

| ಮಂಜು ಕೊಟಗುಣಸಿ ಬೆಂಗಳೂರು
407 ಗಾಡಿಯೊಂದಕ್ಕೆ ಎಮ್ಮೆ ಮುಖ ಸಿಕ್ಕಿಸಿಕೊಂಡು, ಮೈ ಹುರಿಗೊಳಿಸಿದ ಅಜಾನುಬಾಹುವೊಬ್ಬ ಗೊತ್ತಾಗದ ಭಾಷೆಯಲ್ಲಿಯೇ ಮಾತನಾಡುತ್ತ ಸಂಚರಿಸುತ್ತಿರುತ್ತಾನೆ. ಎದುರಿಗೆ ಸಿಕ್ಕವರಿಗೆ ಅವನದೇ ರೀತಿಯಲ್ಲಿ ಪರೀಕ್ಷೆಯೊಡ್ಡುತ್ತಿರುತ್ತಾನೆ. ಆತನ ಉದ್ದೇಶ ಏನು? ಆತನ ಬೇಕು ಬೇಡಗಳೇನು? ‘ತ್ರಿಕೋನ’ದಲ್ಲಿ ಅದಕ್ಕೆ ಉತ್ತರ ಹುಡುಕುವುದು ಕಷ್ಟಸಾಧ್ಯ! ಆದರೆ, ಸೂಕ್ಷ್ಮವಾಗಿ ಗಮನಿಸಿದರೆ ಕರ್ಮದ ಫಲದಾತನಂತೆ, ಕಾಲನ ಮತ್ತೊಂದು ಮುಖದಂತೆಯೂ ಆತನನ್ನು ಬಿಂಬಿಸಿದ್ದಾರೆ ನಿರ್ದೇಶಕರು. ಮೂರು ವಿಭಿನ್ನ ಮನಸ್ಥಿತಿಗಳು ಕಾಲನ ಕೈಗೆ ಸಿಲುಕಿದಾಗ ಘಟಿಸುವ ಏರಿಳಿತಗಳೇ ‘ತ್ರಿಕೋನ’ದ ಮೂಲಧಾತು. ಇಲ್ಲಿ ಆ ಮೂರು ಮನಸ್ಥಿತಿಗಳನ್ನು ಗುಣಾವಗುಣಗಳ ಆಧಾರದ ಮೇಲೆ ತೆರೆಮೇಲೆ ಪ್ರಸ್ತುತಪಡಿಸಿದ್ದಾರೆ ನಿರ್ದೇಶಕ ಚಂದ್ರಕಾಂತ್. ಅನುಭವ ಮತ್ತು ತಾಳ್ಮೆ ಒಂದು ಮನಸ್ಥಿತಿಯಾದರೆ, ಅಹಂ ಇಲ್ಲಿ ಎರಡನೇ ಮನಸ್ಥಿತಿಯಂತೆ ಕಾಣಿಸುತ್ತದೆ. ಮೂರನೆಯದು ಶಕ್ತಿಯ ರೂಪದಲ್ಲಿ ತೋರಿಸಿದ್ದಾರೆ. ಬೆಂಗಳೂರಿನಿಂದ ಮಂಗಳೂರು ತಲುಪುವ ಹಾದಿಯಲ್ಲಿಯೇ ಈ ಮನಸ್ಥಿತಿಗಳಿಗೆ ಸತ್ವಪರೀಕ್ಷೆ ಏರ್ಪಡುತ್ತದೆ. ಅದೇನು ಎಂಬುದಕ್ಕೆ ಚಿತ್ರದಲ್ಲಿ ಉತ್ತರವಿದೆ.
ನಿರ್ದೇಶಕರು ಇಲ್ಲಿ ಮೂರು ಭಾಗಗಳಲ್ಲಿ ಕಥನ ಹೇಳುವ ತಂತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆರಂಭದಲ್ಲಿನ ಪ್ರಯಾಣದ ರಸಗವಳ ನಿಧಾನಕ್ಕೆ ಪ್ರಯಾಸ ಎನಿಸುತ್ತ ಸಾಗಿದರೆ, ಲಯದಲ್ಲಿಯೂ ಹಾದಿ ತಪು್ಪತ್ತದೆ. ತಾಳ್ಮೆಯಿಂದ ಗೆದ್ದವ, ಅಹಂನಿಂದ ಸೋತವ, ಶಕ್ತಿಯಿಂದ ಸತ್ತವ ಎಂಬ ತಾತ್ಪರ್ಯ ನೋಡುಗನಿಗೆ ಮೊದಲೇ ದಕ್ಕುವುದರಿಂದ ಪ್ರಯಾಣದ ಹಾದಿ ರೋಚಕವೆನಿಸದೆ ನೀರಸವಾಗಿಯೇ ಸಾಗುತ್ತದೆ. ಮುಂದೇನು ಎಂಬ ಊಹೆಗೂ ಇಲ್ಲಿ ಜಾಗ ಕಲ್ಪಿಸಿರುವುದರಿಂದ ಕೌತುಕಕ್ಕೆ ಹೆಚ್ಚೇನೂ ಜಾಗವಿಲ್ಲ. ಹಾಗಾಗಿಯೇ ಪ್ರೇಕ್ಷಕ ಎಲ್ಲವನ್ನೂ ಸಲೀಸಾಗಿಯೇ ಊಹಿಸಬಲ್ಲ ಮತ್ತು ಆ ಊಹೆಗೆ ಸರಿಯಾಗಿ ಚಿತ್ರ ರೂಪುಗೊಂಡಿದೆ. ಹಿರಿಯ ನಟರಾದ ಸುರೇಶ್ ಹೆಬ್ಳಿಕರ್, ಜೂಲಿ ಲಕ್ಷ್ಮೀ ಅವರ ಪಾತ್ರ ಪೋಷಣೆಯಲ್ಲಿ ಪ್ರಬುದ್ಧತೆಯಿದೆ. ಅಚ್ಯುತ್ ಕುಮಾರ್, ಸುಧಾರಾಣಿ ಕೊಟ್ಟ ಪಾತ್ರದಲ್ಲಿ ಜೀವಿಸಿದ್ದಾರೆ. ಸಾಧು ಕೋಕಿಲ ಕಾಮಿಡಿಯ ಕಿಕ್ ಇಲ್ಲಿಯೂ ವರ್ಕೌಟ್ ಆಗಿದೆ. ಅಭಿನಯಕ್ಕೆ ಪ್ರಾಧಾನ್ಯತೆ ಇಲ್ಲದಿದ್ದರೂ ಚಲ್ ಚಲ್ ಚುಲಾ ಎನ್ನುತ್ತಲೇ ಗತ್ತಿನ ಮೂಲಕವೇ ಗಮನ ಸೆಳೆಯುತ್ತಾರೆ ಮಾರುತೇಶ. ರಾಜವೀರ ಅವರ ಆಕ್ಷನ್ ಪೂರ್ಣಾಂಕ ಗಿಟ್ಟಿಸಿಕೊಳ್ಳುತ್ತದೆ.