

ಬೆಂಗಳೂರು: ಸಾಮಾನ್ಯವಾಗಿ, ಹೀರೋಗಳ ಹುಟ್ಟುಹಬ್ಬದಂದು ಅವರು ನಟಿಸುತ್ತಿರುವ ಚಿತ್ರಗಳ ಪೋಸ್ಟರ್, ಟೀಸರ್, ಟ್ರೇಲರ್ ಬಿಡುಗಡೆಯಾಗುವುದು ಸಹಜ. ವಿನೋದ್ ಪ್ರಭಾಕರ್ ಸಹ ಶನಿವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ‘ವರದ’ ಚಿತ್ರತಂಡವು ಒಂದು ಟೀಸರ್ ಬಿಡುಗಡೆ ಮಾಡಿದೆ. ಈ ಮೂಲಕ ತಮ್ಮ ಚಿತ್ರದ ನಾಯಕನಿಗೆ ಉಡುಗೊರೆಯಾಗಿ ನೀಡಿದೆ. ಯೂಟ್ಯೂಬ್ನ ಆನಂದ್ ಆಡಿಯೋ ಚಾನಲ್ನಲ್ಲಿ ಈ ಟೀಸರ್ ಬಿಡುಗಡೆಯಾಗಿದೆ.
ಉದಯ ಪ್ರಕಾಶ್ ನಿರ್ವಿುಸಿ-ನಿರ್ದೇಶಿಸಿರುವ ‘ವರದ’ ಚಿತ್ರವು ರೆಡಿಯಾಗಿದ್ದು, ಜನವರಿಯಲ್ಲಿ ಬಿಡುಗಡೆಯಾಗಲಿದೆ. ಇದೊಂದು ಆಕ್ಷನ್ ಚಿತ್ರವಾಗಿದ್ದು, ಸಾಕಷ್ಟು ಸೆಂಟಿಮೆಂಟ್ ದೃಶ್ಯಗಳಿವೆ. ಚಿತ್ರದಲ್ಲಿ ವಿನೋದ್ ಪ್ರಭಾಕರ್ ತಂದೆಯ ಪಾತ್ರದಲ್ಲಿ ಹಿರಿಯ ನಟ ಚರಣ್ ರಾಜ್ ಕಾಣಿಸಿಕೊಂಡಿದ್ದು, ಮಿಕ್ಕಂತೆ ಅಮಿತಾ, ಅಶ್ವಿನಿ ಗೌಡ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಪ್ರದೀಪ್ ವರ್ಮ ಸಂಗೀತ ಸಂಯೋಜಿಸಿದ್ದು, ‘ಭಜರಂಗಿ’ ಆನಂದ್ ಛಾಯಾಗ್ರಹಣ ಮಾಡಿದ್ದಾರೆ.