

Trisha : ಬಹುಭಾಷಾ ನಟಿ ತ್ರಿಷಾ ಕೃಷ್ಣನ್ ಅವರು ತುಂಬಾ ದುಃಖದಲ್ಲಿದ್ದಾರೆ. ಅದಕ್ಕೆ ಕಾರಣ ಅವರ ಪ್ರೀತಿಯ ಶ್ವಾನ ಕೊನೆಯುಸಿರೆಳೆದಿದೆ. ಈ ಸುದ್ದಿಯನ್ನು ಸ್ವತಃ ತ್ರಿಷಾ ಅವರೇ ತಮ್ಮ ಇನ್ಸ್ಟಾಗ್ರಾಂ ಖಾತೆಯ ಮೂಲಕ ಖಚಿತಪಡಿಸಿದ್ದಾರೆ.
ತ್ರಿಷಾ ಅವರು ತಮ್ಮ ನಾಯಿಯನ್ನು ತುಂಬಾ ಹಚ್ಚಿಕೊಂಡಿದ್ದರು ಮಗನೆಂದೇ ಪರಿಗಣಿಸಿದ್ದರು. ಶೂಟಿಂಗ್ನಿಂದ ಬಿಡುವು ಸಿಕ್ಕಾಗಲೆಲ್ಲ ಪ್ರೀತಿಯ ಶ್ವಾನದೊಟ್ಟಿಗೆ ಸಮಯ ಕಳೆಯುತ್ತಿದ್ದರು. ಆದರೆ, ಕ್ರಿಸ್‌ಮಸ್ ಹಬ್ಬದ ಖುಷಿಯಲ್ಲಿರುವಾಗಲೇ ನೆಚ್ಚಿನ ಶ್ವಾನ ಮೃತಪಟ್ಟಿರುವುದು ತ್ರಿಷಾ ಅವರಿಗೆ ತೀವ್ರ ಆಘಾತವನ್ನು ಉಂಟುಮಾಡಿದೆ. ಈ ಬಗ್ಗೆ ತುಂಬಾ ನೋವಿನಿಂದಲೇ ತ್ರಿಷಾ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ನನ್ನ ಮಗ ಜೋರೋ ಈ ಕ್ರಿಸ್‌ಮಸ್ ದಿನದಂದೇ ತೀರಿಕೊಂಡಿದ್ದಾನೆ. ನನ್ನನ್ನು ಚೆನ್ನಾಗಿ ಬಲ್ಲವರಿಗೆ ಜೋರೋ ನನಗೆ ಎಷ್ಟು ಮುಖ್ಯವೆಂದು ತಿಳಿದಿದೆ. ಅವನ ಸಾವಿನಿಂದ ನನ್ನ ಕುಟುಂಬ ಮತ್ತು ನಾನು ತುಂಬಾ ನೋವಿನಲ್ಲಿದ್ದೇವೆ. ನಾನು ಚೇತರಿಸಿಕೊಳ್ಳಲು ಕೆಲವು ದಿನಗಳು ಬೇಕಾಗುತ್ತದೆ. ಅಲ್ಲಿಯವರೆಗೂ ನಾನು ಯಾರಿಗೂ ಲಭ್ಯವಿರುವುದಿಲ್ಲ ಎಂದು ನಾಯಕಿ ತ್ರಿಷಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಂದಹಾಗೆ ಬಹುಭಾಷಾ ನಟಿ ತ್ರಿಷಾ ಅವರನ್ನು ಪರಿಚಯಿಸುವ ಅಗತ್ಯವಿಲ್ಲ. ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ನಟಿಯಾಗಿರುವ ತ್ರಿಷಾ ಇಳಯದಳಪತಿ ವಿಜಯ್, ಸೂರ್ಯ, ವಿಕ್ರಮ್, ಪ್ರಭಾಸ್, ಚಿರಂಜೀವಿ, ಅಜಿತ್ ಹಾಗೂ ಸಿಂಬು ಸೇರಿದಂತೆ ಸ್ಟಾರ್ ನಟರ ಜೊತೆ ಅಭಿನಯಿಸಿದ್ದಾರೆ. ಕನ್ನಡದಲ್ಲೂ ದಿವಂಗತ ನಟ ಪುನೀತ್ ರಾಜ್ಕುಮಾರ್ ಅಭಿನಯದ ಪವರ್ಸ್ಟಾರ್ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.
ಕೊನೆಯದಾಗಿ ಬಿಡುಗಡೆಯಾದ ಅವರ ನಟನೆಯ ಪೊನ್ನಿಯನ್ ಸೆಲ್ವನ್ ಮತ್ತು ಲಿಯೋ ಸಿನಿಮಾ ಉತ್ತಮ ಯಶಸ್ಸು ಗಳಿಸಿತು. ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ತ್ರಿಷಾ ಬಿಜಿಯಾಗಿದ್ದಾರೆ. ಕಳೆದ ಸೆ.5ರಂದು ಬಿಡುಗಡೆಯಾದ ವಿಜಯ್ ನಟನೆಯ ಗೋಟ್ ಸಿನಿಮಾದ ಹಾಡೊಂದರಲ್ಲಿ ಅತಿಥಿ ಪಾತ್ರದಲ್ಲಿ ಸೊಂಟ ಬಳುಕಿಸಿದ್ದರು. (ಏಜೆನ್ಸೀಸ್)