

ಬೆಂಗಳೂರು: ‘ರಾಮ ರಾಮಾ ರೇ’ ಮತ್ತು ‘ಒಂದಲ್ಲ ಎರಡಲ್ಲ’ ಖ್ಯಾತಿಯ ಸತ್ಯಪ್ರಕಾಶ್ ಯಾವುದೇ ಹೊಸ ಕಥೆ ಬರೆದರೂ, ಬೇರೆ ಏನಾದರೂ ಹೊಸದನ್ನು ಬರಿ ಎಂದು ಅವರ ಚಿತ್ರತಂಡದವರೇ ಹೇಳುತ್ತಿದ್ದರಂತೆ. ಬೇರೆ ಅಂದರೆ ಏನು? ಯಾವ ತರಹದ ಸಿನಿಮಾ ಮಾಡೋದು? ಎಂದು ತಲೆಗೆ ಹುಳ ಬಿಟ್ಟುಕೊಂಡಾಗಲೇ ಅವರಿಗೆ ‘ಅನ್ಲಾಕ್ ರಾಘವ’ ಚಿತ್ರದ ಕಥೆ ಹೊಳೆದಿದ್ದು. ಕೆಲವೇ ದಿನಗಳ ಹಿಂದೆ ಮಿಲಿಂದ್ ಮತ್ತು ರಚೆಲ್ ಡೇವಿಡ್ ಅಭಿನಯದಲ್ಲಿ ದೀಪಕ್ ಮಧುವನಹಳ್ಳಿ ಒಂದು ಚಿತ್ರ ನಿರ್ದೇಶಿಸುತ್ತಿದ್ದಾರೆ, ಆ ಚಿತ್ರಕ್ಕೆ ಸತ್ಯಪ್ರಕಾಶ್ ಕಥೆ ಬರೆಯುವುದರ ಜತೆಗೆ ಮಯೂರ ಪಿಕ್ಚರ್ಸ್ನ ಮಂಜುನಾಥ್ ಜತೆಗೆ ಸೇರಿಕೊಂಡು ನಿರ್ಮಾಣ ಮಾಡುತ್ತಿದ್ದಾರೆ ಎಂದು ಓದಿದ್ದು ನೆನಪಿರಬಹುದು. ಈಗ ಆ ಚಿತ್ರಕ್ಕೆ ‘ಅನ್ಲಾಕ್ ರಾಘವ’ ಎಂಬ ಹೆಸರನ್ನು ಇಡಲಾಗಿದೆ. ಇತ್ತೀಚೆಗೆ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಪುನೀತ್ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಇದೊಂದು ರೊಮ್ಯಾಂಟಿಕ್ ಕಾಮಿಡಿ ಎನ್ನುವ ಸತ್ಯ, ‘ಕಮರ್ಷಿಯಲ್ ಚಿತ್ರ ಮಾಡೋಣ ಅಂತ ಶುರು ಮಾಡಿದೆವು. ಇದರಲ್ಲಿ ಪ್ರಯತ್ನಿಸಿರುವ ವಿಷಯಗಳು ಕಮರ್ಷಿಯಲ್ ಆದರೂ, ಹೊಸ ಪ್ರಯತ್ನ ಮಾಡಿದ್ದೇವೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ. ಒಂದು ಪ್ರಯಾಣ ಇರುತ್ತದೆ. ಬೇರೆಬೇರೆ ತರಹದ ಟೆಕ್ನಿಕ್ಗಳನ್ನು ಮಾಡಿದ್ದೇವೆ’ ಎನ್ನುತ್ತಾರೆ.
ಇನ್ನು, ಚಿತ್ರದ ನಾಯಕ ಮಿಲಿಂದ್ ಕುರಿತು ಮಾತನಾಡುವ ಅವರು, ‘ಮಿಲಿಂದ್ಗೆ ದೇವರು ಒಳ್ಳೆಯ ಹೈಟು, ಮುಖ ಕೊಟ್ಟು ಕಳಿಸಿದ್ದಾರೆ. ಮಿಲಿಂದ್ ತಮ್ಮಲ್ಲಿರುವ ಕಲೆಯನ್ನು ಆಚೆ ತೆಗೆಯಬೇಕಷ್ಟೇ ಹೊರತು, ದೇವರನ್ನು ಕೇಳುವಂತದ್ದೇನೂ ಇಲ್ಲ. ಕೇಳಿಕೊಂಡರೆ, ನಿಮ್ಮನ್ನು ನೀವೇ ಕೇಳಿಕೊಳ್ಳಬೇಕು’ ಎನ್ನುತ್ತಾರೆ. ಸತ್ಯ ಅವರು ತನಗೆ ಏನು ಸೂಟ್ ಆಗುತ್ತದೆ ಎಂದು ಅರಿತುಕೊಂಡು ಬರೆದಿದ್ದಾರೆ ಎನ್ನುವ ಮಿಲಿಂದ್, ‘ನಾನು ರಾಘವ ಎನ್ನುವ ಪಾತ್ರ ಮಾಡುತ್ತಿದ್ದೇನೆ. ನಮಗೆಲ್ಲರಿಗೂ ಒಂದಲ್ಲ ಒಂದು ವಿಶೇಷತೆ ಇದ್ದೇ ಇರುತ್ತದೆ. ಯವುದೇ ರೀತಿಯ ಬೀಗ ಓಪನ್ ಮಾಡುವ ಶಕ್ತಿ ನನಗೆ ಈ ಚಿತ್ರದಲ್ಲಿ ಇರುತ್ತದೆ. ಆದರೆ, ಲೈಫ್ ಎಂಬ ಲಾಕ್ ಅಂತ ಬಂದಾಗ ಒಂದಲ್ಲ ಒಂದು ಬಾರಿ ಕಚ್ಚಿಕೊಳ್ಳುತ್ತೇವೆ. ಹಾಗೆ ಕಚ್ಚಿಕೊಂಡಾಗ ಏನೆಲ್ಲ ಆಗುತ್ತದೆ ಎನ್ನುವುದೇ ಕಥೆ’ ಎನ್ನುತ್ತಾರೆ ಮಿಲಿಂದ್. ಇನ್ನು, ರಚೆಲ್ ಡೇವಿಡ್ ಈ ಚಿತ್ರದಲ್ಲಿ ಆರ್ಕಿಯಾಲಜಿಸ್ಟ್ ಪಾತ್ರ ಮಾಡುತ್ತಿದ್ದೇನೆ. 500 ವರ್ಷಗಳ ಹಿಂದಿನ ನಿಧಿ ಕುರಿತ ಕಥೆ ಇದು. ಅದನ್ನು ಹೇಗೆ ಹೊರತೆಗೆಯುತ್ತೇವೆ ಎನ್ನುವುದು ಚಿತ್ರದ ಕಥೆ’ ಎಂದು ಒಂದೆಳೆ ಬಿಚ್ಚಿಡುತ್ತಾರೆ ರಚೆಲ್.