್​ರಾಜ್ ಅಭಿನಯದ ‘ಕನ್ನಡದ ಕಂದ’ ಯಶಸ್ವೀ ಚಿತ್ರವಾಯಿತು.

ಕಷ್ಟಗಳಿಗೆ ಮಿಡಿದರು

ಬೆಂಗಳೂರಿನ ನೆಲಮಂಗಲದ ಬಳಿ ತೋಟ ಮಾಡಿ, ಸದಾ ತೋಟ, ಬೆಳೆ ಎಂದು ಅಪ್ಪಟ ರೈತ ಮಹಿಳೆಯೇ ಆಗಿದ್ದರು ಲೀಲಾವತಿ. ಜತೆಗೆ ಸಾರ್ವಜನಿಕರಿಗಾಗಿ ಆಸ್ಪತ್ರೆ, ಪಶು ಚಿಕಿತ್ಸೆಗಾಗಿ ಪಶು ಆಸ್ಪತ್ರೆ ಕಟ್ಟಿಸಿ ಸ್ಥಳೀಯರಿಗೆ ನೆರವಾಗಿದ್ದಾರೆ ಲೀಲಾವತಿ.

ಕಲಾವಿದರ ಯೋಗ ಕ್ಷೇಮಕ್ಕೆ ತುಡಿತ

ಲೀಲಾವತಿ ಅವರು ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದರೂ ಸಿನಿಮಾ ಕಲಾವಿದರ ಬಗ್ಗೆ ಕಾಳಜಿ ಹೊಂದಿದ್ದರು. ಅನೇಕ ಕಲಾವಿದರಿಗೆ ಮಾಸಾಶನ ಸಿಗುವಂತೆ ಮಾಡಿದ್ದರು. ಪ್ರಾಣಿಗಳ ಬಗ್ಗೆ ಅವರಿಗೆ ಅಪಾರ ಪ್ರೀತಿ ಇತ್ತು. ಅದೇ ಕಾರಣಕ್ಕಾಗಿ ಅವರು ಸ್ವಂತ ಹಣದಲ್ಲಿ ಸೋಲದೇವನಹಳ್ಳಿ ಬಳಿ ಪಶು ಆಸ್ಪತ್ರೆ ನಿರ್ವಿುಸಿದ್ದರು.

ಇಂದು ಅಂತಿಮ ದರ್ಶನ

ಮೈಲನಹಳ್ಳಿಯ ನಿವಾಸಕ್ಕೆ ಲೀಲಾವತಿ ಪಾರ್ಥಿವ ಶರೀರ ತರಲಾಗಿದ್ದು, ಶನಿವಾರ ನೆಲಮಂಗಲದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಅವರ ತೋಟದಲ್ಲೇ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಪುತ್ರ ವಿನೋದ್ ರಾಜ್ ತಿಳಿಸಿದ್ದಾರೆ.

ಪ್ರಧಾನಿ ಸಂತಾಪ

ಲೀಲಾವತಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಬಹುಮುಖ ಪ್ರತಿಭೆಯೊಂದಿಗೆ ಬೆಳ್ಳಿಪರದೆಯನ್ನು ಅಲಂಕರಿಸಿದ್ದರು. ಅವರ ವೈವಿಧ್ಯಮಯ ಪಾತ್ರಗಳು ಹಾಗೂ ನಟನೆ ಸದಾ ಸ್ಮರಣೆಯಲ್ಲಿರಲಿದ್ದು, ಪ್ರಶಂಸಾರ್ಹವಾಗಿವೆ. ಕುಟುಂಬ ಹಾಗೂ ಅಭಿಮಾನಿಗಳಿಗೆ ಸಂತಾಪಗಳು ಎಂದು ಕನ್ನಡದಲ್ಲಿ ಮೋದಿ ಟ್ವೀಟ್ ಮಾಡಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಅಗಲಿಕೆಯ ಸುದ್ದಿ ನೋವುಂಟುಮಾಡಿದೆ. ಕಳೆದ ವಾರವಷ್ಟೇ ಅವರು ಅನಾರೋಗ್ಯಕ್ಕೀಡಾದ ವಿಚಾರ ತಿಳಿದು ಅವರ ಮನೆಗೆ ಭೇಟಿನೀಡಿ ಆರೋಗ್ಯ ವಿಚಾರಿಸಿದ್ದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ.

