ಆಸ್ಪತ್ರೆಯಲ್ಲಿ ಪ್ರಿಯಾಂಕಾ ಉಪೇಂದ್ರ 'ಉಗ್ರಾವತಾರ' ...

Ugragvathara - Final
Published on

ಬೆಂಗಳೂರು: ಪ್ರಿಯಾಂಕಾ ಉಪೇಂದ್ರ ಇತ್ತೀಚಿನ ದಿನಗಳಲ್ಲಿ ಹೆಚ್ಚುಹೆಚ್ಚು ಹಾರರ್​ ಮತ್ತು ಥ್ರಿಲ್ಲರ್​ ಚಿತ್ರಗಳಲ್ಲಿ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಈಗ ಅವರು ಬರೀ ಥ್ರಿಲ್ಲರ್​ ಅಷ್ಟೇ ಅಲ್ಲ, ಆಕ್ಷನ್​ ಥ್ರಿಲ್ಲರ್​ ಚಿತ್ರವೊಂದರಲ್ಲಿ ನಟಿಸಿದ್ದಾರೆ. ಅದೇ 'ಉಗ್ರಾವತಾರ'.

'ಉಗ್ರಾವತಾರ' ಚಿತ್ರವು ಕಳೆದ ವರ್ಷ ಲಾಕ್​ಡೌನ್​ ಮುಗಿದ ಮೇಲೆ ಶುರುವಾಗಿತ್ತು. ಇದೀಗ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿದೆ. ಇತ್ತೀಚೆಗೆ, ಲಕ್ಷೀಪುರದಲ್ಲಿರುವ ರಾಜಲಕ್ಷೀ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್​ನಲ್ಲಿ ಚಿತ್ರಕ್ಕಾಗಿ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆದಿದೆ. ಖಡಕ್ ಇನ್​ಸ್ಪೆಕ್ಟರ್​ ಆಗಿ ಪ್ರಿಯಾಂಕಾ ಉಪೇಂದ್ರ, ವೈದ್ಯರಾಗಿ ಪವಿತ್ರಾ ಲೋಕೇಶ್, ವಿದ್ಯಾರ್ಥಿ ಪಾತ್ರದಲ್ಲಿ ಶೋಭ. ’ಮನಸು ಮಲ್ಲಿಗೆ’ ಚಿತ್ರದ ನಾಯಕ ನಟರಾಜ್ ಮುಂತಾದವರು ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

ನಿರ್ದೇಶಕ ಗುರುಮೂರ್ತಿ ಹೇಳುವಂತೆ ಒಂದು ಕ್ಲೈಮಾಕ್ಸ್ ಫೈಟ್ ಮಾಡಿದರೆ ಕುಂಬಳಕಾಯಿ ಒಡೆಯಬಹುದಂತೆ. ಕ್ಲೈಮ್ಯಾಕ್ಸ್​ ದೃಶ್ಯಗಳ ಚಿತ್ರೀಕರಣಕ್ಕಾಗಿ ನೆಲಮಂಗಲ ಬಳಿ ಇರುವ ರೆಸಾರ್ಟ್‌ದಲ್ಲಿ ಸೆಟ್ ಹಾಕಲಾಗುತ್ತಿದೆ. ಪ್ರಸಕ್ತ ಸಾಮಾಜಿಕ ವಿಷಯಗಳು, ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆ, ಅಪರಾಧ ಜೊತೆಗೆ ಗಂಭೀರ ವಿಷಯಗಳನ್ನು ಸನ್ನಿವೇಶಗಳ ಮೂಲಕ ಹೇಳಲಾಗುತ್ತಿದೆ.

ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಪ್ರಿಯಾಂಕಾ ಉಪೇಂದ್ರ, 'ಮೊದಲ ಬಾರಿ ಇನ್ಸ್‌ಪೆಕ್ಟರ್ ಡ್ರೆಸ್‌ದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಡ್ಯೂಪ್ ಬಳಸದೆ ಫೈಟ್ ಮಾಡಿದ್ದೇನೆ. ಇದಕ್ಕಾಗಿ ತರಬೇತಿ ಪಡೆಯಬೇಕಾಯಿತು. ಮಹಿಳೆಯರ ಮೇಲಿನ ಸಮಸ್ಯೆಗಳನ್ನು ಕಮರ್ಷಿಯಲ್ ರೀತಿಯಲ್ಲಿ ತೋರಿಸಲಾಗುತ್ತಿದೆ. '೧೯೮೦', 'ಲೈಫ್ ಈಸ್ ಬ್ಯೂಟಿಫುಲ್' ರೆಡಿಯಾಗಿದೆ. ಮುಂದೆ ನಮ್ಮದೆ ಪ್ರೊಡಕ್ಷನ್ ಹೌಸ್‌ದಿಂದ ಚಿತ್ರ ನಿರ್ಮಾಣ ಮಾಡುವ ಯೋಜನೆ ಇದೆ' ಎಂದು ಹೇಳಿದರು.

ಚಿತ್ರವನ್ನು ಸತೀಶ್​ ನಿರ್ಮಿಸುತ್ತಿದ್ದು, ಸಿ.ನಂದಕುಮಾರ್ ಈ ಚಿತ್ರದ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net