ಆಡಿಯೋ ವೈರಲ್​ ಆದ ಬೆನ್ನಲ್ಲೇ ಆ ಇಬ್ಬರು ಹುಡುಗಿಯರಿಗೆ ಖಡಕ್​ ಎಚ್ಚರಿಕೆ ಕೊಟ್ಟ ನಟ ವಿದ್ಯಾಭರಣ್​!

Vidyabharan
Published on

ಬೆಂಗಳೂರು: ನಿಶ್ಚಿತಾರ್ಥದ ಬಗ್ಗೆ ಇಬ್ಬರು ಹುಡುಗಿಯರು ಮಾತನಾಡಿರುವ ಆಡಿಯೋ ವೈರಲ್​ ಆದ ಬೆನ್ನಲ್ಲೇ ನಟ ವಿದ್ಯಾಭರಣ್​​ ಆ ಇಬ್ಬರು ಹುಡುಗಿಯರಿಗೆ ಖಡಕ್​ ಎಚ್ಚರಿಕೆಯನ್ನು ನೀಡಿದ್ದಾರೆ. ತಮ್ಮ ವಿರುದ್ಧ ಆ ಇಬ್ಬರು ಹುಡುಗಿಯರು ಮಾಡಿರುವ ಆರೋಪ ಸುಳ್ಳು ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ದಿಗ್ವಿಜಯ ನ್ಯೂಸ್​ ಜೊತೆ ಮಾತನಾಡಿರುವ ವಿದ್ಯಾಭರಣ್​, ಆ ಇಬ್ಬರು ಹುಡುಗಿಯರು ಯಾರು ಎಂಬುದೇ ನನಗೆ ಗೊತ್ತಿಲ್ಲ. ಇದುವರೆಗೂ ಆ ಧ್ವನಿಯನ್ನೇ ನಾನು ಕೇಳಿಸಿಕೊಂಡಿಲ್ಲ. ನಾನೇನಾದ್ರೂ ತಪ್ಪು ಮಾಡಿದ್ದೇ ಆಗಿದ್ದಲ್ಲಿ ನನ್ನ ಮೇಲೆ ಆರೋಪ ಮಾಡಿದವರು ಮಾಧ್ಯಮಗಳ ಮುಂದೆ ಬರಬೇಕಿತ್ತು. ಸಿನಿಮಾ ರಿಲೀಸ್​ ವೇಳೆಯಾದ್ರೂ ಬರಬೇಕಿತ್ತು. ಅವರ ಆರೋಪದಲ್ಲಿ ಯಾವುದೇ ಸತ್ಯಾಸತ್ಯತೆ ಇಲ್ಲವೇ ಇಲ್ಲ. ನಾನು ನಾಳೆ ಕಮೀಷನರ್​ಗೆ ದೂರು ನೀಡುತ್ತೇನೆ. ನಮ್ಮಂಥ ಗೌರವಯುತ ಕುಟುಂಬಗಳನ್ನು ಟಾರ್ಗೆಟ್​ ಮಾಡುತ್ತಿದ್ದಾರೆ. ಇದನ್ನೇ ಮುಂದೆ ದಾಳವಾಗಿ ಮಾಡಿಕೊಳ್ಳುತ್ತಾರೆ. ಹೀಗಾಗಿ ನಾನು ದೂರು ನೀಡುತ್ತೇನೆ ಎಂದಿದ್ದಾರೆ.

