ಒಳ್ಳೆಯವನೂ ಅಲ್ಲ, ಕೆಟ್ಟವನೂ ಅಲ್ಲ ಈ ವಾಮನ … ಚಿತ್ರೀಕರಣ ಮುಕ್ತಾಯ

Dhanveer Gowda
Published on

ಬೆಂಗಳೂರು: ಕಳೆದ ತಿಂಗಳಷ್ಟೇ ಧನ್ವೀರ್​ ಅಭಿನಯದ 'ಕೈವ' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿತ್ತು. ಈಗ ಇನ್ನೊಂದು ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಮುಕ್ತಾಯವಾಗಿದೆ. ಅದೇ 'ವಾಮನ'.

'ವಾಮನ' ಚಿತ್ರವನ್ನು ಶಂಕರ್​ ರಾಮನ್​ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದ್ದು, ಚೇತನ್​ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಧನ್ವೀರ್​ಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ಕಾಣಿಸಿಕೊಂಡಿದ್ದಾರೆ. ನಾಯಕನ ಇಂಟ್ರೊಡಕ್ಷನ್​ ಹಾಡನ್ನು ಹೊರತುಪಡಿಸಿ, ಮಿಕ್ಕಂತೆ ಚಿತ್ರದ ಬಹುತೇಕ ಚಿತ್ರೀಕರಣವನ್ನು ಮುಗಿಸಿದ್ದರು ಶಂಕರ್​ ರಾಮನ್​. ಬಾಕಿ ಇದ್ದ ಹಾಡಿನ ಚಿತ್ರೀಕರಣ ಸಹ ಇತ್ತೀಚೆಗೆ ಮುಕ್ತಾಯವಾಗಿದೆ.

ನಿರ್ದೇಶಕ ಶಂಕರ್ ರಾಮನ್ಗೆ ಇದು ಮೊದಲ ಸಿನಿಮಾ. ಈ ಚಿತ್ರದ ಕುರಿತು ಮಾತನಾಡುವ ಅವರು, '72 ದಿನಗಳ ಕಾಲ ಶೂಟ್ ಮಾಡಿದ್ದೇವೆ. ಇದೊಂದು ಪಕ್ಕಾ ಕಮರ್ಷಿಯಲ್​ ಸಿನಿಮಾ. ಪ್ರತಿಯೊಬ್ಬ ಮನುಷ್ಯನಲ್ಲೂ ಒಬ್ಬ ಒಳ್ಳೆಯವನು ಇರುತ್ತಾನೆ. ಕೆಟ್ಟವನು ಇರ್ತಾನೆ. ಒಳ್ಳೆಯವನಾಗಬೇಕಾ? ಕೆಟ್ಟವನಾಗಬೇಕಾ ಅನ್ನೋದನ್ನು ನಾವೇ ಆಯ್ಕೆ ಮಾಡಿಕೊಳ್ಳಬೇಕು. ಒಳ್ಳೆಯವನು, ಕೆಟ್ಟದರ ನಡುವಿನಲ್ಲಿ ಆತ ಯಾರೇ ಆಗಿದ್ರು ಆತನಿಗೆ ಸಲ್ಲಬೇಕಾದ ಶಿಕ್ಷೆ ಅಥವಾ ಸೆಟಲ್ ಮೆಂಟ್ ಸಿಕ್ಕೇ ಸಿಗುತ್ತೆ ಅನ್ನೋದನ್ನು ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಈ ಚಿತ್ರದಲ್ಲಿ ನಾಲ್ಕು ಹಾಡು, ನಾಲ್ಕು ಫೈಟ್​ ಇದೆ' ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ

ಈ ಚಿತ್ರದಲ್ಲಿ ಧನ್ವೀತ್​, ಗುಣ ಎಂಬ ಪಾತ್ರ ಮಾಡಿದ್ದಾರಂತೆ. 'ಇದು ಒಳ್ಳೆಯ ಪಾತ್ರವೂ ಅಲ್ಲ, ಕೆಟ್ಟ ಪಾತ್ರವೂ ಅಲ್ಲ. ಇದೊಂದು ಗ್ರೇ ಶೇಡ್​ ಪಾತ್ರ. ಮೂರನೇ ದಿನದಲ್ಲೇ ಇಂಥದ್ದೊಂದು ಪಾತ್ರ ಸಿಕ್ಕಿರುವುದು ಖುಷಿಯ ವಿಚಾರ' ಎನ್ನುತ್ತಾರೆ.

'ವಾಮನ' ಚಿತ್ರವನ್ನು ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ಮೆಂಟ್ ಬ್ಯಾನರ್​ನಡಿ ನಿಮಿಧಸಲಾಗಿದೆ. ಈ ಚಿತ್ರದಲ್ಲಿ ಧನ್ವೀರ್​ ಮತ್ತು ರೀಷ್ಮಾ ಜತೆಗೆ ಸಂಪತ್, ಆದಿತ್ಯ ಮೆನನ್, ಅಚ್ಯುತ್ ಕುಮಾರ್, ಅವಿನಾಶ್, ತಾರಾ, ಶಿವರಾಜ್. ಕೆ. ಆರ್. ಪೇಟೆ, ಪೆಟ್ರೋಲ್ ಪ್ರಸನ್ನ, ಕಾಕ್ರೋಚ್ ಸುಧಿ ಮುಂತಾದವರು ಅಭಿನಯಿಸಿದ್ದಾರೆ. ಬಿ.ಅಜನೀಶ್ ಲೋಕನಾಥ್ ಸಂಗೀತ, ಮಹೇಂದ್ರ ಸಿಂಹ ಛಾಯಾಗ್ರಹಣ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net