

ಬೆಂಗಳೂರು: ‘ಹಿಂದೆ ಮೂರು ಆರ್ ಬಂದಾಗ ಯಾರೂ ಕೇಳಲಿಲ್ಲ. ಈಗ ಒಂದು ‘ಆರ್’ ಬಗ್ಗೆ ಎಷ್ಟು ಕೇಳ್ತಿದ್ದೀರಾ ನೋಡಿ ...’ ಎಂದು ನಕ್ಕರು ಸುದೀಪ್.
ಅವರು ಹಾಗೆ ಹೇಳುವುದಕ್ಕೂ ಕಾರಣವಿದೆ. ಉಪೇಂದ್ರ ಅಭಿನಯದಲ್ಲಿ ರಾಮ್ೋಪಾಲ್ ವರ್ಮ ‘ಐ ಆಮ್ ಆರ್’ ಎಂಬ ಚಿತ್ರ ನಿರ್ದೇಶಿಸುತ್ತಿರುವ ವಿಷಯ ಗೊತ್ತೇ ಇದೆ. ಇಷ್ಟಕ್ಕೂ ‘ಆರ್’ ಎಂದರೇನು? ಎಂಬ ಪ್ರಶ್ನೆ ಸಹಜ. ಈ ಪ್ರಶ್ನೆ ಚಿತ್ರದ ಶೀರ್ಷಿಕೆ ಬಿಡುಗಡೆ ಸಮಾರಂಭದಲ್ಲೂ ಎದುರಾಯಿತು. ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದು ಶೀರ್ಷಿಕೆ ಬಿಡುಗಡೆ ಮಾಡಿ ಈ ಬಗ್ಗೆ ಮಾತನಾಡಿದ ಸುದೀಪ್, ‘ಆರ್ ಅಂದರೆ ರಿಯಲ್ ಸ್ಟಾರ್, ಆರ್ ಅಂದರೆ ರಾಮ್ೋಪಾಲ್ ವರ್ಮ ಅಂತ ಇರಬೇಕು’ ಎಂದರು.
‘ಈ ಸಿನಿಮಾದಲ್ಲಿ ನಾನೇಕೆ ಇಲ್ಲ ಅಂತನಿಸುತ್ತಿದೆ. ನಾನು ಹೀರೋ ಆಗಲು ಉಪೇಂದ್ರ ಅವರೇ ಕಾರಣ. ನಿರ್ದೇಶಕ ಆಗಬೇಕೆಂದಿದ್ದವನಿಗೆ ನಾಯಕನಾಗಲು ಪ್ರೇರೇಪಿಸಿದ್ದೇ ಅವರು. ಇನ್ನು ನನ್ನನ್ನು ಮುಂಬೈಗೆ ಕರೆದುಕೊಂಡು ಹೋಗಿ ಅಲ್ಲಿ ಸಿನಿಮಾ ಪಯಣ ಆರಂಭಿಸಿದ್ದು ಆರ್ಜಿವಿ. ಅವರಿಬ್ಬರ ಜೋಡಿಯಲ್ಲಿ ಉತ್ತಮ ಚಿತ್ರ ಬರುವುದು ಖಂಡಿತಾ’ ಎಂದರು ಸುದೀಪ್.
ನಿರ್ದೇಶಕ ಆರ್ಜಿವಿ ಸಹ ಅದೇ ಮಾತು ಹೇಳಿದರು. ‘ನಮ್ಮಿಬ್ಬರಿಂದ ಉತ್ತಮ ಸಿನಿಮಾ ಬರಲಿದೆ. ‘ಆರ್’ ಅಂದರೆ ಏನು ಎಂದು ಟ್ರೇಲರ್ ಬಿಡುಗಡೆ ಸಮಯದಲ್ಲಿ ಹೇಳುತ್ತೇನೆ. ಉಪೇಂದ್ರ ಅವರ ಜತೆಗೆ ಕೆಲಸ ಮಾಡಲು ಖುಷಿಯಾಗುತ್ತಿದೆ’ ಎಂದರು.
ಆರ್ಜಿವಿ ನಿರ್ದೇಶನದ ‘ಶಿವ’ ನೋಡಿ, ‘ಓಂ ಮಾಡಬೇಕೋ, ಬೇಡವೋ ಎಂದು ಉಪೇಂದ್ರ ಯೋಚಿಸಿದ್ದರಂತೆ. ಅಂತಹ ಒಳ್ಳೊಳ್ಳೆಯ ಚಿತ್ರಗಳನ್ನು ನೀಡಿದವರ ಜತೆಗೆ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ. ನೈಜಘಟನೆ ಆಧರಿಸಿದ ಚಿತ್ರವಿದು’ ಎಂದರು ಉಪೇಂದ್ರ. ಈ ಚಿತ್ರವನ್ನು ದಾವಣಗೆರೆಯ ರಾಜ್ ಯಜಮಾನ್ ನಿರ್ವಿುಸುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.