

ಮುಂಬೈ: ಭಾರತದಲ್ಲಿ ಕರೊನಾ ಎರಡನೇ ಅಲೆಯಿಂದ ಸಾವು-ನೋವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬಾಲಿವುಡ್ನ ಹಲವು ಸೆಲೆಬ್ರಿಟಿಗಳು ತಮ್ಮದೇ ರೀತಿಯಲ್ಲಿ ಕೋವಿಡ್ ಸಂತ್ರಸ್ತರಿಗೆ ಸಹಾಯ ಮಾಡುತ್ತಿದ್ದಾರೆ. ಈ ಮಧ್ಯೆ, ನೀವೇನೂ ಮಾಡುತ್ತಿಲ್ಲ ಎಂದು ಆರೋಪಿಸಿರುವ ನಿವೃತ್ತ ಐಎಎಸ್ ಅಧಿಕಾರಿಗೆ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಸೋಷಿಯಲ್ ಮೀಡಿಯಾದಲ್ಲಿ ತಕ್ಕ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: ಧಾರಾವಾಹಿ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ ಗೋವಾ ಸರ್ಕಾರ
ಕರೊನಾ ಮೊದಲನೇ ಅಲೆಯ ಸಂದರ್ಭದಲ್ಲಿ ಅಕ್ಷಯ್ ಕುಮಾರ್, ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ 25 ಕೋಟಿ ದೇಣಿಗೆ ನೀಡಿದ್ದರು. ಎರಡನೆಯ ಅಲೆ ಹೆಚ್ಚಾದ ಮೇಲೆ ಒಂದಿಷ್ಟು ಹಣ ಸಹಾಯ ಮಾಡುವುದರ ಜತೆಗೆ, 100 ಕಾನ್ಸನ್ಟ್ರೇಟರ್ಗಳನ್ನು ಕೊಟ್ಟಿದ್ದರು. ಆದರೆ, ಇಂಥ ವಿಷಮ ಪರಿಸ್ಥಿತಿಯಲ್ಲಿ ಅಕ್ಷಯ್ ಏನೂ ಮಾಡುತ್ತಿಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದ್ದು, ಈ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ಸೂರ್ಯ ಪ್ರತಾಪ್ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಪ್ರಶ್ನಿಸಿದ್ದಾರೆ.
ಈ ಕುರಿತು ಅಕ್ಷಯ್ ಕುಮಾರ್ ಅವರ ಪತ್ನಿ ಟ್ವಿಂಕಲ್ ಅವರನ್ನು ಪ್ರಶ್ನಿಸಿರುವ ಸಿಂಗ್, ನಿಮ್ಮ ಗಂಡ ಈ ದೇಶದ ಶ್ರೀಮಂತ ನಟರಲ್ಲೊಬ್ಬರು. ಫಂಡ್ರೈಸರ್ ಮಾಡಿ ಹಣ ಸಂಗ್ರಹಿಸುವ ನಾಟಕ ಮಾಡುವ ಬದಲು, ನಿಮ್ಮ ಕುಟುಂಬದವರು ಕೋವಿಡ್ ಸಂತ್ರಸ್ತರಿಗೆ ಒಂದಿಷ್ಟು ಸಹಾಯ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಟ್ವಿಂಕಲ್, ಇತ್ತೀಚೆಗಷ್ಟೇ 100 ಕಾನ್ಸನ್ಟ್ರೇಟರ್ಗಳನ್ನು ಕೊಟ್ಟಿದ್ದೇವೆ. ಅಷ್ಟೇ ಅಲ್ಲ, ಹಲವು ರೀತಿಯಲ್ಲಿ ಸಹಾಯ ಮಾಡುತ್ತಲೇ ಇದ್ದೇವೆ. ಈ ರೀತಿ ಕೊಂಕು ಹುಡುಕುವ ಬದಲು, ಈ ವಿಷಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವುದು ಒಳ್ಳೆಯದು. ಈ ತರಹ ಯೋಚಿಸುವುದಕ್ಕೆ ಸಮಯ ಮತ್ತು ಶ್ರಮ ವ್ಯರ್ಥ ಮಾಡುವ ಬದಲು, ಸಂತ್ರಸ್ತರಿಗೆ ಒಂದಿಷ್ಟು ಸಹಾಯ ಮಾಡುವ ಬಗ್ಗೆ ಎಲ್ಲರೂ ಯೋಚಿಸೋಣ ಎಂದು ಬಾಯಿ ಮುಚ್ಚಿಸಿದ್ದಾರೆ.