ನನ್ನ ಕೇಳದೆ ಹೇಗೆ ಮಾಡ್ತೀರಿ? ... ಶಂಕರ್‌ಗೆ ರವಿಚಂದ್ರನ್ ಪ್ರಶ್ನೆ

Anniyan - Final
Published on

ಚೆನ್ನೈ: ಕಾಲಿವುಡ್‌ನ ಜನಪ್ರಿಯ ನಿರ್ದೇಶಕ ಶಂಕರ್, ತಮ್ಮ ‘ಅನ್ನಿಯನ್’ ಚಿತ್ರವನ್ನು ಹಿಂದಿಗೆ ರಣವೀರ್ ಸಿಂಗ್ ಅಭಿನಯದಲ್ಲಿ ರೀಮೇಕ್ ಮಾಡುವುದಕ್ಕೆ ಹೊರಟಿರುವ ಸುದ್ದಿ ಗೊತ್ತೇ ಇದೆ. ಈ ಕುರಿತು ಮೂಲ ಚಿತ್ರದ ನಿರ್ಮಾಪಕ ಆಸ್ಕರ್ ಫಿಲಂಸ್‌ನ ರವಿಚಂದ್ರನ್ ತಗಾದೆ ತೆಗೆದಿದ್ದು, ಕಥೆಗಳ ಹಕ್ಕುಗಳು ತಮ್ಮ ಬಳಿ ಇರುವಾಗ, ಅದನ್ನು ರೀಮೇಕ್ ಮಾಡುವುದಕ್ಕೆ ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ರವಿಚಂದ್ರನ್, ‘‘ಅನ್ನಿಯನ್’ ಚಿತ್ರವನ್ನು ಶಂಕರ್, ಹಿಂದಿಗೆ ರೀಮೇಕ್ ಮಾಡುತ್ತಿರುವ ವಿಷಯ ಕೇಳಿ ಶಾಕ್ ಆಯಿತು. ಆ ಚಿತ್ರದ ಹಕ್ಕುಗಳನ್ನು ನಾನು ಖ್ಯಾತ ಲೇಖಕರಾದ ಸುಜಾತ ಅವರಿಂದ ಅಧಿಕೃತವಾಗಿ ಪಡೆದಿದ್ದೇನೆ. ಅದಕ್ಕಾಗಿ ಅವರಿಗೆ ಸೂಕ್ತ ಸಂಭಾವನೆಯನ್ನೂ ಕೊಟ್ಟಿದ್ದೇನೆ. ಆ ಹಕ್ಕುಗಳು ಇದೀಗ ನನ್ನ ಹೆಸರಿನಲ್ಲಿದ್ದು, ನನ್ನ ಅನುಮತಿ ಇಲ್ಲದೆ, ಇನ್ನೊಂದು ಭಾಷೆಯಲ್ಲಿ ಮಾಡುವುದು ಅನೈತಿಕ’ ಎಂದು ಹೇಳಿದ್ದಾರೆ.

‘ಬಾಯ್ಸ’ ಎಂಬ ಚಿತ್ರ ಮಾಡಿ ಸೋತು ಸುಣ್ಣವಾಗಿದ್ದ ಶಂಕರ್‌ಗೆ ‘ಅನ್ನಿಯನ್’ನಂಥ ಚಿತ್ರವನ್ನು ನಿರ್ದೇಶಿಸುವುದಕ್ಕೆ ಅವಕಾಶ ಮಾಡಿಕೊಟ್ಟೆ ಎಂದು ಹೇಳಿಕೊಂಡಿರುವ ರವಿಚಂದ್ರನ್, ‘ನಾನು ಈ ಹಿಂದೆ ಮಾಡಿದ ಉಪಕಾರವನ್ನು ಮರೆತು, ಅನುಮತಿಯೇ ಇಲ್ಲದೆ, ಹಿಂದಿಯಲ್ಲಿ ಚಿತ್ರ ಮಾಡುವುದಕ್ಕೆ ಮನಸ್ಸು ಹೇಗೆ ಬಂತು’ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಹಿಂದಿಯಲ್ಲಿ ‘ಅನ್ನಿಯನ್’ ಚಿತ್ರವನ್ನು ರೀಮೇಕ್ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಹೇಳಿರುವ ಅವರು, ಇದೇ ರೀತಿ ಮುಂದುವರೆದರೆ, ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net