ನನಗೂ ವೈಷ್ಣವಿಗೌಡಗೂ ಯಾವುದೇ ಎಂಗೇಜ್​ಮೆಂಟ್​ ಆಗಿಲ್ಲ. ನಾನು ಕೂಡ ವಿರಾಜ್​ ಹೆಸರಿನ ಸಿನಿಮಾ ಮಾಡಿದ್ದೇನೆ. ವೃತ್ತಿಯಲ್ಲಿ ನಾನೊಬ್ಬ ಉದ್ಯಮಿ. 2016ರಲ್ಲಿ ಚಾಕೋಲೇಟ್​ ಬಾಯ್​ ಅಂತಾ ಒಂದು ಸಿನಿಮಾ ಮಾಡಬೇಕಿತ್ತು. ಆ ಸಿನಿಮಾಗೆ ವೈಷ್ಣವಿ ಅವರೇ ಹೀರೋಯಿನ್​ ಆಗಿದ್ದರು. ಕಾರಣಾಂತರಗಳಿಂದ ಆ ಸಿನಿಮಾ ನಿಂತು ಹೋಯಿತು. ಅಂದಿನಿಂದ ಅವರ ಕುಟುಂಬದ ಜೊತೆ ಇದ್ದ ಸಂಪರ್ಕ ಕಡಿದುಹೋಯಿತು. ಎರಡು ಕುಟುಂಬಗಳ ನಡುವೆ ಪರಿಚಯವಿದೆ. ಆಗಾಗ ಫಂಕ್ಷನ್​ಗೆ ಬರೋದು-ಹೋಗೋದು ಮಾಡುತ್ತಿದ್ದರು. ಹೀಗಾಗಿ ನಾವು ಮಾತುಕತೆ ಆಡಿದ್ದೇವು. ಆದರೆ, ನಾವು ಎಂಗೇಜ್​ಮೆಂಟ್​ ಮಾಡಿಕೊಂಡಿರಲಿಲ್ಲ ಎಂದು ವಿದ್ಯಾಭರಣ್​ ಹೇಳಿದ್ದಾರೆ.

ನಾನು ಇನ್​ಸ್ಟಾಗ್ರಾಂನಲ್ಲಿ ಫೇಕ್​ ಅಕೌಂಟ್​ ಮಾಡಿ ಯಾವ ಯುವತಿಗಾದ್ರೂ ಮೋಸ ಮಾಡಿದ್ದರೆ ಮತ್ತು ಅವರ ಬಳಿ ಸಾಕ್ಷಿ ಇದ್ದರೆ ನನ್ನ ವಿರುದ್ಧ ದೂರು ನೀಡಲಿ. ನಮ್ಮ ಕರ್ನಾಟಕದಲ್ಲಿ ಹೆಣ್ಣು ಮಕ್ಕಳಿಗೆ ತುಂಬಾ ಸೇಫ್ಟಿ ಇದೆ. ಹೀಗಾಗಿ ಪೊಲೀಸ್​ ಠಾಣೆಗೋ ಅಥವಾ ಸಿಸಿಬಿ ಮುಂದೆ ಬಂದು ದೂರು ಕೊಡಲಿ. ಅದನ್ನು ಬಿಟ್ಟು ಆಡಿಯೋ ಮಾಡಿಕೊಂಡು ಗೌರವ ಕಳೆಯುವುದು ಸರಿಯಲ್ಲ. ಅವರಿಗೆಲ್ಲ ಕಾನೂನಿನ ಮೂಲಕವೇ ಉತ್ತರ ಕೊಡುತ್ತೇನೆ ಎಂದು ವಿದ್ಯಾಭರಣ್​ ಎಚ್ಚರಿಕೆ ನೀಡಿದ್ದಾರೆ.

ಏನಿದು ವಿವಾದ?

