

ಬೆಂಗಳೂರು: ಉಪೇಂದ್ರ ಅಭಿನಯದ 'ಕಬ್ಜ' ಚಿತ್ರದ ಬಿಡುಗಡೆಗೆ ಇನ್ನೊಂದು ತಿಂಗಳಿದೆ. ಮಾರ್ಚ್ 17ರಂದು ಚಿತ್ರವು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಚಿತ್ರದ ಹಾಡುಗಳನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವುದಕ್ಕೆ ನಿರ್ದೇಶಕ-ನಿರ್ಮಾಪಕ ಆರ್. ಚಂದ್ರು ಸಿದ್ಧತೆ ನಡೆಸಿದ್ದಾರೆ. ಅದಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿರುವುದು ತಮ್ಮ ತವರೂರಾದ ಶಿಡ್ಲಘಟ್ಟ.
'ಕಬ್ಜ' ಚಿತ್ರದ ಟೈಟಲ್ ಟ್ರಾಕ್ ಈಗಾಗಲೇ ಬಿಡುಗಡೆಯಾಗಿದ್ದು, ಒಳ್ಳೆಯ ವೀಕ್ಷಣೆ ಪಡೆದಿದೆ. ಈಗ ಫೆ. 26ರಂದು ಶಿಡ್ಲಟ್ಟದ ಜೂನಿಯರ್ ಕಾಲೇಜು ಮೈದಾನದಲ್ಲಿ ದೊಡ್ಡ ಕಾರ್ಯಕ್ರಮ ಮಾಡಿ, ಬೃಹತ್ ವೇದಿಕೆಯಲ್ಲಿ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಚಂದ್ರು ತಯಾರಿ ನಡೆಸಿದ್ದಾರೆ.
ಅಂದು ಈ ಸಮಾರಂಭದಲ್ಲಿ ಗುರುಕಿರಣ್ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರಂತೆ. ಶಿವರಾಜಕುಮಾರ್, ಪ್ರೇಮ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವು ತಾರೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಜತೆಗೆ ತೆಲುಗು ಚಿತ್ರರಂಗದ ಕೆಲವು ಸ್ಟಾರ್ಗಳು ಸಹ ಕಾರ್ಯಕ್ರಮಕ್ಕೆ ಆಗಮಿಸುವ ಸಾಧ್ಯತೆ ಇದೆ. ಮಿಕ್ಕಂತೆ ಉಪೇಂದ್ರ, ಸುದೀಪ್ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ದೈವ ಹಾಗೂ ದುಷ್ಟ ಶಕ್ತಿ ನಡುವಿನ ಸಂಘರ್ಷದ ಕಥೆಯೇ ‘ಆರ’
'ಕಬ್ಜ' ಚಿತ್ರದಲ್ಲಿ ಉಪೇಂದ್ರ, ಸುದೀಪ್, ಶ್ರೀಯಾ ಶರಣ್, ಕಬೀರ್ ಸಿಂಗ್ ದುಹಾನ್, ನವಾಬ್ ಷಾ, ಮುರಳಿ ಶರ್ಮ, ಅನೂಪ್ ರೇವಣ್ಣ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದು, ಎ.ಜೆ. ಶೆಟ್ಟಿ ಛಾಯಾಗ್ರಹಣವಿದೆ. 'ಕಬ್ಜ' ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.