| ಸಿದ್ದರಾಮಯ್ಯ ಮುಖ್ಯಮಂತ್ರಿ

ಹಿರಿಯ ನಟಿ ಲೀಲಾವತಿ ಅವರ ಅಗಲಿಕೆಯ ಸುದ್ದಿ ಅತೀವ ದುಃಖ ಉಂಟುಮಾಡಿದೆ. ಇತ್ತೀಚೆಗಷ್ಟೇ ಅವರು ಸೋಲದೇವನಹಳ್ಳಿಯಲ್ಲಿ ನಿರ್ವಿುಸಿದ್ದ ಪಶು ಆಸ್ಪತ್ರೆಯನ್ನು ಉದ್ಘಾಟಿಸಿದ್ದೆ. ಸಂಕಷ್ಟದಲ್ಲಿದ್ದರೂ ಸಮಾಜಸೇವೆ ಮಾಡಬೇಕೆನ್ನುವ ಕಳಕಳಿ ನನ್ನ ಹೃದಯ ಮುಟ್ಟಿತು.

| ಡಿ.ಕೆ ಶಿವಕುಮಾರ್ ಡಿಸಿಎಂ

ಬಹುಭಾಷಾ ನಟಿ ಲೀಲಾವತಿ ಯವರ ನಿಧನ ದುಃಖ ತಂದಿದೆ. ಕುಟುಂಬಕ್ಕೆ ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು, ಅವರ ಆತ್ಮಕ್ಕೆ ಚಿರಶಾಂತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

| ಆರ್.ಅಶೋಕ್ ವಿಪಕ್ಷ ನಾಯಕ

ಲೀಲಾವತಿ ಅಮ್ಮನ ಸಾವು ನನ್ನ ಮನಸ್ಸಿಗೆ ತುಂಬ ಬೇಸರ ತರಿಸಿದೆ. ವಾರದ ಹಿಂದೆ ಮನೆಗೆ ಹೋಗಿ ಆರೋಗ್ಯ ವಿಚಾರಿಸಿದ್ದೆ. ಅಮ್ಮನ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ.

| ಡಾ. ಶಿವರಾಜ್ ಕುಮಾರ್ ನಟ

ಕನ್ನಡ ಚಿತ್ರರಂಗದ ಕಲಾ ಸರಸ್ವತಿ ಎಂದೇ ಖ್ಯಾತರಾಗಿದ್ದ ಹಿರಿಯ ನಟಿ ಲೀಲಾವತಿ ನಿಧನರಾಗಿರುವ ಸುದ್ದಿ ಕೇಳಿ ಮುನಸ್ಸಿಗೆ ದುಖವಾಯಿತು.

| ಬಸವರಾಜ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ

ಲೀಲಾವತಿ ಅವರ ಅಗಲಿಕೆಯ ಸುದ್ದಿ ನೋವುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

| ಎಚ್.ಡಿ ದೇವೇಗೌಡ ಮಾಜಿ ಪ್ರಧಾನಿ

ದಕ್ಷಿಣ ಭಾರತದ 600ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ, ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ ಲೀಲಾವತಿ ಅವರ ಅಗಲಿಕೆಯಿಂದ ಕಲಾಪ್ರಪಂಚ ತನ್ನ ಮಾತೃಸದೃಶ ಕಲಾವಿದೆಯನ್ನು ಕಳೆದು ಕೊಂಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಕೋರುವೆ.

| ಬಿ.ಎಸ್. ಯಡಿಯೂರಪ್ಪ ಮಾಜಿ ಸಿಎಂ

ಕನ್ನಡ ಚಿತ್ರರಂಗದ ಶ್ರೇಷ್ಠ ನಟಿಯರಲ್ಲಿ ಒಬ್ಬರು ಲೀಲಾವತಿ. ನಾಯಕಿಯಾಗಿ ಮಾತ್ರವಲ್ಲದೆ, ಪೋಷಕ ಪಾತ್ರಗಳಿಗೂ ಜೀವ ತುಂಬಿದವರು. ಅಮ್ಮ, ಅಕ್ಕ, ಅತ್ತೆ ಸೇರಿ ಅನೇಕ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ನಟಿಸುತ್ತಿದ್ದರು. ಲೀಲಾವತಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ.

| ಎಚ್.ಡಿ. ಕುಮಾರಸ್ವಾಮಿ ಮಾಜಿ ಸಿಎಂ

50 ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದೇವೆ. ನಾನು ಯಾವಾಗಲೂ ಅವರನ್ನು ಸ್ಮರಿಸುತ್ತೇನೆ. ಕನ್ನಡ ಚಿತ್ರರಂಗದ ಕಂಬಗಳು ಎನ್ನುವಾಗ ರಾಜಕುಮಾರ್, ಬಾಲಣ್ಣ, ಜಿ.ವಿ ಅಯ್ಯರ್ ಸೇರಿ ಅನೇಕ ದಿಗ್ಗಜರನ್ನು ನೆನಪಿಸಿಕೊಳ್ಳುತ್ತೇವೆ. ಅವರ ಜತೆಗೆ ಲೀಲಾವತಿಯವರನ್ನೂ ನೆನಪಿಸಿಕೊಳ್ಳಬೇಕು.

| ಅನಂತನಾಗ್ ನಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net