ಕೆಲ ದಿನಗಳ ಹಿಂದಷ್ಟೇ ಅಗ್ನಿಸಾಕ್ಷಿ (Agnisakshi) ಧಾರಾವಾಹಿ ಖ್ಯಾತಿಯ ವೈಷ್ಣವಿ ಗೌಡ (Vaishnavi Gowda) ಅಲಿಯಾಸ್​ ಸನ್ನಿಧಿ (Sannidhi) ಅವರ ನಿಶ್ಚಿತಾರ್ಥ (Engagement) ದ ಸುದ್ದಿ ಹರಿದಾಡಿತ್ತು. ಅಲ್ಲದೆ, ಅದಕ್ಕೆ ಸಂಬಂಧಿಸಿದ ಫೋಟೋಗಳು ಸಹ ವೈರಲ್​ ಆಗಿ, ಮದುವೆ ಆಗುವುದು ಖಚಿತ ಎಂಬ ಸುದ್ದಿಯು ವೈರಲ್​ ಆಗಿತ್ತು. ಆದರೆ, ಇದೀಗ ವೈಷ್ಣವಿ ಅವರಿಗೆ ಮದುವೆಗೂ ಮುನ್ನವೇ ಮೋಸ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ವಿರಾಜ್ (Viraj Kannda Film) ಸಿನಿಮಾದ ನಾಯಕ ವಿದ್ಯಾಭರಣ್ (Vidyabharan K S) ಎಂಬುವರ ಜತೆ ವೈಷ್ಣವಿ ನಿಶ್ಚಿತಾರ್ಥ ನೆರವೇರಿತ್ತು. ಫೋಟೋದಲ್ಲಿ ನಿವೃತ್ತ ಐಪಿಎಸ್​ ಅಧಿಕಾರಿ ಶಂಕರ ಬಿದರಿ ಅವರು ಕೂಡ ಇದ್ದರು. ಫೋಟೋ ವೈರಲ್ ಆದ ಬಳಿಕ ಸ್ಪಷ್ಟನೆ ನೀಡಿದ್ದ ವೈಷ್ಣವಿ, ಎಂಗೇಜ್ಮೆಂಟ್ ಆಗಿಲ್ಲ, ಹುಡುಗನ ಕಡೆಯವರು ಬಂದು ಹೆಣ್ಣು ನೋಡುವ ಶಾಸ್ತ್ರ ಮುಗಿಸಿದ್ದಾರೆ ಎಂದಿದ್ದರು. ಇದೀಗ ಇದ್ದಕ್ಕಿದ್ದ ಹಾಗೇ ಇಬ್ಬರು ಹುಡುಗಿಯರು ಅಖಾಡಕ್ಕಿಳಿದಿದ್ದಾರೆ. ಆ ಹುಡುಗಿಯರಿಗೂ ಹಾಗೂ ವಿರಾಜ್​ಗೂ ಏನು ಸಂಬಂಧ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಆದರೆ, ವಿರಾಜ್​ ಬಗ್ಗೆ ಸಾಕಷ್ಟು ಗಂಭೀರ ಆರೋಪಗಳನ್ನು ಮಾಡಿದ್ದು, ವೈಷ್ಣವಿಗೆ ಮೋಸ ಆಗಬಾರದು ಎಂದು ಹೇಳಿದ್ದಾರೆ.

ವೈಷ್ಣವಿ ತುಂಬಾ ಒಳ್ಳೆ ಹುಡುಗಿ. ಆಕೆಗೆ ಅವನಿಂದ ಮೋಸ ಆಗಬಾರದು. ವೈಷ್ಣವಿ ಜೀವನ ಹಾಳಾಗುವುದಕ್ಕೆ ನಾವು ಬಿಡುವುದಿಲ್ಲ. ಆಕೆ ಜತೆ ಎಂಗೇಜ್ಮೆಂಟ್ ಮಾಡಿಕೊಂಡಿರುವ ಹುಡುಗ ಸರಿಯಿಲ್ಲ. ವೈಷ್ಣವಿಗೂ ಮೊದಲೇ ಆತ ಐದಾರು ಜನ ಹುಡುಗಿಯರ ಜತೆ ರಿಲೇಷನ್​ಶಿಪ್​ನಲ್ಲಿದ್ದ. ಅಲ್ಲದೆ, ಹುಡುಗಿಯರನ್ನು ಮನೆಗೂ ಸಹ ಕರೆದುಕೊಂಡು ಹೋಗುತ್ತಿದ್ದ. ಆತನ ಕೃತ್ಯಕ್ಕೆ ಅವರ ತಂದೆ-ತಾಯಿಯ ಫುಲ್ ಸಪೋರ್ಟ್ ಇದೆ ಎಂದು ಇಬ್ಬರು ಅನಾಮಧೇಯ ಹುಡುಗಿಯರು ಆರೋಪ ಮಾಡಿದ್ದಾರೆ,

