

ನವದೆಹಲಿ: ಮಹಿಳೆಗೆ ಹೆರಿಗೆ ಎನ್ನುವುದು ಪುನರ್ಜನ್ಮ ಇದ್ದಂತೆ. ಆದರೆ ಯಾವುದೋ ಕಾರಣಕ್ಕೆ ಮೊದಲ ಮಗುವಿಗೆ ಅನಾಹುತ ಆಗಿಬಿಟ್ಟರೆ ಆ ಹೆಣ್ಣುಜೀವಕ್ಕಾಗುವ ನೋವು ಅಕ್ಷರಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಆ ನೋವಿನ ಸಂಕಟದಲ್ಲಿ ಇರುವಾಗಲೇ ಯಾರಾದರೂ ನಿಮಗೆ ತಕ್ಕ ಶಾಸ್ತಿಯಾಗಿದೆ ಎಂದರೆ ಹೇಗಿರುತ್ತೆ?
ಅಂಥದ್ದೇ ನೋವನ್ನು ಹಂಚಿಕೊಂಡಿದ್ದಾರೆ ಕಿರುತೆರೆ ನಟಿ ಅಂಕಿತಾ ಭಾರ್ಗವ್. ಕಿರುತೆರೆ ನಟ ಕರಣ್ ಪಟೇಲ್ ಅವರನ್ನು ಈಕೆ ವಿವಾಹವಾಗಿದ್ದಾರೆ. 2019ರ ಡಿಸೆಂಬರ್ 14ರಂದು ಈ ದಂಪತಿಗೆ ಮಗಳು ಹುಟ್ಟಿದ್ದಾಳೆ.
ಆದರೆ ಇದಕ್ಕೂ ಮುನ್ನ ಅಂದರೆ 2018ರಲ್ಲಿ ಅಂಕಿತಾರಿಗೆ ಗರ್ಭಪಾತವಾಗಿತ್ತು. ಆ ದಿನಗಳನ್ನು ನೆನೆಸಿಕೊಂಡು ಅವರು ಈ ರೀತಿ ನೋವು ತೋಡಿಕೊಂಡಿದ್ದಾರೆ:
ಅಂದು ನಾನು ಥಾಯ್ಲೆಂಡ್‌ಗೆ ಹೋಗಬೇಕಿತ್ತು. 20 ವಾರಗಳ ಗರ್ಭಿಣಿ ಆಗಿದ್ದೆ. ಸ್ಕ್ಯಾನಿಂಗ್‌ನಲ್ಲಿ ಏನೂ ಸಮಸ್ಯೆ ಇಲ್ಲ ಎಂದೇ ಹೇಳಲಾಗಿತ್ತು. ಆದರೆ ಏನೊಂದು ಮುನ್ಸೂಚನೆ ಇಲ್ಲದೆಯೇ ಗರ್ಭಪಾತ ಆಗಿಹೋಯಿತು. ಕಾರಣ ಮಾತ್ರ ವೈದ್ಯರಿಗೂ ತಿಳಿಯಲಿಲ್ಲ. ಅವಧಿಗಿಂತ ಮುನ್ನವೇ ಭೂಮಿಗೆ ಬಂದ ಮಗುವಿನ ಮುಖ ಮಾತ್ರ ನಾನು ನೋಡಲಾಗಲಿಲ್ಲ.
ಗರ್ಭಪಾತವಾದ ಮೇಲೆ ಜೀವನದಲ್ಲಿ ಎಲ್ಲವೂ ಖಾಲಿ ಖಾಲಿ ಅನುಭವ. ದೇವರನ್ನು ದೂಷಿಸದ ದಿನವೇ ಇಲ್ಲ. ಈ ನೋವನ್ನು ಹೇಗೆ ಸಹಿಸೋದು ಎಂದು ನನಗೆ ಮತ್ತು ಕರಣ್‌ಗೆ ಗೊತ್ತಿರಲಿಲ್ಲ. ನನಗಿಂತ ಹೆಚ್ಚು ನೋವು ಕರಣ್‌ಗೆ ಆಗಿದ್ದರೂ ಅದನ್ನು ಆತ ಹೆಚ್ಚಾಗಿ ತೋರಿಸಿಕೊಳ್ಳುತ್ತಿರಲಿಲ್ಲ. ಅದೆಷ್ಟೋ ದಿನ ರಾತ್ರಿ ನಾವಿಬ್ಬರೂ ಸೇರಿ ಅದೆಷ್ಟು ಅತ್ತಿದ್ದೇವೋ ಗೊತ್ತಿಲ್ಲ. ಟೀವಿ, ಪತ್ರಿಕೆ ಎಲ್ಲಿಯಾದರೂ ಮಗುವಿನ ಮುಖ ಕಂಡರೆ ಇಬ್ಬರಿಗೂ ಧಾರಾಕಾರ ಕಣ್ಣೀರು ಸುರಿಯುತ್ತಿತ್ತು.
