

| ಚೇತನ್ ನಾಡಿಗೇರ್ ಬೆಂಗಳೂರು
ಸಮಸ್ಯೆ ಅವರದಲ್ಲ ನಮ್ಮದು ... ಹಾಗಂತ ನಿತ್ಯಾಗೆ ಸ್ಪಷ್ಟವಾಗುತ್ತದೆ. ಅದಕ್ಕೂ ಮೊದಲು ಆಕೆಗೆ ತನ್ನ ಮಗಳಿಗೆ ಏನೋ ಸಮಸ್ಯೆ ಇದೆ ಎಂದು ಗೊತ್ತಿರುತ್ತದೆ. ಮಗು ಯಾರ ಜತೆಗೂ ಮಾತನಾಡದಿರುವುದು, ಸದಾ ಅಳುತ್ತಿರುವುದು, ಶಬ್ಧ ಕೇಳಿದರೆ ಇರಿಟೇಟ್ ಆಗುವುದು, ಮೂರು ವರ್ಷವಾದರೂ ಆಕೆ ಅಮ್ಮಾ ಎಂದು ಕರೆಯದಿರುವುದು ... ಇವೆಲ್ಲವೂ ಆಟಿಸಂನ ಗುಣಲಕ್ಷಣಗಳಷ್ಟೇ, ಇದಕ್ಕೆ ಖಾಯಂ ಪರಿಹಾರವಿಲ್ಲ ಎಂದು ಕ್ರಮೇಣ ಆಕೆಗೆ ಗೊತ್ತಾಗುತ್ತದೆ. ಪ್ರತಿ ತಂದೆ-ತಾಯಿಯು ಇದೊಂದು ಸಮಸ್ಯೆ ಎಂದು ಭಾವಿಸದೆ, ಆಟಿಸಂ ಇರುವ ಮಕ್ಕಳಿಗೆ ಸಹಕಾರ ಮತ್ತು ಪ್ರೋತ್ಸಾಹ ಕೊಟ್ಟರೆ, ಅವರಿಂದ ಅದ್ಭುತವನ್ನು ಸೃಷ್ಟಿಸಬಹುದು ಎಂದು ಮನವರಿಕೆಯಾಗುತ್ತದೆ.
ಆಟಿಸಂ ಕುರಿತು ಕನ್ನಡದಲ್ಲಿ ಚಿತ್ರಗಳಾಗಿದ್ದು ಕಡಿಮೆಯೇ. ಈಗ ಅಂಥದ್ದೊಂದು ಪ್ರಯತ್ನ ಮಾಡಿದ್ದಾರೆ ಚೇತನ್ ಮುಂಡಾಡಿ. ಆಟಿಸಂ ಸಮಸ್ಯೆ ಇರುವ ಹುಡುಗಿ ಮತ್ತು ಅದರಿಂದ ಆಕೆಯ ತಾಯಿ ಅನುಭವಿಸುವ ಸಮಸ್ಯೆಗಳನ್ನು ಅವರು ಈ ಚಿತ್ರದ ಮೂಲಕ ಬಿಚ್ಚಿಟ್ಟಿದ್ದಾರೆ. ಒಂದು ಸಮಸ್ಯೆಯಿಂದ ಚಿತ್ರ ಪ್ರಾರಂಭವಾಗಿ, ಆ ಸಮಸ್ಯೆಗೆ ಪರಿಹಾರ ಏನು ಎಂದು ತಿಳಿಸುವ ಮೂಲಕ ಚಿತ್ರ ಮುಗಿಯುತ್ತದೆ. ಈ ತರಹದ ಚಿತ್ರಗಳಲ್ಲಿ ಮನರಂಜನೆ, ವೇಗ, ಮ್ಯಾಜಿಕ್ ಇದ್ಯಾವುದನ್ನೂ ನಿರೀಕ್ಷಿಸುವುದು ತಪು್ಪ. ಇಲ್ಲಿ ಕಾಳಜಿ ಮತ್ತು ಉದ್ದೇಶ ಬಹಳ ಮುಖ್ಯವಾಗುತ್ತದೆ ಮತ್ತು ಅಂತಿಮವಾಗಿ ಗೆಲ್ಲುವುದು ಅವೆರಡೇ. ‘ವರ್ಣಪಟಲ’ ಚಿತ್ರ ಸಹ ಇದಕ್ಕಿಂತ ಹೊರತಲ್ಲ. ಮನರಂಜನಾ ಚಿತ್ರಗಳ ಎದುರು ಇಂತಹ ಚಿತ್ರಗಳನ್ನು ಮಾಡುವುದಕ್ಕೆ ಯೋಚಿಸುವುದಕ್ಕೂ ಹೆದರುವಾಗ, ಅದರ ಕುರಿತು ಚಿತ್ರ ಮಾಡುವುದರ ಜತೆಗೆ, ಒಂದು ಪರಿಹಾರ ಕೊಡುವ ಪ್ರಯತ್ನ ಈ ಚಿತ್ರದಲ್ಲಾಗಿದೆ ಎನ್ನುವುದು ಖುಷಿಯ ವಿಷಯ. ಹಾಗಂತ ಈ ಚಿತ್ರವನ್ನು ಆಟಿಸಂಗೆ ತುತ್ತಾಗಿರುವ ಮಕ್ಕಳ ಪೋಷಕರು ಮಾತ್ರ ನೋಡಬೇಕು ಎಂದೇನಿಲ್ಲ. ಪ್ರತಿಯೊಬ್ಬ ತಂದೆ-ತಾಯಿಯೂ ನೋಡಬಹುದಾದ ಒಂದು ಚಿತ್ರ ಇದು. ಇಡೀ ಚಿತ್ರ ಜ್ಯೋತಿ ರೈ ಅವರ ಸುತ್ತ ಸುತ್ತುತ್ತದೆ ಮತ್ತು ಅವರು ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಸುಹಾಸಿನಿ, ಅರವಿಂದ ರಾವ್ ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.