ಮಾತು ಮುಂದುವರಿಸಿರುವ ಹುಡುಗಿಯರು ಈಗ ನೋಡಿಡಿದರೆ ವೈಷ್ಣವಿ ಅವರ ಜೊತೆ ಎಂಗೇಜ್ಮೆಂಟ್ ಮಾಡ್ಕೊಂಡಿದ್ದಾನೆ. ತಾನು 150 ಕೋಟಿಗೆ ಬಾಳುತ್ತೇನೆ ಅಂತಾ ಹೇಳಿದ್ದಾರೆ. ಹೀಗಿರುವಾಗ ಅಷ್ಟು ಸಿಂಪಲ್‌ ಆಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದೇಕೆ? ವೈಷ್ಣವಿಗೆ ಹಾಗೂ ಅವರ ಕುಟುಂಬಕ್ಕೆ ಈ ವಿದ್ಯಾಭರಣ ಎಂತವನು ಅಂತ ಇನ್ನೂ ಗೊತ್ತಿಲ್ಲ ಅನ್ಸುತ್ತೆ! ಒಂದು ವೇಳೆ ಗೊತ್ತಾದರೆ ವೈಷ್ಣವಿ ಉಗಿದು ಉಪ್ಪಿನಕಾಯಿ ಹಾಕ್ತಾರೆ. ಯಾವುದೇ ಕಾರಣಕ್ಕೂ ವೈಷ್ಣವಿ, ವಿದ್ಯಾಭರಣ್ ಮದುವೆ ಆಗಬಾರದು. ಒಂದ್ವೇಳೆ ಅವರಿಬ್ಬರು ಮದುವೆ ಆದರೆ, ಮೂರು ವರ್ಷವೂ ಸಂಸಾರ ಮಾಡಲ್ಲ. ಯಾವುದೇ ಕಾರಣಕ್ಕೂ ವಿರಾಜ್, ವೈಷ್ಣವಿ ಗೌಡ ಅವರನ್ನು ಬಾಳಸಲ್ಲ. ಅವರಿಬ್ಬರು ಡೈವೋರ್ಸ್ ತೆಗೆಕೊಳ್ಳೋದು ಗ್ಯಾರಂಟಿ ಎಂದಿದ್ದಾರೆ.

ಮುಂದೆಂದೋ ಅವರ ಲೈಫ್ ಹಾಳಾಗುವ ಬದಲು ಈಗಲೇ ಮದುವೆ ನಿಂತು ಹೋಗಲಿ. ನಟಿ ವೈಷ್ಣವಿ ಗೌಡ (Vaishnavi Gowda) ಬದುಕು ಅಲ್ಲೋಲ-ಕಲ್ಲೋಲ ಆಗಬಾರದು. ನಾವು ಇಷ್ಟು ಹೇಳಿದ ಮೇಲೂ ಕೂಡ ವೈಷ್ಣವಿ ಹಾಗೂ ಅವರ ಕುಟುಂಬಸ್ಥರು ವಿದ್ಯಾಭರಣ್​ (Vidyabharan K S) ಕಡೆ ಮಾತನಾಡಿದರೆ ನಾವು ತಾನೇ ಏನು ಮಾಡುವುದಕ್ಕೆ ಆಗುತ್ತೆ? ಯಾರಾದರೂ ಹಾಳಾಗಿ ಹೋಗಲಿ ಅಂತ ಸುಮ್ಮನಾಗುತ್ತೇವೆ ಎಂದು ಆ ಇಬ್ಬರು ಹೆಣ್ಣು ಮಕ್ಕಳು ಹೇಳುತ್ತಿದ್ದಾರೆ. ಆದರೆ, ಇದರಲ್ಲಿ ಎಷ್ಟು ಸತ್ಯ? ಎಷ್ಟು ಮಿತ್ಯ? ಎಂಬುದೇ ಇದೀಗ ಕಾಡುತ್ತಿರುವ ದೊಡ್ಡ ಪ್ರಶ್ನೆ.

ಆಡಿಯೋ ಬೆನ್ನಲ್ಲೇ ವೈಷ್ಣವಿ ಇನ್​ಸ್ಟಾ ಸ್ಟೋರಿ

ಈ ವಿವಾದದ ಬೆನ್ನಲ್ಲೇ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ನಿಶ್ಚಿತಾರ್ಥ ಮುರಿದುಕೊಂಡಿರುವ ಬಗ್ಗೆ ವೈಷ್ಣವಿ ಗೌಡ ತಿಳಿಸಿದ್ದಾರೆ. ಅಲ್ಲದೆ. ಈ ವಿಚಾರವನ್ನು ಮತ್ತಷ್ಟು ಎಳೆಯಬೇಡಿ ಎಂದು ಮಾಧ್ಯಮಗಳ ಬಳಿ ಮನವಿ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net