

ಬೆಂಗಳೂರು: ವಸಿಷ್ಠ ನಾಯಕನಾಗಿ ಅಭಿನಯಿಸುತ್ತಿರುವ ‘ಓದೆಲ್ಲ ರೈಲ್ವೇ ಸ್ಟೇಶನ್’ ಎಂಬ ತೆಲುಗು ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಬಿಡುಗಡೆಗೆ ಸಜ್ಜಾಗುತ್ತಿದೆ. ಇಷ್ಟಾದರೂ ಈ ಚಿತ್ರದಲ್ಲಿ ತಮ್ಮ ಪಾತ್ರವೇನು ಮತ್ತು ಲುಕ್ ಹೇಗಿರುತ್ತದೆ ಎಂಬುದನ್ನು ವಸಿಷ್ಠ ಹೇಳಿಕೊಂಡಿರಲಿಲ್ಲ.
ಇದೀಗ ವಸಿಷ್ಠ ತಮ್ಮ ಫಸ್ಟ್ ಲುಕ್ ಹಂಚಿಕೊಂಡಿದ್ದು, ಈ ಚಿತ್ರದಲ್ಲಿ ತಿರುಪತಿ ಎಂಬ ಹೆಸರಿನ ಧೋಬಿಯ ಪಾತ್ರದಲ್ಲಿ ನಟಿಸಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ''ಓದೆಲ್ಲ ರೈಲ್ವೇ ಸ್ಟೇಶನ್'ನಲ್ಲಿ ತಿರುಪತಿ ಎಂಬ ಧೋಬಿಯ ಪಾತ್ರ ಮಾಡಿದ್ದೇನೆ. ಈ ತರಹದ ಪಾತ್ರ ಮಾಡಿರಲಿಲ್ಲ' ಎಂದು ಸಿಂಹ ಹೇಳಿದ್ದಾರೆ.
ಕರೀಮ್ ನಗರ್ ಜಿಲ್ಲೆಯ ಒಂದು ಹಳ್ಳಿಯಲ್ಲಿ ನಡೆದ ಘಟನೆಯನ್ನು ಆಧರಿಸಿ ಈ ಚಿತ್ರ ಮಾಡಲಾಗಿದೆಯಂತೆ. ಇಲ್ಲಿ ನಾಯಕ ದೋಭಿಯಾಗಿದ್ದು, ಅವನ ಜೀವನದಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದು ಚಿತ್ರದ ಕಥೆ. ವಸಿಷ್ಠಗೆ ನಾಯಕಿಯಾಗಿ ‘ಅಧ್ಯಕ್ಷ’ದ ಹೀಬಾ ಪಟೇಲ್ ನಟಿಸುತ್ತಿದ್ದಾರೆ. ಇನ್ನು ಅಶೋಕ್ ತೇಜ ನಿರ್ದೇಶನ ಮಾಡುತ್ತಿದ್ದಾರೆ.
ಲಾಕ್ಡೌನ್ಗೂ ಮುನ್ನ ನಿರ್ದೇಶಕ ಅಶೋಕ್, ವಸಿಷ್ಠಗೆ ಒಂದು ಕಥೆ ಹೇಳಿದ್ದರಂತೆ. ಅದು ವಸಿಷ್ಠಗೆ ಇಷ್ಟವಾಗದ ಕಾರಣ, ಚಿತ್ರದಲ್ಲಿ ನಟಿಸುವುದಿಲ್ಲ ಎಂದಿದ್ದರಂತೆ. ಆ ನಂತರ, ಅಶೋಕ್ಗೆ ಇನ್ನೊಬ್ಬ ನಿರ್ದೇಶಕ ಸಂಪತ್ ನಂದಿ ಒಂದು ಕಥೆ ಹೇಳಿದರಂತೆ. 'ಆ ಕಥೆಗೆ ನಾನು ಸೂಟ್ ಆಗುತ್ತೇನೆ ಎಂದನಿಸಿ ಕಥೆ ಹೇಳಿಸಿದ್ದಾರೆ. ಕಥೆ ಕೇಳಿದೆ. ಇದೊಂದು ಸವಾಲಿನ ಪಾತ್ರ. ಇಲ್ಲ ಎನ್ನುವುದಕ್ಕೆ ಸಾಧ್ಯವಾಗದೆ ಒಪ್ಪಿಕೊಂಡೆ’ ಎನ್ನುತ್ತಾರೆ ವಸಿಷ್ಠ.