ಇದನ್ನೂ ಓದಿ: ನಟ ಸುಶಾಂತ್ ಸಿಂಗ್ ರಜಪೂತ್ ಹಾದಿ ತುಳಿದ 16 ವರ್ಷದ ಟಿಕ್ಟಾಕ್ ನಟಿಯ ದುರಂತ ಅಂತ್ಯ..!
ಆ ಸಮಯದಲ್ಲಿ ಇಡೀ ಜಗತ್ತಿನಲ್ಲಿ ಗರ್ಭಪಾತ ನನಗೆ ಮಾತ್ರ ಆಗಿದೆ ಎಂದೆನಿಸುತ್ತಿತ್ತು. ಆಮೇಲೆ ನನ್ನ ಸುತ್ತಮುತ್ತ ಇದ್ದ 5 ಮಹಿಳೆಯರಗೂ ಇಂತಹದ್ದೇ ಸ್ಥಿತಿ ಬಂದಿತ್ತು ಎಂದು ಗೊತ್ತಾಯ್ತು. ಆಗ ನಾನು ಏಕಾಂಗಿ ಅಲ್ಲ ಎಂದೆನಿಸತೊಡಗಿತು.
ತುಂಬಾ ಬೇಸರವಾಗಿದ್ದ ಸಂಗತಿ ಎಂದರೆ ನನಗೆ ಗರ್ಭಪಾತ ಆಗಿರುವ ಸುದ್ದಿ ಟ್ರೋಲ್ ಆಗಿ, ನಿಮಗೆ ಸರಿಯಾಗಿ ಆಯ್ತು ಎಂದಿದ್ದರು ಕೆಲವರು. ಈ ಕಮೆಂಟ್‌ಗಳನ್ನು ನೋಡಿ ಅದೆಷ್ಟು ಅತ್ತಿದ್ದೇವೋ ಗೊತ್ತಿಲ್ಲ. ಮತ್ತೆ ಮಗು ಆಗುವಿದಲ್ಲವೆ? ನಾನು ಬಂಜೆಯೇ? ಮಗುವನ್ನು ಹೆರುವ, ನೋಡಿಕೊಳ್ಳುವ ಸಾಮರ್ಥ್ಯ ನನಗಿಲ್ಲವಾ? ಎಂದೆಲ್ಲ ಪ್ರಶ್ನೆ ನನ್ನ ತಲೆಯೊಳಗಡೆ ಕೊರೆಯಲಾರಂಭಿಸಿತು. ಯಾಕೆ ನನಗೆ ಹೀಗಾಯ್ತು? ಇದಕ್ಕೆ ಯಾರು ಜವಾಬ್ದಾರಿ? ನನಗೆ ಮತ್ತೆ ಮಕ್ಕಳಾಗತ್ತಾ? ಹೀಗೆ ಹಲವು ಪ್ರಶ್ನೆಗಳು ನನಗಿತ್ತು.
ನಮಗೀಗ ಮಗಳಿದ್ದಾಳೆ. ಮೆಹರ್ ಎಂದು ಹೆಸರಿಟ್ಟಿದ್ದೇವೆ. ಇದರ ಅರ್ಥ ದೇವರ ಆಶೀರ್ವಾದ ಎಂದು. ಅವಳನ್ನು ನನ್ನ ಕೈಯಲ್ಲಿ ಹಿಡಿದುಕೊಂಡಾಗಲೆಲ್ಲ ದೇವರ ಆಶೀರ್ವಾದ ಎಂದಕೊಳ್ಳುತ್ತೇನೆ. ಗರ್ಭಪಾತದ ಬಗ್ಗೆ ನಾನು ಅರ್ಥ ಮಾಡಿಕೊಳ್ಳುವುದೇನೆಂದರೆ ಗರ್ಭಪಾತ ಆಗುವುದು ಸಾಮಾನ್ಯ, ಜೀವನ-ಸಾವು ನಮ್ಮ ಕೈಯಲಿಲ್ಲ, ದೇವರು ಎಲ್ಲ ಸಮಯದಲ್ಲೂ ನಿಷ್ಕರುಣಿಯಾಗಿರೋದಿಲ್ಲ. ಜೀವನದಲ್ಲಿ ಏನಾಗಬೇಕು ಎಂದು ಇರುತ್ತದೆಯೋ ಅದು ಆಗಿಯೇ ಆಗುತ್ತದೆ ಎಂದಿದ್ದಾರೆ ಅಂಕಿತಾ.