ಅವಕಾಶಕ್ಕಾಗಿ ತ್ರಿಷಾ ಸುಮ್ಮನಿದ್ದರು! ಸೌತ್​ ಬ್ಯೂಟಿ ವಿರುದ್ಧ ಗಂಭೀರ ಆರೋಪ ಮಾಡಿದ ನಟಿ ಮೀರಾ ಮಿಥುನ್​

Trisha Meera Mithun
Published on

ಚೆನ್ನೈ: ಕಾಲಿವುಡ್​ನಲ್ಲಿ ತಮ್ಮ ನಟನೆಗಿಂತ ಮಾತುಗಳಿಂದಲೇ ಸಿಕ್ಕಾಪಟ್ಟೆ ಸುದ್ದಿಯಾಗುವ ನಟಿ ಯಾರೆಂದರೆ ಅದು ಮೀರಾ ಮಿಥುನ್​. ವಿವಾದಿತ ನಟಿ ಎಂದೇ ಖ್ಯಾತಿ ಪಡೆದಿರುವ ಮೀರಾ, ಒಂದಿಷ್ಟು ಚಿತ್ರಗಳಲ್ಲಿ ನಟಿಸಿ ಸೋಲುಂಡಿದ್ದಾರೆ. ಆದರೆ, ಬರೀ ಮಾತು ಮತ್ತು ಜಗಳಗಳಿಂದಲೇ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಕಾಲಿವುಡ್​ನ ಜನಪ್ರಿಯ ಸ್ಟಾರ್​ಗಳ ಕಾಲೆಳೆಯುವುದನ್ನು ಮಾತ್ರ ರೂಢಿ ಮಾಡಿಕೊಂಡಿದ್ದಾರೆ.

ಇದೀಗ ಮೀರಾ ಅವರು ಟಾಲಿವುಡ್​ನ ಸ್ಟಾರ್​ ನಟಿ ತ್ರಿಷಾ ಅವರ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮೀರಾ ಆಡಿರುವು ಮಾತುಗಳು ತ್ರಿಷಾ ಅವರ ಅಭಿಮಾನಿಗಳನ್ನು ಕೆರಳಿಸಿದೆ.

ಮೀರಾ ಹೇಳಿದ್ದೇನು?

ತ್ರಿಷಾ ಅವರು ನಾಯಕಿಯಾಗಿ ನಟಿಸಿದ ಸಿನಿಮಾದಲ್ಲಿ ನಾನು ಸಣ್ಣ ಪಾತ್ರವೊಂದನ್ನು ಮಾಡಿದ್ದೇನೆ. ಆಗ ಶೂಟಿಂಗ್​ ಸಮಯದಲ್ಲಿ ಚಿತ್ರದ ನಾಯಕ ನಟ ತ್ರಿಷಾ ಜತೆ ಅಸಭ್ಯವಾಗಿ ವರ್ತಿಸಿದರು. ಮುಟ್ಟಬಾರದ ಜಾಗವೆಲ್ಲ ಮುಟ್ಟಿದರು. ಇದು ನೋಡಲು ತುಂಬಾ ಮುಜುಗರಪಡುವಂತಿತ್ತು. ಕೆಟ್ಟ ಉದ್ದೇಶದಿಂದ ಆ ನಟ ಮುಟ್ಟಿದರೂ ಅದನ್ನು ವಿರೋಧಿಸದೇ ತ್ರಿಷಾ ಮಾತ್ರ ಶಾಂತವಾಗಿದ್ದರು ಎಂದು ಮೀರಾ ಆರೋಪ ಮಾಡಿದ್ದಾರೆ.

ಸಿನಿಮಾ ಅವಕಾಶ ಕಳೆದುಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ತ್ರಿಷಾ ನಟನ ಅಶ್ಲೀಲ ವರ್ತನೆಯನ್ನು ಸಹಿಸಿಕೊಂಡರು. ಆ ಸಮಯದಲ್ಲಿ ತ್ರಿಷಾ ಅವರು ಟಾಪ್​ ಹೀರೋಯಿನ್​ ಆಗಿದ್ದರು. ಅವರಿಗೆ ಇಂತಹ ಪರಿಸ್ಥಿತಿ ಎದುರಾಗಿರುವಾಗ ಇನ್ನೂ ಸಾಮಾನ್ಯ ನಟಿಯರ ಸ್ಥಿತಿ ಏನಾಗಬೇಡ ಎಂದು ಮೀರಾ ಹೇಳಿದ್ದಾರೆ.

ಮೀರಾ ಅವರ ಈ ಹೇಳಿಕೆ ಎಷ್ಟು ಸತ್ಯವೋ ತಿಳಿದಿಲ್ಲ. ಏಕೆಂದರೆ, ಈ ಹಿಂದೆಯೂ ಅನೇಕ ನಟ-ನಟಿಯರ ವಿರುದ್ಧ ಅಶ್ಲೀಲವಾಗಿ ಮಾತನಾಡಿ ವಿವಾದವನ್ನು ಸೃಷ್ಟಿಸಿದ ಅಪಖ್ಯಾತಿಯನ್ನು ಮೀರಾ ಹೊಂದಿದ್ದಾರೆ. ಈಗಾಗಲೇ ರಜನಿಕಾಂತ್​, ವಿಜಯ್​, ಕಮಲ್​ ಹಾಸನ್​, ಸೂರ್ಯ, ಜ್ಯೋತಿಕಾ ಸೇರಿದಂತೆ ಹಲವರ ವಿರುದ್ಧ ಮಾತನಾಡಿದ್ದಾರೆ. ಹೀಗಾಗಿ ಅವರ ಮಾತಿಗೆ ಕೆಲವರು ಹೆಚ್ಚಿನ ಮಹತ್ವವನ್ನು ನೀಡುವುದಿಲ್ಲ. ಇನ್ನು ತ್ರಿಷಾ ಅಭಿಮಾನಿಗಳು ಮಾತ್ರ ಮೀರಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ಹೊರಹಾಕುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net