

ಬೆಂಗಳೂರು: ಸ್ಯಾಂಡಲ್ವುಡ್ನ ರಿಯಲ್ ಸ್ಟಾರ್, ನಟ ಉಪೇಂದ್ರ ಅವರ ಬಹುನಿರೀಕ್ಷಿತ 'ಯುಐ' ಚಿತ್ರದ ಟೀಸರ್ ರಿಲೀಸ್ ದಿನಾಂಕ ಇಂದು ಅಧಿಕೃತವಾಗಿ ಪ್ರಕಟಗೊಂಡಿದ್ದು, ನಟನ ಜನ್ಮದಿನಕ್ಕೆ ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ.
ಕಳೆದ ತಿಂಗಳಷ್ಟೇ ಉಪೇಂದ್ರ ಅವರು ತಮ್ಮ ಮುಂಬರುವ ಪ್ಯಾನ್ ಇಂಡಿಯಾ ಚಿತ್ರವಾದ 'ಯುಐ' ಚಿತ್ರದ ಕಿರು ವಿಡಿಯೋ ತುಣುಕನ್ನು ವಿಭಿನ್ನವಾಗಿ ಬಿಡುಗಡೆಗೊಳಿಸಿದ್ದರು. ಈ ಮುಖೇನ ಚಿತ್ರರಸಿಕರಲ್ಲಿ ಮತ್ತು ಅಭಿಮಾನಿಗಳಲ್ಲಿ ಸಾಕಷ್ಟು ಗೊಂದಲ ಮೂಡಿಸಿದ್ದರು. ಸದ್ಯ ಇದೀಗ ಚಿತ್ರದ ಅಧಿಕೃತ ಟೀಸರ್ ಅನ್ನು ಸೆಪ್ಟಂಬರ್ 18 ರಂದು ರಿಲೀಸ್ ಮಾಡಲು ಚಿತ್ರ ತಯಾರಕರು ಮುಂದಾಗಿದ್ದಾರೆ.
ಕಳೆದ ಹಲವು ದಿನಗಳಿಂದ 'ಯುಐ' ಚಿತ್ರದ ಬಗ್ಗೆ ಹೊಸ ಮಾಹಿತಿ ಪಡೆಯಲು ತೀವ್ರ ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇದೀಗ ಟೀಸರ್ ರಿಲೀಸ್ ಡೇಟ್ ಕೇಳಿ ಭಾರೀ ಸಂತಸ ಉಂಟಾಗಿದೆ. ಸೆಪ್ಟೆಂಬರ್ 18, 2023 ರಂದು ಬೆಂಗಳೂರಿನ ಊರ್ವಶಿ ಥಿಯೇಟರ್‌ನಲ್ಲಿ ಮಧ್ಯಾಹ್ನ 3 ಗಂಟೆಗೆ ಆಫ್‌ಲೈನ್ ಪ್ರೀಮಿಯರ್ ಪ್ರದರ್ಶಿಸುವ ಮೂಲಕ ಸಿನಿಮಾದ ಟೀಸರ್ ಅನ್ನು ನಟ ಉಪೇಂದ್ರ ಅನಾವರಣಗೊಳಿಸಲಿದ್ದಾರೆ.
ಲಹರಿ ಫಿಲ್ಮ್ಸ್ ಮತ್ತು ವೀನಸ್ ಎಂಟರ್ಟೈನ್ಮೆಂಟ್ ಬ್ಯಾನರ್‌ನಲ್ಲಿ ಮೂಡಿಬಂದಿರುವ ಚಿತ್ರದ ಬಿಡುಗಡೆಯತ್ತ ಹೆಚ್ಚು ಕಾತರದಿಂದ ಕಾಯುತ್ತಿರುವ ಉಪೇಂದ್ರ ಅಭಿಮಾನಿಗಳು, ಹಲವು ವರ್ಷಗಳ ನಂತರ ಮತ್ತೊಮ್ಮೆ ನಿರ್ದೇಶನಕ್ಕೆ ಮರಳಿರುವ ಡಿಫರೆಂಟ್ ಡೈರೆಕ್ಟರ್ ಈ ಚಿತ್ರದಲ್ಲಿ ಹೇಗೆಲ್ಲಾ ನಿರ್ದೇಶನ ಮಾಡಿರಬಹುದು ಎಂಬ ನಿರೀಕ್ಷಗೆಳನ್ನು ವ್ಯಕ್ತಪಡಿಸಿದ್ದಾರೆ.